Advertisement

Bhairathi Ranagal; ಆರು ತಿಂಗಳ ಮುಂಚೆಯೇ ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರತಂಡ

09:23 AM Mar 10, 2024 | Team Udayavani |

ನಟ ಶಿವರಾಜ್‌ಕುಮಾರ್‌ ನಾಯಕನಾಗಿ ಅಭಿನಯಿಸಿದ್ದ “ಮಫ್ತಿ’ ಸಿನಿಮಾದ ಪ್ರೀಕ್ವೆಲ್‌ ಆಗಿ “ಭೈರತಿ ರಣಗಲ್‌’ ಸಿನಿಮಾ ತೆರೆಗೆ ಬರುತ್ತಿರುವುದು ನಿಮಗೆ ಗೊತ್ತಿರಬಹುದು. “ಮಫ್ತಿ’ ಸಿನಿಮಾ ನಿರ್ದೇಶಿಸಿದ್ದ ನರ್ತನ್‌ ಅವರೇ “ಭೈರತಿ ರಣಗಲ್‌’ ಸಿನಿಮಾಕ್ಕೆ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದು, ಕಳೆದ ವರ್ಷ ಮಧ್ಯ ಭಾಗದಲ್ಲಿ ಸಿನಿಮಾದ ಚಿತ್ರೀಕರಣಕ್ಕೆ ಅಧಿಕೃತ ಚಾಲನೆ ಸಿಕ್ಕಿತ್ತು. ಈಗಾಗಲೇ ಸದ್ದಿಲ್ಲದೆ “ಭೈರತಿ ರಣಗಲ್‌’ ಸಿನಿಮಾದ ಬಹುತೇಕ ಚಿತ್ರೀಕರಣದ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಕೂಡ ಅಧಿಕೃತವಾಗಿ ಘೋಷಣೆ ಮಾಡಿದೆ.

Advertisement

ಹೌದು, ಸದ್ಯ “ಭೈರತಿ ರಣಗಲ್‌’ ಸಿನಿಮಾದ ಕೆಲಸಗಳು ಭರದಿಂದ ನಡೆಯುತ್ತಿರುವಂತೆಯೇ, ಸಿನಿಮಾವನ್ನು ಇದೇ ಆಗಸ್ಟ್‌ 15ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

ಸುಮಾರು ಆರು ತಿಂಗಳ ಮುಂಚೆಯೇ ಚಿತ್ರತಂಡ “ಭೈರತಿ ರಣಗಲ್‌’ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಘೋಷಿಸಿ ಅಚ್ಚರಿ ಮೂಡಿಸಿದೆ. ಇನ್ನು “ಮಫ್ತಿ’ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಭೈರತಿ ರಣಗಲ್‌ ಎಂಬ ಪಾತ್ರ ಮಾಡಿದ್ದರು. ಈಗ ಅದೇ ಹೆಸರನ್ನು ಸಿನಿಮಾದ ಟೈಟಲ್‌ನ್ನಾಗಿ ಮಾಡಲಾಗಿದೆ.

“ಭೈರತಿ ರಣಗಲ್‌’ ಸಿನಿಮಾವನ್ನು “ಗೀತಾ ಪಿಕ್ಚರ್’ನಡಿ ಗೀತಾ ಶಿವರಾಜ್‌ಕುಮಾರ್‌ ನಿರ್ಮಿಸುತ್ತಿದ್ದಾರೆ. ಸಿನಿಮಾದ ಹಾಡುಗಳಿಗೆ ರವಿ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದು, ನವೀನ್‌ ಛಾಯಾಗ್ರಹಣವಿದೆ.

“ಮಫ್ತಿ’ ಸಿನಿಮಾದ ಬಗ್ಗೆ ಮಾತನಾಡುವ ನಟ ಶಿವರಾಜಕುಮಾರ್‌, “”ಮಫ್ತಿ ಸಿನಿಮಾದ ಭೈರತಿ ರಣಗಲ್‌ ನನಗೆ ಇಷ್ಟವಾದ ಪಾತ್ರ. ಈ ಸಿನಿಮಾವನ್ನು ನಮ್ಮ ಸಂಸ್ಥೆಯಿಂದ ನಿರ್ಮಾಣ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. “ಮಫ್ತಿ’ ಸಿನಿಮಾ ಬಂದು ಸುಮಾರು ಆರೇಳು ವರ್ಷಗಳಾದರೂ, ಈಗಲೂ ನಾನು ಹಾಗೆ ಇದ್ದೀನಿ. ಹಾಗಾಗಿ ಈ ಪಾತ್ರ ಮಾಡಲು ಅನುಕೂಲವಾಗುತ್ತದೆ. ಪ್ರೀಕ್ವೆಲ್‌ ಆಗಿರುವುದರಿಂದ ಡಿಫ‌ರೆಂಟ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ. ನರ್ತನ್‌ ತುಂಬ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ’ ಎನ್ನುತ್ತಾರೆ.

Advertisement

“ಮಫ್ತಿ’ ಪ್ರೀಕ್ವೆಲ್‌ ಬಗ್ಗೆ ಮಾತನಾಡುವ ನಿರ್ದೇಶಕ ನರ್ತನ್‌, “ಮಫ್ತಿ’ ಸಿನಿಮಾದ ಶಿವರಾಜಕುಮಾರ್‌ ಅವರ ಭೈರತಿ ರಣಗಲ್‌ ಪಾತ್ರ ಇನ್ನು ಎಲ್ಲರ ಮನದಲ್ಲಿದೆ. ಆ ಪಾತ್ರವನ್ನು ಕೇಂದ್ರವಾಗಿಟ್ಟುಕೊಂಡು ಈ ಚಿತ್ರದ ಕಥೆ ಮಾಡಲಾಗಿದೆ. ಇದು ಮಫ್ತಿ ಚಿತ್ರದ ಪ್ರೀಕ್ವೆಲ್. ಮಫ್ತಿ ಚಿತ್ರದಲ್ಲಿ ಮಧ್ಯಂತರದ ನಂತರ ಈ ಪಾತ್ರ ಬರುತ್ತದೆ. ಇಲ್ಲಿ ಭೈರತಿ ರಣಗಲ್‌ ಆಗಿದ್ದು ಹೇಗೆ ಎಂದು ತಿಳಿಯುತ್ತದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next