ರಾಧಿಕಾ ಕುಮಾರಸ್ವಾಮಿ ನಟನೆಯ “ಭೈರಾದೇವಿ’ ಚಿತ್ರ ಗುರುವಾರ ತೆರೆಕಂಡಿದೆ. ಈ ಚಿತ್ರದ ಮೇಲೆ ರಾಧಿಕಾ ಅವರಿಗೆ ತುಂಬು ನಿರೀಕ್ಷೆ ಇದೆ. ಅದಕ್ಕೆ ಕಾರಣ ತಮ್ಮ ಕೆರಿಯರ್‌ನಲ್ಲಿ ಈವರೆಗೆ ಮಾಡಿರದಂತಹ ಚಿತ್ರ. ಇಷ್ಟು ದಿನ ನಾಯಕಿ ನಟಿಯಾಗಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದ ರಾಧಿಕಾ ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಭೈರಾದೇವಿ’ಯಲ್ಲಿ ಕಾಳಿ ಅವತಾರದಲ್ಲಿ ಕಾಣಿಸಿಕೊಂಡು ಹೊಸತನ ಮೆರೆದಿದ್ದಾರೆ.”ತುಂಬಾ ಗ್ಯಾಪ್‌ನ ಬಳಿಕ ನನಗೆ ಈ ತರಹದ ಪಾತ್ರ ಸಿಕ್ಕಿದೆ. ಸಿನಿಮಾಗಳ ಪಾತ್ರದಲ್ಲೂ ಸಾಕಷ್ಟು ವ್ಯತ್ಯಾಸ ಇದೆ. ಇಷ್ಟು ದಿನ ಮಾಡಿದ ಪಾತ್ರಕ್ಕೂ ಈ ಪಾತ್ರಕ್ಕೂ ಸಾಕಷ್ಟು ವ್ಯತ್ಯಾಸವಿರುವುದರಿಂದ ಜನ ಹೇಗೆ ಸ್ವೀಕರಿಸುತ್ತಾರೆಂಬ ಕುತೂಹಲ ಕೂಡಾ ಇದೆ’ ಎಂದು ತಮ್ಮ ಸಿನಿಮಾ ಬಗ್ಗೆ ಹೇಳುತ್ತಾರೆ ರಾಧಿಕಾ.
ಸವಾಲಿನ ಪಾತ್ರ
ಈ ಚಿತ್ರದಲ್ಲಿ ರಮೇಶ್ ಅರವಿಂದ್ ಅವರು ಅದ್ಭುತ ಪಾತ್ರ ಮಾಡಿದ್ದಾರೆ ಎನ್ನುತ್ತಾರೆ ರಾಧಿಕಾ. “ಅವರು ಒಪ್ಪಿದ್ದಕ್ಕೆ ಚಿತ್ರ ಶುರುವಾಯ್ತು. ಅವರು ಡೇಟ್ಸ್ ಕೊಡದಿದ್ದರೆ ಈ ಚಿತ್ರ ಮಾಡುತ್ತಿರಲಿಲ್ಲ. ಆ ಪಾತ್ರಕ್ಕೆ ಅವರೇ ಬೇಕಿತ್ತು. ನಿರ್ದೇಶಕರು ಸಹ ಅದೇ ಹೇಳಿದ್ದರು. ರಮೇಶ್ ಬಿಟ್ಟರೆ ಬೇರೆ ಯಾರೂ ಈ ಪಾತ್ರಕ್ಕೆ ಆಗಲ್ಲ ಎಂದು ಹೇಳಿದ್ದರು. ಇನ್ನು ಭಜರಂಗಿ ಮೋಹನ್ ಅವರು ಮೂರು ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಬಹಳ ಚೆನ್ನಾಗಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರೀಕರಣ ಸಂದರ್ಭದಲ್ಲಿ ನನಗೆ ಬಹಳ ಸುಸ್ತಾಗುತ್ತಿತ್ತು. ಚಿತ್ರೀಕರಣದ ಮೊದಲ ದಿನ ನಡೆಯೋಕೆ, ಎದ್ದು ನಿಲ್ಲೋಕೂ ಆಗುತ್ತಿರಲಿಲ್ಲ. ಆ ಗೆಟಪ್ ಹಾಕಿದ ತಕ್ಷಣ ತಲೆ ಎತ್ತೋಕೂ, ಎರಡ್ಮೂರು ಗಂಟೆಗಳ ಕಾಲ ಏಳ್ಳೋಕೂ ಆಗುತ್ತಿರಲಿಲ್ಲ. ಕೊನೆಗೆ ನಮ್ಮ ತಂಡದವರು ಅಲ್ಲೇ ಇದ್ದ ಒಂದು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ದೃಷ್ಟಿ ತೆಗೆದರು. ಆ ನಂತರ ಚಿತ್ರೀಕರಣ ಶುರು ಮಾಡಿದೆವು’ ಎಂದು ಚಿತ್ರೀಕರಣದ ಅನುಭವ ಹಂಚಿಕೊಂಡರು.
