ಭಾಲ್ಕಿ: ಬೀದರನಲ್ಲಿ ಕೊರೊನಾ ವೈರಸ್ ರೋಗಾಣುಗಳ ಪರೀಕ್ಷಾ ಕೇಂದ್ರ ಸ್ಥಾಪಿಸುವುದು ಅತ್ಯಂತ ಜರೂರ ಆಗಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ, ಶುಕ್ರವಾರ ಕೋವಿಡ್-19 ತಡೆಗೆ ಕರೆದ ಅಧಿಕಾರಿಗಳ ತುರ್ತು ಸಭೆಯಲ್ಲಿ ಅವರು ಮಾತನಾಡಿದರು. ಊರು ಕೊಳ್ಳೆ ಹೊಡೆದ ನಂತರ ದಿಂಡಿ ಬಾಗಿಲೂ ಹಾಕುವುದಕ್ಕಿಂತಲೂ ಮೊದಲೇ ಸುರಕ್ಷಿತವಾಗಿರುವುದು ನಮ್ಮೆಲ್ಲರ ಕರ್ತವ್ಯ. ಹೀಗಾಗಿ ಬೀದರನಲ್ಲಿ ಮೊದಲಿಗೆ ಕೊರೊನಾ ವೈರಸ್ ಪರೀಕ್ಷಾ ಕೇಂದ್ರ ಸ್ಥಾಪಿಸಬೇಕು ಎಂದು ಸರ್ಕಾರಕ್ಕೆ ಈಗಾಗಲೇ ಒತ್ತಾಯಿಸಿದ್ದೇನೆ.
ಬೀದರನಲ್ಲಿ 10ಕ್ಕಿಂತಲೂ ಹೆಚ್ಚಿನ ರೋಗಿಗಳು ಪತ್ತೆಯಾಗಿದ್ದಾರೆ. ಹೀಗಾಗಿ ಇಲ್ಲಿ ಪರೀಕ್ಷಾ ಕೇಂದ್ರ ಸ್ಥಾಪಿಸುವುದು ಅತ್ಯವಶ್ಯ ಎಂದರು. ಸರ್ಕಾರಿ ಅಧಿಕಾರಿಗಳ ರಕ್ಷಣೆ ಎಲ್ಲರ ಕರ್ತವ್ಯ. ಕೋವಿಡ್-19 ವಿರುದ್ಧ ಹೋರಾಡುವವರಿಗೆ ಅಸುರಕ್ಷತೆ ಕಂಡು ಬಂದರೆ ವ್ಯವಸ್ಥೆ ಹಾಳಾಗುತ್ತದೆ. ಹೀಗಾಗಿ ಅವರ ರಕ್ಷಣೆಗಾಗಿ ಎಲ್ಲ ತರಹದ ವ್ಯವಸ್ಥೆ ಮಾಡಬೇಕಿದೆ. ಒಂದು ವೇಳೆ ಸರ್ಕಾರ ಅವರ ಸುರಕ್ಷತೆಗಾಗಿ ಪರಿಕರ ಒದಗಿಸದಿದ್ದಲ್ಲಿ ನನ್ನ ವೈಯಕ್ತಿಕ ಹಣದಲ್ಲಿ ಸುರಕ್ಷತೆ ಕಿಟ್ ನೀಡುತ್ತೇನೆ. ನಾಳೆಯವರೆಗೆ ಈ ನಿಟ್ಟಿನಲ್ಲಿ ಹೋರಾಡುವ ವೈದ್ಯರು ತಮ್ಮ ಬೇಡಿಕೆ ಪಟ್ಟಿ ನನಗೆ ಕೊಡಬೇಕು ಎಂದು ತಿಳಿಸಿದರು.
ಕೊರೊನಾ ವೈರಾಣು ಹೋರಾಟದಲ್ಲಿ ಯಾರೊಬ್ಬರೂ ಹಸಿವೆಯಿಂದ ಬಳಲ ಬಾರದು. ತಾಲೂಕಿನಲ್ಲಿ ಒಟ್ಟು 7069 ಅಂತ್ಯೋದಯ ಕಾರ್ಡ್ ಮತ್ತು 52703 ಬಿಪಿಎಲ್ ಕಾರ್ಡ್ ಹೊಂದಿದವರಿದ್ದಾರೆ. ಇವರೆಲ್ಲರಿಗೂ ಸರ್ಕಾರದ ನಿಯಮದ ಪ್ರಕಾರ ಆಹಾರ ಧಾನ್ಯ ತಕ್ಷಣವೇ ಒದಗಿಸಬೇಕು ಎಂದು ಆಹಾರ ನೀರಿಕ್ಷಕರಿಗೆ ತಾಕೀತು ಮಾಡಿದರು. ನಂತರ ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳು ತುರ್ತು ಸೇವೆ ಒದಗಿಸಿ ರೈತರಿಗೆ ಸಹಾಯ ಮಾಡಬೇಕು ಎಂದು ತಿಳಿಸಿದರು.
ಕುಡಿಯುವ ನೀರಿಗಾಗಿ ಅ ಧಿಕಾರಿಗಳು ಯಾವುದೇ ಸಬೂಬು ಹೇಳದೆ, ಎಲ್ಲರಿಗೂ ನೀರು ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಶಾಸಕರು ಅಧಿಕಾರಿಗಳಿಗೆ ತಾಕೀತು ಮಾಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ, ಡಿವೈಎಸ್‌ಪಿ ಡಾ| ದೇವರಾಜ.ಬಿ, ತಾಪಂ ಇಒ ಬಸವರಾಜ ನಾಯ್ಕರ ಇದ್ದರು.
ಅಂತ್ಯೋದಯ ಕಾರ್ಡ್‌ಗೆ 70 ಕೆ.ಜಿ ಅಕ್ಕಿ ಹಾಗೂ ಬಿಪಿಎಲ್ ಕಾರ್ಡ್‌ಗೆ ಪ್ರತಿಯೊಬ್ಬರಿಗೆ 10 ಕೆ.ಜಿ ಅಕ್ಕಿ ಮತ್ತು ಪ್ರತಿ ಕಾರ್ಡ್‌ಗೆ 4 ಕೆ.ಜಿ ಗೋದಿ ಉಚಿತವಾಗಿ ನೀಡಲಾಗುತ್ತಿದೆ. ಏ.15 ರೊಳಗೆ ಯಾರಿಗಾದರೂ ಆಹಾರ ಧಾನ್ಯ ತಲುಪದಿದ್ದರೆ ಶಾಸಕರ ಸಹಾಯವಾಣಿ ಸಂಖ್ಯೆ: 9448467122, 9448587511 ಸಂಪರ್ಕಿಸಬೇಕು. ತಕ್ಷಣ ಪರಿಹಾರ ನೀಡಲಾಗುವುದು. ತಾಲೂಕಿನಲ್ಲಿ 10,500 ಕಟ್ಟಡ ಕಾರ್ಮಿಕರಿದ್ದಾರೆ. ಇವರೆಲ್ಲರಿಗೂ ಕೋವಿಡ್-19 ಪರಿಹಾರ ನಿ ಧಿಯಾಗಿ ಪ್ರತಿಯೊಬ್ಬರಿಗೆ ಸರ್ಕಾರಿಂದ 2000 ರೂ. ನೀಡಲಾಗುತ್ತಿದೆ. ಯಾರಿಗಾದರೂ ಈ ಹಣ ಬರದಿದ್ದರೆ ಸಹಾಯವಾಣಿಗೆ ಸಂಪರ್ಕಿಸಬೇಕು.
ಈಶ್ವರ ಖಂಡ್ರೆ, ಶಾಸಕ