Advertisement

ಗಮನ ಸೆಳೆದ ಭಜನ್‌ ಸಂಧ್ಯಾ

04:06 PM Jul 07, 2017 | |

ಶಾಸ್ತ್ರೀಯ ಸಂಗೀತ ಮತ್ತು ಭಜನ್‌ ಗಾಯನ ಅಪಾರವಾದ ಸಂವಹನ ಸಾಧ್ಯತೆಯೊಂದಿಗೆ ಆನಂದಾನುಭವ ವನ್ನು ನೀಡುವ ಅಪರೂಪದ ಕಲಾ ಪ್ರಕಾರ. ಗಾನಾಮೃತಕ್ಕೆ ಮಾತ್ರ ಕೇಳುಗರನ್ನು ನೋಡನೋಡುತ್ತ – ಲೋಕಾಂತರಕ್ಕೆ ಕೊಂಡೊಯ್ಯುವ ಅನುಪಮವಾದ ಶಕ್ತಿಯಿದೆ. ಭಾಷೆ- ದೇಶ-ಕಾಲಗಳ ಹಂಗು ಹರಿದು ಹಾಯಬಲ್ಲ ಶಕ್ತಿಯಿರುವುದು ಸಂಗೀತಕ್ಕೆ ಮಾತ್ರ. ಪಾಶ್ಚಾತ್ಯರ ಗದ್ದಲದ ಅಬ್ಬರದ ನಡುವೆಯೂ ಭಾರತೀಯ ಸಂಗೀತ ಪರಂಪರೆಯನ್ನು ಗಂಭೀರವಾಗಿ ಆಳವಾಗಿ ಅಧ್ಯಯನ ಮಾಡುವ ಯುವ ಪೀಳಿಗೆ ಸಂಗೀತಾಸಕ್ತರ ನೆಮ್ಮದಿಗೆ ಕಾರಣವಾಗಿದೆ. 

Advertisement

    ಇತ್ತೀಚೆಗೆ ಬೈಂದೂರು ಸಮೀಪ ನಾಯ್ಕನಕಟ್ಟೆ ಶ್ರೀ ವೆಂಕಟರಮಣ ದೇವಸ್ಥಾನದ ಪ್ರಥಮ ವರ್ಧಂತಿ ಸಂದರ್ಭದಲ್ಲಿ ಕು| ಶ್ರದ್ಧಾ ಓಂಗಣೇಶ ಕಾಮತರಿಂದ “ಭಜನ್‌ ಸಂದ್ಯಾ’ ಭಕ್ತಿ ಸಂಗೀತಾ ಕಾರ್ಯಕ್ರಮ ಔಚಿತ್ಯಪೂರ್ಣವಾಗಿ ನೆರವೇರಿತು. ಗಜಮುಖನೆ ಜಯತು ಗಣನಾಥನೆ ಹಾಡಿನೊಂದಿಗೆ ಕಾರ್ಯಕ್ರಮ ಶಾಸ್ತ್ರೀಯ ಸಂಗೀತದ ಹಿನ್ನೆಲೆಯನ್ನು ಪ್ರಕಟಿಸುತ್ತಾ ಉತ್ತಮ ಪ್ರಭಾವವನ್ನು ಸ್ಥಾಪಿಸಿತು. ಅಸೋ ತುಲಾ ದೇವಾ ಮಾರkೂ (ಬಾಗೇಶ್ರೀ), ರಕ್ಷಾ ಕರೋ ಜಗದಂಬಾ ಭವಾನಿ (ತೋಡಿ), ಬುಲವಿಲೇ ವೇಣುನಾದೆ, ನಾಮತುಜಾ ಬರ್ವೇಗಶಂಕರಾ, ನಾಮ ವಿಠೊಬಾಚೆ – ಬಾಜೆ ಮುರಳಿಯಾ ಬಾಜೆ ವಿಠಲಾಚ ಪಾಯಿಧರಾ ಮುಂತಾದ ಮರಾಠಿಯ ಕೃತಿಗಳನ್ನು ಪ್ರಸಿದ್ಧ ಮೂಲ ಗಾಯಕರ ಶೈಲಿಯಲ್ಲೇ ಪ್ರಸ್ತುತಪಡಿಸಿ ಜನ ಮೆಚ್ಚುಗೆ ಗಳಿಸಿದರು. ಉಳ್ಳವರು ಶಿವಾಲಯ ವಚನವನ್ನು ಮಧುವಂತಿಯಲ್ಲಿ ಹಾಡಿದ್ದು ಸುಶ್ರಾವ್ಯವಾಗಿ ಶ್ರೋತೃಗಳನ್ನು ತಣಿಸಿತು. ವೇಣುನಾದ ಪ್ರಿಯಾ (ಜೋಗ್‌), ಪಾಲಿಸು ಶ್ರೀ ಮಹಾಲಕ್ಷ್ಮಿ (ಬಿಬಾಸ್‌) – ಹಾಡುಗಳು ಸತ್ವಭರಿತವಾಗಿ ಜನರ ಹೃದಯ ತಲುಪಿದವು. ಕನಕದಾಸರ ನಾನು ನೀನು ಎನ್ನದಿರು ಹೀನ ಮಾನವ (ಮಧುಕೌಂಸ್‌) ಹಾಡು ಭಾವಪೂರ್ಣವಾಗಿ ಅರ್ಥಸ್ಪಷ್ಟತೆಯಿಂದ ಕೂಡಿತ್ತು. ಬದುಕಿನ ನಶ್ವರತೆಯನ್ನು ಬಿಂಬಿಸುವಲ್ಲಿ ಸಾಹಿತ್ಯಕ್ಕೆ ಹಿತವಾದ ಭಾವ ಬೆರೆತು ಭಕ್ತಿರಸ ತನಿಗೊಂಡಿತು. ನಗಣ್ಯ ಎನ್ನಬಹುದಾದ ಲೋಪದೋಷಗಳ ನಡುವೆಯೂ ಭಜನ್‌ ಸಂಧ್ಯಾ ಕಾರ್ಯಕ್ರಮ ಯಶಸ್ವಿಯೆನಿಸಿತು.

