Advertisement

ಕಲ್ಯಾಣ್‌ ಪದಪುಂಜದೊಳಗೆ ಭೈರವಗೀತೆ

10:54 AM Nov 09, 2018 | |

ಇತ್ತೀಚೆಗಷ್ಟೆ ಭೈರವಗೀತ ಚಿತ್ರದ ಟ್ರೇಲರ್‌ ಅದ್ಧೂರಿಯಾಗಿ ಹೊರಬಂದಿದೆ. ಟ್ರೇಲರ್‌ನಲ್ಲಿ ರಗಡ್‌ ಮೇಕಿಂಗ್‌, ಖಡಕ್‌ ಡೈಲಾಗ್‌ಗಳು ಮತ್ತು ಅದರಲ್ಲಿ ಬರುವ ಥೀಮ್‌ ಸಾಂಗ್‌ನ ಸಾಲುಗಳು ನೋಡುಗರ ಗಮನ ಸೆಳೆಯುತ್ತಿದೆ. ಇನ್ನು ಭೈರವಗೀತದ ಹಾಡುಗಳು ಮತ್ತು ಅದರ ಸಾಹಿತ್ಯದ ಬಗ್ಗೆ ಖ್ಯಾತ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮ (ಆರ್‌ಜಿವಿ) ಸಾಕಷ್ಟು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 

Advertisement

“ಆರಂಭದಲ್ಲಿ ಈ ಕಥೆಗೆ ಸೂಕ್ತವಾಗುವಂತಹ ಸಾಹಿತ್ಯವನ್ನು ಕನ್ನಡದಲ್ಲಿ ಯಾರು ಬರೆಯಬಹುದು ಎಂಬ ಯೋಚನೆಯಲ್ಲಿದ್ದಾಗ ನಮಗೆ ಬಂದ ಹೆಸರು ಕೆ. ಕಲ್ಯಾಣ್‌. ಬಹುತೇಕ ತಂತ್ರಜ್ಞರು ತೆಲುಗು ಮೂಲದವರಾಗಿದ್ದರಿಂದ ಕಥೆಗೆ ಪೂರಕವಾಗಿ, ಕನ್ನಡದ ಚಿತ್ರಸಾಹಿತ್ಯವನ್ನು ನವಿರಾಗಿ ಚಿತ್ರದಲ್ಲಿ ಪೋಣಿಸಬೇಕಿತ್ತು. ಆ ಕೆಲಸವನ್ನು ಕಲ್ಯಾಣ್‌ ಸಮರ್ಥವಾಗಿ ಮಾಡುತ್ತಾರೆಂಬ ವಿಶ್ವಾಸದಲ್ಲಿ ಅವರಿಗೆ ಈ ಚಿತ್ರದ ಬಗ್ಗೆ ಹೇಳಿದೆವು.

ಈ ಕಥೆಯನ್ನು ಅವರಿಗೆ ವಿವರಿಸುತ್ತಿದ್ದಂತೆ ಅವರಿಗೂ ಕೂಡ ಇಷ್ಟವಾಗಿ ಸಾಹಿತ್ಯವನ್ನು ಬರೆಯಲು ಒಪ್ಪಿಕೊಂಡರು. ಮಾಮೂಲಿ ಶೈಲಿಗಿಂತ ಭಿನ್ನವಾಗಿ, ಹೊಸತರದಲ್ಲಿ ಚಿತ್ರಕಥೆಯನ್ನು ಸಾಹಿತ್ಯದಲ್ಲಿ ಹೇಳಬೇಕಿತ್ತು. ಅದರಂತೆ ಚಿತ್ರಕ್ಕೆ, ಚಿತ್ರಕಥೆಗೆ ಹೊಸರೂಪ ಕೊಡುವಂತೆ ಕೆ. ಕಲ್ಯಾಣ್‌ ಸಾಲುಗಳನ್ನು ರಚಿಸಿಕೊಟ್ಟಿದ್ದಾರೆ. ಕೇಳುಗರಿಗೆ, ಚಿತ್ರವನ್ನು ನೋಡುವವರಿಗೆ ಭೈರವಗೀತದ ಸಾಹಿತ್ಯ ಹೊಸ ಅನುಭವವನ್ನು ನೀಡಲಿದೆ’ ಎನ್ನುತ್ತಾರೆ ಆರ್‌ಜಿವಿ. 

