Advertisement

ಅನ್ಯಭಾಗ್ಯಗಳ ನಡುವೆ ಸೊರಗಿದ ಭಾಗ್ಯಲಕ್ಷ್ಮೀ ಬಾಂಡ್‌!

07:30 AM Aug 08, 2017 | |

ಧಾರವಾಡ: ಅನ್ನಭಾಗ್ಯ, ಕೃಷಿಭಾಗ್ಯ,ಪಶುಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯ ಸೇರಿ ಅನೇಕ ಭಾಗ್ಯಗಳನ್ನು ಒಂದಾದ ನಂತರ ಒಂದರಂತೆ ಜನರಿಗೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರ ಮನೆಯಲ್ಲಿ ಹುಟ್ಟಿದ ಭಾಗ್ಯಲಕ್ಷ್ಮೀಯರನ್ನು ಮರೆತಿದ್ದಾರಾ?

Advertisement

ಸಮಾಜದ ಪ್ರತಿ ಬಡವರಿಗೂ ಅನುಕೂಲವಾಗುವಂತಹ ಯೋಜನೆಗಳಿಗೆ ವಿವಿಧ ಹೆಸರಿನಲ್ಲಿ ಜಾರಿಗೊಳಿಸಿದ ಭಾಗ್ಯಗಳ
ನಡುವೆ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಡವರ ಮನೆಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗಾಗಿ ಆರಂಭಿಸಿದ್ದ ಭಾಗ್ಯಲಕ್ಷ್ಮೀ ಯೋಜನೆಯು ಆಹಾರ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ನಡುವಿನ ಸಂವಹನ ಕೊರತೆ ಮತ್ತು ತಾಂತ್ರಿಕ ಕಾರಣಗಳಿಂದ ಸೊರಗಿದ್ದು, ಬಡವರ ಮನೆಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಈ ಯೋಜನೆಯಿಂದ ವಂಚಿತರಾಗುವ ಆತಂಕ ಎದುರಾಗಿದೆ.

ಭಾಗ್ಯಲಕ್ಷ್ಮೀ ಬಾಂಡ್‌ ಅನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಿದರೆ, ಬಾಂಡ್‌ ಮಾಡಿಸಲು ಕಡ್ಡಾಯವಾಗಿರುವ ಬಿಪಿಎಲ್‌ ಕಾರ್ಡ್‌ ನೀಡುವುದು ಆಹಾರ ಇಲಾಖೆ. ಆದರೆ ಆಹಾರ ಇಲಾಖೆಯು ಪಡಿತರ ಚೀಟಿ ವಿತರಣೆಯನ್ನು ಗೊಂದಲದ ಗೂಡಾಗಿಸಿರುವುದರಿಂದ ಬಿಪಿಎಲ್‌ ಪಡಿತರ ಚೀಟಿ ಸಿಗುತ್ತಿಲ್ಲ. ಹೀಗಾಗಿ ಬಿಪಿಎಲ್‌ ಕುಟುಂಬದಲ್ಲಿ ಹುಟ್ಟುವ ಹೆಣ್ಣು ಮಕ್ಕಳಿಗೆ ನೀಡುವ ಭಾಗ್ಯಲಕ್ಷ್ಮೀ ಬಾಂಡ್‌ ಮಾಡಿಸಲಾಗುತ್ತಿಲ್ಲ.

ಬಿಪಿಎಲ್‌ ಕುಟುಂಬಗಳಲ್ಲಿ ಹುಟ್ಟುವ ಮೊದಲ ಎರಡು ಹೆಣ್ಣು ಮಕ್ಕಳಿಗೆ ಸರ್ಕಾರವೇ ಬಾಂಡ್‌ ರೂಪದಲ್ಲಿ ಹಣ ಇರಿಸಿ, ಆ ಮಗುವಿಗೆ 18 ವರ್ಷ ತುಂಬಿದ ನಂತರ ಆ ಹಣ ಅವಳ ಕೈ ಸೇರುವಂತೆ ನಿಯಮ ರೂಪಿಸಲಾಗಿದೆ. ಹೆಣ್ಣು ಮಕ್ಕಳು ಹೊರೆಯಾಗದಿರಲಿ ಎಂಬುದು ಯೋಜನೆ ಉದ್ದೇಶ. ಆರಂಭದಲ್ಲಿ 10,000 ರೂ. ಇದ್ದ ಠೇವಣಿ ಹಣವನ್ನು ಸರ್ಕಾರ 2008ರಿಂದ 19,300 ಕ್ಕೆ ಹೆಚ್ಚಿಸಿದೆ. ಎರಡನೇ ಹೆಣ್ಣು ಮಗುವಿಗೆ 18,350ಕ್ಕೆ ನಿಗದಿಗೊಳಿಸಿದೆ.