ಉತ್ತಮವಾದ ಶಾರೀರ ಕೇಳುಗರನ್ನು ಆಕರ್ಷಿಸುವಲ್ಲಿ ಯಶಸ್ಸು ಕಾಣುತ್ತದೆ. ಗಾಯಕಿ ಮರಾಠಿ-  ಕನ್ನಡದ ಹಾಡುಗಳ ಪ್ರಸ್ತುತಿಗೆ ಸಾಕಷ್ಟು ಶ್ರಮವಹಿಸಿದ್ದು, ಪ್ರಾವೀಣ್ಯ ಸಾಧಿಸಿದ್ದು ಅಭಿನಂದನೀಯ ವಿಚಾರ. ಮೂರೂ ಸಪ್ತಕಗಳಲ್ಲಿ ನಿರರ್ಗಳ ಸಂಚಾರಕ್ಕೆ ಮತ್ತು ಲಯದ ಪ್ರಬುದ್ಧತೆಗೆ ಇನ್ನಷ್ಟು ಅಭ್ಯಾಸದ ಅಗತ್ಯ ಇದೆ. ಉಪ್ಪುಂದದ ಗೋಪಾಲಕೃಷ್ಣ ಜೋಶಿ ಹಾಗೂ ವಿನಾಯಕ ಪ್ರಭು ಅವರು ಉತ್ತಮವಾಗಿ ತಬಲಾ ಮತ್ತು ಹಾರೊನಿಯಂನಲ್ಲಿ ಸಾಥ್‌ ನೀಡಿದರು. ವಿಠಲ್‌ ನಾಯ್ಕ ಭಟ್ಕಳ ತಾಳವಾದ್ಯದಲ್ಲಿ ಸಹಕರಿಸಿದರು.

    ಉದಯೋನ್ಮುಖ ಕಲಾವಿದೆಯಾದ ಶ್ರದ್ಧಾ ಕಾಮತರು ಓಂಗಣೇಶ ಉಪ್ಪುಂದ ಮತ್ತು ವಿಜಯಾ ಕಾಮತರ ಪುತ್ರಿ. ಆರಂಭಿಕ ಸಂಗೀತಾಭ್ಯಾಸವನ್ನು ಜಯಶ್ರೀ ಭಟ್ಟ ನಾಯ್ಕನಕಟ್ಟೆ, ಅನಂತ ಹೆಬ್ಟಾರ್‌ ಭಟ್ಕಳ ಇವರಿಂದ ಪಡೆದಿರುತ್ತಾರೆ. ಬಳಿಕ ಸುಬ್ರಹ್ಮಣ್ಯ ಹೆಗಡೆ, ಅಶೋಕ ಹುಗ್ಗಣ್ಣನವರ್‌ ಬಳಿಯೂ ಪ್ರೌಢಾಭ್ಯಾಸ ನಡೆಸಿ ಪ್ರಸ್ತುತ ಬೆಂಗಳೂರಿನಲ್ಲಿ ತಮ್ಮ ಎಂಜಿನಿಯರ್‌ ವೃತ್ತಿಯೊಂದಿಗೆ ನಾಗರಾಜ ಹವಾಲ್ದಾರ್‌ ಅವರಲ್ಲಿ ಸಂಗೀತಾಭ್ಯಾಸ ನಡೆಸುತ್ತಿದ್ದಾರೆ. ಉದಯೋನ್ಮುಖ ಕಲಾವಿದೆ ಇನ್ನಷ್ಟು ಸಾಧನೆಯ ಶಿಖರವನ್ನೇರಿ ಭಾರತೀಯ ಸಂಗೀತದ ಸೌರಭವನ್ನು ಪಸರಿಸಲಿ.

ಮಂಜುನಾಥ ಶಿರೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next