ಭಾಲ್ಕಿ: ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳನ್ನು ಸ್ವಂತ ಮಕ್ಕಳಷ್ಟೇ ಕಾಳಜಿ ವಹಿಸಿ ಕಾರ್ಯಕರ್ತೆಯರು ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ| ಜಯಶ್ರೀ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಭಾಲ್ಕಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಮಕ್ಕಳ ಹಕ್ಕುಗಳ ಕುರಿತು ಅಂಗನವಾಡಿ ಮೇಲ್ವಿಚಾರಕರು, ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರಿಗಾಗಿ ಮಂಗಳವಾರ ಆಯೋಜಿಸಿದ್ದ ಒಂದು ದಿನದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇದರ ಜತೆಗೆ ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವಲ್ಲಿ ಕಾರ್ಯಕರ್ತೆಯರ ಜವಾಬ್ದಾರಿಯೂ ಹೆಚ್ಚಿದೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆ ಆಗುತ್ತಿರುವುದು ಹಾಗೂ ಮಕ್ಕಳಲ್ಲಿ ಅಪೌಷ್ಟಿಕತೆ ಇರುವುದು ಕಂಡು ಬರುತ್ತಿದೆ. ಕಾರ್ಯಕರ್ತೆಯರು ಅಂಗನವಾಡಿ ಕೇಂದ್ರದ ಮಕ್ಕಳನ್ನು ಸ್ವಂತ ಮಕ್ಕಳಷ್ಟೇ ಕಾಳಜಿ ವಹಿಸಿ ದಾಖಲಾತಿ ಹೆಚ್ಚಿಸಬೇಕು. ಅಪೌಷ್ಟಿಕತೆ ನಿವಾರಿಸುವುದರ ಜತೆಗೆ ಮಕ್ಕಳ ಕಲಿಕೆ, ಆರೋಗ್ಯ ಸುರಕ್ಷತೆ ಹಾಗೂ ಅಂಗನವಾಡಿ ಕೇಂದ್ರ ಪರಿಸರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಬಾಲ ನ್ಯಾಯ ಮಂಡಳಿ ಸದಸ್ಯ ಶಶಿಧರ ಕೋಸಂಬೆ ಮಾತನಾಡಿ, ಜಿಲ್ಲೆಯಲ್ಲಿ ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ, ಬಾಲ ನ್ಯಾಯ ಮಂಡಳಿ ಸೇರಿದಂತೆ ವಿವಿಧ ಇಲಾಖೆಗಳು ಸೇರಿ ಜಾಗೃತಿ ಮೂಡಿಸುತ್ತಿರುವ ಪರಿಣಾಮ ಬಾಲ್ಯ ವಿವಾಹ ನಿಯಂತ್ರಣಕ್ಕೆ ಬಂದಿದೆ. ಆದರೆ ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲರೂ ಸೇರಿ ಸಂಕಲ್ಪ ಮಾಡಬೇಕಿದೆ. ಇದರಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಜವಾಬ್ದಾರಿಯೂ ಹೆಚ್ಚಿದ್ದು, ತಮ್ಮ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡು ಬಂದರೆ ತಕ್ಷಣ 1098 ಸಂಖ್ಯೆಗೆ ಕರೆ ಮಾಡುವಂತೆ ಸಲಹೆ ನೀಡಿದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕವಿತಾ ಹುಷಾರೆ, ಸದಸ್ಯೆ ಮಂಜುಳಾ ಎಂ., ಜಿಲ್ಲಾ ಮಕ್ಕಳ ರಕ್ಷಣಾಧಿ ಕಾರಿ ಚಂದ್ರಕಾಂತ ಜಾಧವ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ| ಜ್ಞಾನೇಶ್ವರ ನಿರಗುಡೆ ಸೇರಿದಂತೆ ಹಲವರು ಇದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶರಣಬಸಪ್ಪ ಬೆಳಗುಂಪಿ ಸ್ವಾಗತಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಗೌರಿಶಂಕರ ಪರ್ತಾಪುರೆ ನಿರೂಪಿಸಿದರು. ಪ್ರಶಾಂತ ಬಿರಾದಾರ ವಂದಿಸಿದರು.