Advertisement
ಪಟ್ಟಣದಲ್ಲಿ ಬಕ್ರೀದ್ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಪಟ್ಟಣದ ಜನಸಂಖೆಯಲ್ಲಿಯ ಶೇ.15ರಷ್ಟಿರುವ ಮುಸ್ಲೀಂ ಸಮುದಾಯದವರು, ತಮ್ಮ ಧರ್ಮ ಗ್ರಂಥ ಕುರಾನ್‌ನ ಅನುಸಾರ ಬಕ್ರೀದ್ ಹಬ್ಬವನ್ನು ಆಚರಿಸುತ್ತಾರೆ. ಸೋಮವಾರ ನಡೆಯಲಿರುವ ಬಕ್ರೀದ್ ಹಬ್ಬದಂದು ಪಟ್ಟಣದ ಎಲ್ಲಾ ಮುಸ್ಲೀಂ ಸಮುದಾಯದವರು ಪಟ್ಟಣದ ಹೊರ ವಲಯದ ಈದ್ಗಾ ಮೈದಾನದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ. ಹಿರಿಯರು, ಕಿರಿಯರು, ಮಕ್ಕಳು ಹೊಸ ಉಡುಗೆ ತೊಟ್ಟು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಮೌಲಿಗಳಿಂದ ಖುತ್ಬಾ (ಪ್ರವಚನ) ಕಾರ್ಯಕ್ರಮ ನಡೆಯುತ್ತದೆ. ನಂತರ ಒಬ್ಬರಿಗೊಬ್ಬರು ಹಬ್ಬದ ಸುಭಾಷಯ ಹೇಳುತ್ತಾ, ನೆಂಟರಿಷ್ಟರನ್ನು ಹಬ್ಬಕ್ಕೆ ಕರೆದು ಹಬ್ಬದ ಊಟ ಮಾಡಿಸುತ್ತಾರೆ. ರಂಜಾನ್ ನಂತರದ ಪ್ರತಿಷ್ಠಿತ ಹಬ್ಬ ಅವರಿಗೆ ಈ ಬಕ್ರೀದ್ ಆಗಿದೆ. ಹೀಗಾಗಿ ಬಕ್ರೀದ್ ಹಬ್ಬದಂದು ಮುಸ್ಲೀಂ ಸಮುದಾಯದವರು ಅತಿಥಿ ದೇವೋಭವ ಎನ್ನುವ ರೀತಿಯಲ್ಲಿ, ತಮ್ಮ ತಮ್ಮ ಮನೆಗೆ ಅತಿಥಿಗಳನ್ನು ಕರೆದು ಹಬ್ಬದ ಊಟ ಬಡಿಸಿ, ಸಂತಸ ವ್ಯಕ್ತಪಡಿಸುತ್ತಾರೆ.
Related Articles
Advertisement
ಮುಸ್ಲೀಂ ಗಣ್ಯರ ಅಭಿಪ್ರಾಯ: ರಕ್ತಮಾಂಸವನ್ನು ದೇವರಿಗೆ ಅರ್ಪಿಸುವುದು ಜಾನುವಾರು ಬಲಿಯ ಉದ್ದೇಶವಲ್ಲ. ಪ್ರವಾದಿ ಇಬ್ರಾಹಿಂ ಅವರ ತ್ಯಾಗದ ಸಂಕೇತವಾಗಿ ಈ ಬಲಿ ಅರ್ಪಿಸಲಾಗುತ್ತದೆ. ಜಾನುವಾರಿನ ಮಾಂಸ, ರಕ್ತ ಅಲ್ಲಾಹನಿಗೆ ತಲುಪುವುದಿಲ್ಲ. ನಮ್ಮ ಧರ್ಮನಿಷ್ಠೆ ಅವನಿಗೆ ಸಲ್ಲುತ್ತದೆ ಎನ್ನುತ್ತಾರೆ ಪುರಸಭೆ ಮಾಜಿ ಸದಸ್ಯ ಮುಸ್ಲೀಂ ಮುಖಂಡ ಸಲೀಮ ಇನಾಮದಾರ.
ಬಕ್ರೀದ್ ಹಬ್ಬದಲ್ಲಿ ಆರ್ಥಿಕವಾಗಿ ಸಬಲರಾಗಿರುವ ಪ್ರತಿಯೊಬ್ಬರೂ ಪ್ರಾಣಿಬಲಿ ನೀಡಬೇಕು. ಬಲಿ ಅರ್ಪಿಸಿದ ಪ್ರಾಣಿಯಿಂದ ಲಭಿಸುವ ಮಾಂಸವನ್ನು ಸಮನಾಗಿ ಮೂರು ಪಾಲು ಮಾಡಿ, ಅದರಲ್ಲಿ ಒಂದು ಅಂಶವನ್ನು ಸ್ವತಃ ನಾವೇ ಬಳಸಿಕೊಂಡು, ಇನ್ನೆರಡು ಪಾಲುಗಳನ್ನು ಸಂಬಂಧಿಕರು ಮತ್ತು ಬಡವರಿಗೆ ಹಂಚುತ್ತೇವೆ. ಹಬ್ಬದೂಟದಿಂದ ಯಾರೂ ವಂಚಿತರಾಗಬಾರದು ಎಂಬ ಮೂಲ ಉದ್ದೇಶ ಇದರಲ್ಲಿ ಅಡಗಿದೆ ಎನ್ನುತ್ತಾರೆ ಮುಸ್ಲೀಂ ಪ್ರಮುಖ ಶೇಖ ಸಾಬೇರ ಪಟೇಲ.ಈ ಹಬ್ಬದ ಮೂಲ ಉದ್ದೇಶ ಏಕದೇವತ್ವದ ಸಂದೇಶಕ್ಕೆ ಬದ್ಧತೆ ತೋರುವುದು. ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವುದು. ಸಹೋದರತೆ ಬೆಳೆಸಿಕೊಳ್ಳುವುದು. ಯಾವುದೇ ತ್ಯಾಗಕ್ಕೂ ಸಿದ್ಧರಾಗಿರುವುದೇ ಆಗಿದೆ ಎನ್ನುತ್ತಾರೆ ಮೌಲ್ವಿ ಮೌಲಾನಾ ಜಲಾಲವೂದ್ದಿನ್.