Advertisement

ಫಲಿತಾಂಶ ಸುಧಾರಣೆಗೆ ಶ್ರಮ ಅಗತ್ಯ

03:48 PM May 07, 2019 | Naveen |

ಭಾಲ್ಕಿ: ಬರುವ 2019-20ನೇ ಸಾಲಿನ ಎಸ್‌ಎಸ್‌ಎಲ್ಸಿ ಪಠ್ಯಕ್ರಮವನ್ನು ಡಿಸೆಂಬರ್‌ ತಿಂಗಳೊಳಗಾಗಿ ಪೂರ್ಣಗೊಳಿಸಬೇಕು. ಅಲ್ಲದೇ 2ರಿಂದ 3 ಸರಣಿ ಪರೀಕ್ಷೆ ನಡೆಸಿ ತಾಲೂಕಿನ ಫಲಿತಾಂಶ ಹೆಚ್ಚಿಸು ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದನೂರ ಸೂಚಿಸಿದರು.

Advertisement

ಪಟ್ಟಣದ ಶ್ರೀ ಸತ್ಯ ಸಾಯಿ ಪಬ್ಲಿಕ್‌ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ 2018-19ನೇ ಸಾಲಿನ 10ನೇ ತರಗತಿ ಪರೀಕ್ಷೆ ಫಲಿತಾಂಶ ವಿಶ್ಲೇಷಣೆ ಹಾಗೂ ಫಲಿತಾಂಶ ಹೆಚ್ಚಿಸಲು ಆಯೋಜಿಸಿದ್ದ ಕ್ರಿಯಾ ಯೋಜನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಫಲಿತಾಂಶ ಹೆಚ್ಚುಸುವ ನಿಟ್ಟಿನಲ್ಲಿ ತಾಲೂಕಿನ ಎಲ್ಲ ಮುಖ್ಯ ಶಿಕ್ಷಕರು ಒಂದು ವರ್ಷದ ಕ್ರಿಯಾ ಯೋಜನೆ ಹಾಕಿಕೊಂಡು ಪಠ್ಯಕ್ರಮ ಪ್ರಾರಂಭಿಸಬೇಕು. ಹಾಕಿಕೊಂಡ ಕ್ರಿಯಾ ಯೋಜನೆಯನ್ನು ಅನುಷ್ಠಾನಕ್ಕೆ ಬರುವಂತೆ ಮಾಡುವುದು ನಿಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.

ತಾಲೂಕಿನ ಫಲಿತಾಂಶ ಹೆಚ್ಚಳಕ್ಕೆ ಬೇಕಾಗುವ ಎಲ್ಲ ಅಗತ್ಯ ಕ್ರಮಗಳು ಜಾರಿಗೆ ತರಬೇಕು. ನೀಲಿ ನಕ್ಷೆ ಆಧಾರದ ಮೇಲೆ ಮಕ್ಕಳಿಂದಲೇ ಪ್ರಶ್ನೆಗಳನ್ನು ತಯಾರಿಸಲು ಶಿಕ್ಷಕರು ಮಾರ್ಗದರ್ಶನ ಮಾಡಬೇಕು. ಮಕ್ಕಳ ಹಾಜರಾತಿ ಮೇಲೆ ಹೆಚ್ಚು ನಿಗಾವಹಿಸಬೇಕು. ಪಾಲಕರ ಜತೆ ಸಂಪರ್ಕ ಹೆಚ್ಚಿಸಬೇಕು. ಇದರಿಂದ ಮಕ್ಕಳ ಬಾಹ್ಯ ಚಟುವಟಿಕೆಗಳ ಮೇಲೆ ನಿಗಾ ಇಟ್ಟಂತಾಗುತ್ತದೆ ಎಂದು ಹೇಳಿದರು.