ಇನ್ನು “ಭೈರವಗೀತ’ ಚಿತ್ರಕ್ಕೆ ಆರ್‌ಜಿವಿ ಗರಡಿಯಲ್ಲಿ ಪಳಗಿರುವ ನವ ಪ್ರತಿಭೆ ಸಿದ್ಧಾರ್ಥ್ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದ ಜತೆಜತೆಗೆ ತಮಿಳು, ತೆಲುಗು ಮತ್ತು ಮಲೆಯಾಳಂನಲ್ಲೂ ತಯಾರಾಗುತ್ತಿರುವ ಈ ಚಿತ್ರಕ್ಕೆ ರವಿಶಂಕರ್‌ ಸಂಗೀತ ಸಂಯೋಜಿಸಿದ್ದಾರೆ. ಭೈರವಗೀತದ ಹಾಡುಗಳ ಬಗ್ಗೆ ಮಾತನಾಡುವ ಕೆ. ಕಲ್ಯಾಣ್‌, ಒಂದೇ ಸಾಲಿನಲ್ಲಿ ಹೇಳಬೇಕೆಂದರೆ “ಭೈರವಗೀತ’ ವೈಲೆಂಟ್‌ ಸಬ್ಜೆಕ್ಟ್‌ನಲ್ಲಿ ಸೈಲೆಂಟ್‌ ಪ್ರೇಮಕಥೆ ಇರುವ ಚಿತ್ರ.

ಜೀತಪದ್ದತಿ ಮತ್ತು ದೊರೆಯಾಳುಗಳ ನಡುವೆ ನಡೆಯುವ ಕಥೆ ಅದರ ನಡುವೆ ನಡೆಯುವ ನವಿರಾದ ಪ್ರೇಮಕಥೆ ಚಿತ್ರದ ಹೈಲೈಟ್‌. ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಒಂದೊಂದು ಹಾಡುಗಳೂ ಒಂದೊಂದು ಶೈಲಿಯಲ್ಲಿ ಬಂದಿವೆ. ಯುಗಳ ಗೀತೆ, ಸೆಂಟಿಮೆಂಟ್‌, ಕ್ರಾಂತಿಗೀತೆ, ಜನಪದ ಶೈಲಿಯ ಗೀತೆ ಹೀಗೆ ಎಲ್ಲಾ ಪ್ರಾಕಾರದ ಗೀತೆಗಳು ಇದರಲ್ಲಿದೆ. ವಿಜಯ ಪ್ರಕಾಶ್‌, ಚಿನ್ಮಯಿ, ವಿಜಯ್‌ ಯೇಸುದಾಸ್‌, ಅನುರಾಧ ಭಟ್‌, ಇಂದೂ ನಾಗರಾಜ್‌ ಮೊದಲಾದವರು ಈ ಹಾಡುಗಳಿಗೆ ಧ್ವನಿಯಾಗಿದ್ದಾರೆ.

Advertisement

ನೀ ನನ್ನ ಭಗವದ್ಗೀತೆ ನೀನೆ ಹೊಸ ಬದುಕಿನ ಗೀತೆ…, ಆರ್ತನಾದ ಆಯುಧ ಹಿಡಿಯಲಿ…, ನೀನೆ ನರನರದ ತಂತಿ, ನಾನೇ ಗಮನಾರ್ಹ ಗರತಿ… ತಿದ್ದಿ ತೀಡಿ ಹಣೆಬರಹ ಸೇರಿ ಹುಟ್ಟೋಣ ಪುನಃ…, ಕನ್ನಡದ ಕಹಳೆಯ ಊದಿ ಮೊಳಗುತಿರು ಪ್ರೇಮಗೀತೆ… ಹೀಗೆ ಹತ್ತಾರು ಸಾಲುಗಳು ಚಿತ್ರದ ಕಥೆಯ ಆಶಯವನ್ನು ಹೇಳುತ್ತವೆ. ಚಿತ್ರದ ಸಾಹಿತ್ಯವನ್ನು ಕೇಳಿದ ಆರ್‌ಜಿವಿ ಕೂಡ ತುಂಬ ಖುಷಿಯಾಗಿದ್ದಾರೆ. ಶೀಘ್ರದಲ್ಲಿಯೇ ಚಿತ್ರದ ಹಾಡುಗಳು ಹೊರಬರಲಿದ್ದು, ಕನ್ನಡದ ಸಿನಿಪ್ರಿಯ ಕೇಳುಗರಿಗೆ ಇಷ್ಟವಾಗಲಿದೆ ಎನ್ನುತ್ತಾರೆ ಕೆ. ಕಲ್ಯಾಣ್‌. 

Advertisement

Udayavani is now on Telegram. Click here to join our channel and stay updated with the latest news.

Next