ಆಗಿರುವುದೇನು?: ಧಾರವಾಡ ಜಿಲ್ಲೆಯಲ್ಲಿ 2006ರಿಂದ 2015ರ ವರೆಗೆ 87,300ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ಈ ಯೋಜನೆ ಲಭಿಸಿದೆ. ಆದರೆ ಕಳೆದ ಎರಡು ವರ್ಷಗಳಿಂದ ಅನೇಕರಿಗೆ ಇನ್ನೂ ಪಡಿತರ ಚೀಟಿ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದಾಗಿ 2016ಮತ್ತು 17ರ ಅವಧಿಯಲ್ಲಿ ಜಿಲ್ಲೆಯ ಬಿಪಿಎಲ್‌ ಕುಟುಂಬದಲ್ಲಿ ಜನಿಸಿದ 3,217 ಹೆಣ್ಣು ಮಕ್ಕಳು ಯೋಜನೆಯಿಂದ ವಂಚಿತರಾಗುವ ಆತಂಕದಲ್ಲಿದ್ದಾರೆ.

Advertisement

ಕೈ ಎತ್ತಿದ ಅಧಿಕಾರಿಗಳು: ಜಿಲ್ಲಾಮಟ್ಟದಲ್ಲಿ ಸಚಿವರು, ಶಾಸಕರು, ಜಿಪಂ ಅಧ್ಯಕ್ಷರು, ಜಿಲ್ಲಾಧಿಕಾರಿಗಳು ತಮ್ಮ ಕೆಳಗಿನ ಅಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕೆಡಿಪಿ ಸಭೆಗಳಲ್ಲಿ ಸೂಚನೆ ನೀಡುತ್ತಿದ್ದಾರೆ . ಆದರೆ ಬಿಪಿಎಲ್‌ ಕಾರ್ಡ್‌ಗಳಿಲ್ಲದೆ ಬಾಂಡ್‌ ನೋಂದಣಿ ಮಾಡಿಸುವುದು ಸಾಧ್ಯವಿಲ್ಲ. ಬಿಪಿಎಲ್‌ ಕಾರ್ಡುಗಳನ್ನು ನೀಡುವುದು ಸರ್ಕಾರದ ಹಂತದಲ್ಲಿಯೇ ನಿರ್ಧಾರವಾಗಿಬೇಕಿದ್ದು, ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪೋಷಕರಿಗೆ ಹೇಳಿ ಕೆಳಹಂತದ ಅಧಿಕಾರಿಗಳು ಕೈಚೆಲ್ಲುತ್ತಿದ್ದಾರೆ.

ಎಲ್ಲಾ ಜಿಲ್ಲೆಗಳಲ್ಲೂ ಸಮಸ್ಯೆ
ಒಂದು ಸರ್ಕಾರ ಆರಂಭಿಸಿದ ಯೋಜನೆ ಇನ್ನೊಂದು ಸರ್ಕಾರದಲ್ಲಿ ಮುನ್ನಡೆಯುವುದು ಕಷ್ಟ ಎನ್ನುವುದು ಬಹಿರಂಗ ಸತ್ಯ. ಆದರೂ ಉತ್ತಮ ಯೋಜನೆಗಳು ಅದರಲ್ಲೂ ಬಡ ಹೆಣ್ಣು ಮಕ್ಕಳ ಜೀವನಕ್ಕೆ ಮುಂದೊಂದು ದಿನ ಆಧಾರವಾಗುವ ಭಾಗ್ಯಲಕ್ಷ್ಮೀ ಬಾಂಡ್‌ನ‌ಂತಹ ಯೋಜನೆ ನಿರ್ವಿಘ್ನವಾಗಿ ಜಾರಿಯಾದರೆ ಬಡ ಕುಟುಂಬಗಳಿಗೆ ಅನುಕೂಲವಾಗುತ್ತದೆ. ಧಾರವಾಡ ಜಿಲ್ಲೆ ಮಾತ್ರವಲ್ಲ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಸಮಸ್ಯೆ ಇದ್ದು, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ತುರ್ತು ನಿರ್ಣಯಕೈಗೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಆಹಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದಿಟಛಿ ಇಲಾಖೆ ನಡುವೆ ಇರುವ ತಾಂತ್ರಿಕ ಸಮಸ್ಯೆ. ಸದ್ಯಕ್ಕೆ ಪಡಿತರ ಚೀಟಿ ಇಲ್ಲದಿದ್ದರೂ ಭಾಗ್ಯಲಕ್ಷ್ಮೀ ಬಾಂಡ್‌ಗೆ ಅರ್ಜಿ ಹಾಕಲು ಬಡವರ ಮನೆ ಮಕ್ಕಳಿಗೆ ಅವಕಾಶ ನೀಡಲು ಅಧಿಕಾರಿಗಳಿಗೆ ಹೇಳಿದ್ದೇನೆ. ಸರ್ಕಾರದ ಮಟ್ಟದಲ್ಲೂ ಈ ಕುರಿತು ಚರ್ಚಿಸುತ್ತೇನೆ.
– ವಿನಯ್‌ ಕುಲಕರ್ಣಿ, ಜಿಲ್ಲಾ
ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next