ಪ್ರತಿ ತಿಂಗಳ ಮೊದಲನೇ ಶನಿವಾರ ತಾಲೂಕಿನ ಎಲ್ಲ ಮುಖ್ಯ ಶಿಕ್ಷಕರ ಸಭೆ ನಡೆಸಲಾಗುವುದು. ಅದೇ ರೀತಿ ಪ್ರತಿ ತಿಂಗಳ ಮೂರನೇ ಮತ್ತು ನಾಲ್ಕನೇ ಶನಿವಾರ ವಿಷಯವಾರು ಶಿಕ್ಷಕರ ಸಭೆ ನಡೆಸಲಾಗುವುದು. ಈ ಸಭೆಗಳಲ್ಲಿ ತಾಲೂಕಿನ 10ನೇ ತರಗತಿ ಫಲಿತಾಂಶ ಹೇಗೆ ಹೆಚ್ಚಿಸಬೇಕು ಎಂಬ ವಿಷಯದ ಮೇಲೆ ಚರ್ಚೆ ನಡೆಯುತ್ತದೆ. ಅದಕ್ಕೆ ತಾಲೂಕಿನ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳ ಮುಖ್ಯ ಶಿಕ್ಷಕರು ಕಡ್ಡಾಯವಾಗಿ ಹಾಜರಿದ್ದು ಈ ಬಗ್ಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸೂರ್ಯಕಾಂತ ಪಾಟೀಲ ಮಾತನಾಡಿ, ತಾಲೂಕಿನ ಎಲ್ಲ ಮುಖ್ಯ ಮುಖ್ಯಶಿಕ್ಷಕರು ಯೋಜನಾಬದ್ಧವಾಗಿ ಕಾರ್ಯ ಮಾಡಿದ್ದೇ ಆದರೆ ಫಲಿತಾಂಶ ನಿಮ್ಮ ಅಂಗೈಯಲ್ಲಿರುತ್ತದೆ ಎಂದು ಹೇಳಿದರು.

Advertisement

ಈ ಬಾರಿ ನಿಮ್ಮ ಫಲಿತಾಂಶ ಎಷ್ಟು ಬಂದಿದೆಯೋ ಅದರ ಶೇ. 20ರಷ್ಟು ಫಲಿತಾಂಶ ಹೆಚ್ಚಳಕ್ಕೆ ಬೇಕಾಗುವ ತಯಾರಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಸತ್ಯ ಸಾಯಿ ಪಬ್ಲಿಕ್‌ ಶಾಲೆ ಕಾರ್ಯದರ್ಶಿ ಭಾಗ್ಯಜ್ಯೋತಿ ಎಮ್ಮೆ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ವರ್ಷ ಪೂರ್ವದಲ್ಲಿಯೇ ಮಾಡಿಕೊಳ್ಳಬೇಕು. ಆವಾಗ ಮಾತ್ರ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಪಡೆದುಕೊಳ್ಳಬಹುದು ಎಂದು ಹೇಳಿದರು.

ಸತ್ಯಸಾಯಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಂದ್ರಶೇಖರ ಎಮ್ಮೆ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರ ಕೊಡುವ ಪ್ರೋತ್ಸಾಹವನ್ನು ಎಲ್ಲ ವಿದ್ಯಾರ್ಥಿಗಳಿಗೂ ನೀಡಬೇಕು. ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆ ಎಂದು ತಾರತಮ್ಯಕ್ಕೆ ಅವಕಾಶ ಕೊಡಬಾರದು. ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್‌ ಕೊಡಲಾಗುತ್ತಿದೆ. ಈ ವ್ಯವಸ್ಥೆ ಅನುದಾನಿತ ಮತ್ತು ಅನುದಾನ ರಹಿತ ವಿದ್ಯಾರ್ಥಿಗಳಿಗೂ ಅನ್ವಯಿಸಬೇಕು ಎಂದು ಸಲಹೆ ನೀಡಿದರು.

ಪ್ರಕಾಶ ರಾಠೊಡ, ಪ್ರಕಾಶ ಬಿರಾದಾರ, ನಿರಂಕಾರ ಗಾಯಕವಾಡ, ದಿಲೀಪ ಬಿರಾದಾರ, ಸಂಜುಕುಮಾರ ಪುರಿ, ಆನಂದ ಕಲ್ಯಾಣೆ, ಜಯರಾಜ ದಾಬಶೆಟ್ಟಿ, ಬಾಲಾಜಿ ಬಿರಾದಾರ ಇದ್ದರು. ಶ್ರೀ ಸತ್ಯ ಸಾಯಿ ಪಬ್ಲಿಕ್‌ ಶಾಲೆ ಪ್ರಾಚಾರ್ಯ ನಿರ್ಮಲಾ ತಿವಾರಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣ ವಿಷಯ ಪರಿವೀಕ್ಷಕ ಜೈರಾಮ ಬಿರಾದಾರ ನಿರೂಪಿಸಿದರು. ಮದಕಟ್ಟಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಮಹಾದೇವ ಸಜ್ಜನ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next