ಭಾಲ್ಕಿ: ಮನುಷ್ಯನ ಸ್ವಾರ್ಥದಿಂದಾಗಿ ಭೂಮಿತಾಯಿ ಒಡಲು ಬರಿದಾಗಿದೆ. ಈ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಶಶಿಧರ ಕೋಸಂಬೆ ಹೇಳಿದರು.
ಕೋನ ಮೇಳಕುಂದಾ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಡಾನ್ ಬಾಸ್ಕೋ ಸಂಸ್ಥೆ ಬೀದರ್ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಪರಿಸರ ಸ್ನೇಹಿ ಪ್ರಶಸ್ತಿ ಪ್ರದಾನ, ವನಮಹೋತ್ಸವ ಮತ್ತು ಮಕ್ಕಳ ಸಂರಕ್ಷಣೆ ಸಮಿತಿ ರಚನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಮಕ್ಕಳನ್ನು ಆರೈಕೆ ಮಾಡಿದಂತೆ ಪರಿಸರ ಶುದ್ಧವಾಗಿರಿಸಿದರೆ ನಮ್ಮ ಆರೋಗ್ಯ ಸರಿಯಾಗಿರುತ್ತದೆ. ಪ್ರತಿಯೊಬ್ಬರೂ ಹೆಚ್ಚು ಗಿಡಗಳನ್ನು ಬೆಳೆಸಿ ಪ್ರಾಕೃತಿಕ ಅಸಮತೋಲನ ತಡೆಯುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.
ಡಾನ್ ಬಾಸ್ಕೋ ಸಂಸ್ಥೆಯ ಸಂಯೋಜಕ ಡ್ಯಾನೀಯಲ್ ಮಾತನಾಡಿ, ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ಉದ್ದೇಶದಿಂದ ಕಳೆದ ಕೆಲ ವರ್ಷಗಳಿಂದ ಡಾನ್‌ಬಾಸ್ಕೋ ಸಂಸ್ಥೆಯಿಂದ ಪ್ರಶಸ್ತಿ ನೀಡಲಾಗುತ್ತಿದೆ. ಈ ಮೂಲಕ ಮಕ್ಕಳಲ್ಲಿ ಪರಿಸರ ಜಾಗೃತಿ ಮತ್ತು ಮಾಲಿನ್ಯ ಮುಕ್ತ ಸಮಾಜ ನಿರ್ಮಾಣ ನಮ್ಮ ಉದ್ದೇಶವಾಗಿದೆ ಎಂದರು.
ಮುಖ್ಯ ಶಿಕ್ಷಕಿ ತೈಬಾ ಫಾತಿಮಾ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಮಂಜುಳಾ ಎಂ., ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೋದಾವರಿ ಬಿರಾದಾರ್, ತಾಲೂಕು ಅರಣ್ಯಾಧಿಕಾರಿ ಪ್ರಕಾಶ ನಿಪ್ಪಾಣಿ, ಶಿಕ್ಷಕರಾದ ನಂದರಾಜ ಬಿರಾದಾರ್ ಸೇರಿದಂತೆ ಹಲವರು ಇದ್ದರು. ದೈಹಿಕ ಶಿಕ್ಷಕ ಶಿವಕುಮಾರ ಹಾಲಹಳ್ಳಿ ಸ್ವಾಗತಿಸಿದರು. ವಿದ್ಯಾರ್ಥಿನಿ ತೇಜಸ್ವಿನಿ ಶಿವರಾಜ ನಿರೂಪಿಸಿದರು. ಶಿಕ್ಷಕ ರಾಜಕುಮಾರ ಬಸಗೊಂಡ್ ವಂದಿಸಿದರು.