ಭಾಲ್ಕಿ: ತಾಲೂಕಿನ ವ್ಯಾಪ್ತಿಯಲ್ಲಿ ಅನ್ನ, ಅಂತ್ಯೋದಯ ಸೇರಿ ಸುಮಾರು 67742 ಕುಟುಂಬದವರು ಬಡತನ ರೇಖೆಗಿಂತ ಕೆಳಗಿದ್ದಾರೆ. ಎಲ್ಲರೂ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ. ಆದರೆ ಲಾಕ್‌ಡೌನ್ ಸಂದರ್ಭದಲ್ಲಿ ಸರಕಾರ ಸಿಎಂ ಅನಿಲ ಭಾಗ್ಯ ಮತ್ತು ಉಜ್ವಲ ಯೋಜನೆಯಡಿ ಸೇರಿ ಕೇವಲ 23,653 ಫಲಾನುಭವಿಗಳಿಗೆ ಮಾತ್ರ ಉಚಿತ ಗ್ಯಾಸ್ ಸಿಲಿಂಡರ್ ನೀಡಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಕುಡಿಯುವ ನೀರು, ಬೆಳೆಹಾನಿ ಹಾಗೂ ಕೋವಿಡ್ 19 ತಡೆ ಕುರಿತು ನಡೆದ ತುರ್ತು ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅನಿಲ ಭಾಗ್ಯ ಉಜ್ವಲ ಯೋಜನೆ ಹೊರತುಪಡಿಸಿ ಸುಮಾರು 40 ಸಾವಿರ ಬಿಪಿಎಲ್ ಕಾರ್ಡ್ ಹೊಂದಿರುವ ಫಲಾನುಭವಿಗಳು ಉಚಿತ ಸಿಲಿಂಡರ್‌ನಿಂದ ವಂಚಿತರಾಗಿದ್ದಾರೆ. ಆದ್ದರಿಂದ ಸರಕಾರ ಕೂಡಲೇ ಬಿಪಿಎಲ್ ಕಾರ್ಡ್ ಅನಿಲ ಸಂಪರ್ಕ ಹೊಂದಿರುವ ಎಲ್ಲ ಫಲಾನುಭವಿಗಳಿಗೂ ಉಚಿತ ಸಿಲಿಂಡರ್ ನೀಡುವ ವ್ಯವಸ್ಥೆ ಮಾಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.
ತಾಲೂಕು ಆಡಳಿತ, ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು ಸೇರಿದಂತೆ ಮುಂತಾದ ಇಲಾಖೆಗಳ ಅಧಿಕಾರಿಗಳ ಅವಿರತ ಸೇವೆ ಪರಿಣಾಮ ಕೋವಿಡ್ 19 ನಿಯಂತ್ರಣದಲ್ಲಿದೆ. ಆದರೂ ಕೂಡ ಕೋವಿಡ್ 19 ತಡೆಗೆ ಇನ್ನು ನಿರ್ದಿಷ್ಟ ಔಷಧ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಆದ್ದರಿಂದ ಈ ಸಾಂಕ್ರಾಮಿಕ ರೋಗ ತಕ್ಷಣಕ್ಕೆ ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣವಿಲ್ಲ. ಇದು ಸೆಪ್ಟೆಂಬರ್ ಅಂತ್ಯದ ವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಆದ್ದರಿಂದ ಎಲ್ಲ ಅಧಿಕಾರಿಗಳು ಇನ್ನಷ್ಟು ಎಚ್ಚರಿಕೆಯಿಂದ ಕೆಲಸ ಮಾಡಿ ಯಾವೊಂದು ಪ್ರಕರಣವೂ ಪಾಸಿಟಿವ್ ಬರದಂತೆ ನೋಡಿಕೊಳ್ಳಬೇಕು. ಯಾರಲ್ಲಾದರೂ ಪ್ರಾಥಮಿಕ ಹಂತದಲ್ಲು ಕೂಡ ಕೆಮ್ಮು, ನೆಗಡಿ, ಕಫ ಕಂಡು ಬಂದರೂ ತಕ್ಷಣ ಅಂತವರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಿ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು. ತಹಶೀಲ್ದಾರ್ ಅಣ್ಣಾರಾವ ಪಾಟೀಲ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ನಾಯಕರ, ಡಿವೈಎಸ್‌ಪಿ ಡಾ|ದೇವರಾಜ ಬಿ. ಇದ್ದರು.