ಶ್ರೀಜೈ ಅವರು ನಿರ್ದೇಶಿಸಿರುವ ಈ ಚಿತ್ರಕ್ಕೆ ರವಿರಾಜ್ ಹಾಗೂ ಯಾದವ್ ಅವರ ಸಹ ನಿರ್ಮಾಣವಿದೆ. ಜೆ.ಎಸ್.ವಾಲಿ ಛಾಯಾಗ್ರಹಣ, ಕೆ.ಕೆ.ಸೆಂಥಿಲ್ ಪ್ರಸಾದ್ ಸಂಗೀತ ನಿರ್ದೇಶನ ಹಾಗೂ ರವಿಚಂದ್ರನ್ ಅವರ ಸಂಕಲನವಿರುವ ಭೈರಾದೇವಿ ಚಿತ್ರದ ತಾರಾಬಳಗದಲ್ಲಿ ರಮೇಶ್ ಅರವಿಂದ್, ರಾಧಿಕಾ ಕುಮಾರಸ್ವಾಮಿ, ರವಿಶಂಕರ್, ರಂಗಾಯಣ ರಘು ಮುಂತಾದವರಿದ್ದಾರೆ.
ಅಪ್ಪನಿಗೆ ಸಿನಿಮಾ ನೋಡುವ ಆಸೆ ಇತ್ತು…
ರಾಧಿಕಾ ಅವರ ತಂದೆಗೆ “ಭೈರಾದೇವಿ’ ಸಿನಿಮಾ ನೋಡುವ ಆಸೆ ಇತ್ತಂತೆ. ಆದರೆ, ಈಗ ಅವರಿಲ್ಲ. ಈ ಕುರಿತು ಮಾತನಾಡುವ ರಾಧಿಕಾ, “ಅಪ್ಪನಿಗೆ “ಭೈರಾದೇವಿ’ ಸಿನಿಮಾದ ಮೇಲೆ ತುಂಬಾ ಆಸೆ ಇತ್ತು. ಆ ಸಿನಿಮಾವನ್ನು ನೋಡಬೇಕು ಎನ್ನುತ್ತಿದ್ದರು. ಆದರೆ, ಅದು ಆಗಲೇ ಇಲ್ಲ’ ಎನ್ನುತ್ತಾ ಭಾವುಕರಾಗುತ್ತಾರೆ ರಾಧಿಕಾ. “ಅಪ್ಪನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಸಿನಿಮಾದ ಚಿತ್ರೀಕರಣಕ್ಕೆ ಅವರ ಜೊತೆಯೇ ಹೋಗಿ ಬರುತ್ತಿದ್ದೆ. ಒಂದು ವೇಳೆ ಅವರು ಬರಲು ಆಗದೇ ಇದ್ದರೂ, ಆ ದಿನ ಏನಾಯಿತು ಎಂಬ ಬಗ್ಗೆ ಕೇಳುತ್ತಿದ್ದರು. ಕೆಲವೊಮ್ಮೆ ಮೊಬೈಲ್‌ನಲ್ಲಿದ್ದ ದೃಶ್ಯಗಳನ್ನು ಕೂಡಾ ತೋರಿಸುತ್ತಿದ್ದೆ. ಅವರಿಗೆ ನನ್ನ “ಭೈರಾದೇವಿ’ ನೋಡುವ ಆಸೆ ಇತ್ತು’ ಎನ್ನುತ್ತಾರೆ.
ರವಿಪ್ರಕಾಶ್ ರೈ