Advertisement

ವಿದ್ಯಾರ್ಥಿಗಳೊಂದಿಗೆ ಭಾಗವತ್‌ ಸಂವಾದ ಇಂದು

06:20 AM Aug 12, 2018 | |

ಬೆಂಗಳೂರು:ಯುವ ಸಮೂಹ ಕೇಂದ್ರವಾಗಿರಿಸಿಕೊಂಡು ರಾಷ್ಟ್ರೀಯ ವಿಚಾರಗಳ ಕುರಿತು ವಿಚಾರ ವಿನಿಮಯಕ್ಕಾಗಿ ಆರ್‌ಎಸ್‌ಎಸ್‌ ವತಿಯಿಂದ ನಗರದಲ್ಲಿ ಭಾನುವಾರ ಸ್ನಾತಕೋತ್ತರ ವಿದ್ಯಾರ್ಥಿಗಳೊಂದಿಗೆ ಸಂವಾದ ಆಯೋಜಿಸಲಾಗಿದೆ.

Advertisement

ಆರ್‌.ವಿ.ಟೀಚರ್ ಕಾಲೇಜಿನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳೊಂದಿಗೆ ಸಂವಾದ ಏರ್ಪಡಿಸಿದ್ದು, ಆರ್‌ಎಸ್‌ಎಸ್‌ ಸರಸಂಘಚಾಲಕ ಡಾ.ಮೋಹನ್‌ ಭಾಗವತ್‌ ಭಾಷಣ ಮಾಡಲಿದ್ದಾರೆ.

ಈ ಹಿಂದೆ ಐಟಿ- ಬಿಟಿ ಕ್ಷೇತ್ರದ ವೃತ್ತಿಪರರನ್ನು ಸೆಳೆಯುವ ಸಲುವಾಗಿ ಆರ್‌ಎಸ್‌ಎಸ್‌ ಆರಂಭಿಸಿದ್ದ “ಐಟಿ ಮಿಲನ್‌’ ಕಾರ್ಯಕ್ರಮಕ್ಕೂ ಬೆಂಗಳೂರಿನಿಂದಲೇ ಚಾಲನೆ ದೊರಕಿತ್ತು. ಇದೀಗ ಸ್ನಾತಕೋತ್ತರ ವಿದ್ಯಾರ್ಥಿಗಳೊಂದಿಗಿನ ಸಂವಾದವೂ ನಗರದಲ್ಲೇ ಆಯೋಜಿಸಲಾಗಿದ್ದು ಆಹ್ವಾನಿತರಿಗಷ್ಟೇ ಪ್ರವೇಶವಿದೆ.

ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಅವರು ವಾರ್ಷಿಕ ಸಂಘಟನಾ ಪ್ರವಾಸದ ಪ್ರಯುಕ್ತ ಬೆಂಗಳೂರಿಗೆ ಆಗಮಿಸುತ್ತಿದ್ದು, ವಿದ್ಯಾರ್ಥಿಗಳ ಜತೆ ಸಂವಾದ ಸೇರಿದಂತೆ ನಾಲ್ಕು ದಿನ ನಾನಾ ಸಭೆ- ಸಮಾರಂಭಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ನಡೆಯುತ್ತಿರುವ  ಈ ಕಾರ್ಯಕ್ರಮ ಕುತೂಹಲ ಮೂಡಿಸಿದೆ. ಆದರೆ, ಸರಸಂಘಚಾಲಕರ ವಾರ್ಷಿಕ ಸಂಘಟನಾತ್ಮಕ ಪ್ರವಾಸವು ಸಂಘಟನಾತ್ಮಕ ಕಾರ್ಯಗಳಿಗಷ್ಟೇ ಸೀಮಿತವಾಗಿರಲಿದ್ದು, ರಾಜಕೀಯ ಸೇರಿದಂತೆ ಇತರೆ ಯಾವ ಸಭೆಯೂ ಇರುವುದಿಲ್ಲ. ವಿಶ್ವ ಹಿಂದೂ ಪರಿಷತ್‌, ಎಬಿವಿಪಿ, ಬಿಜೆಪಿ ಸೇರಿದಂತೆ ಪರಿವಾರದ ಸಂಘಟನೆಗಳ ಸಮನ್ವಯ ಸಮಿತಿ ಸಭೆ ಕೂಡ ಇರುವುದಿಲ್ಲ. ಲೋಕಸಭೆ ಚುನಾವಣೆ ಕುರಿತು ಸಹ ಚರ್ಚೆ ನಡೆಯುವುದಿಲ್ಲ ಎಂದು ಹೇಳಲಾಗಿದೆ.

Advertisement

ವಿದ್ಯಾರ್ಥಿ ಹಂತದಲ್ಲಿರುವಾಗಲೇ ಯುವಜನತೆಗೆ ರಾಷ್ಟ್ರೀಯ ವಿಚಾರಗಳ ಕುರಿತು ಅರಿವು, ಆಸಕ್ತಿ ಮೂಡಿಸಬೇಕು ಎಂಬ ಕಾರಣಕ್ಕೆ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಸರಸಂಘಚಾಲಕರು ಕಾಲೇಜು ವಿದ್ಯಾರ್ಥಿಗಳೊಂದಿಗೆ  ಸಂವಾದ ನಡೆಸುತ್ತಿದ್ದಾರೆ. ಸಂಘದ ವಿಚಾರಗಳನ್ನು ತಿಳಿಸುವ ಜತೆಗೆ ವಿದ್ಯಾರ್ಥಿಗಳ ಚಿಂತನೆ, ಭಾವನೆಯನ್ನು ಅರಿಯುವ ಪ್ರಯತ್ನ ಇದಾಗಿದೆ ಎನ್ನಲಾಗಿದೆ.

ಪ್ರತಿ ವರ್ಷ ಎಲ್ಲ ರಾಜ್ಯಗಳಿಗೂ ಸರಸಂಘಚಾಲಕರು ಸಂಘಟನಾತ್ಮಕ ಪ್ರವಾಸ ಕೈಗೊಳ್ಳುತ್ತಾರೆ. ಈ ಬಾರಿ ರಾಜ್ಯ ಪ್ರವಾಸದ ವೇಳೆ ಕೇವಲ ಒಂದು ಬಹಿರಂಗ ಕಾರ್ಯಕ್ರಮದಲ್ಲಷ್ಟೇ ಅವರು ಭಾಗವಹಿಸುತ್ತಿದ್ದಾರೆ. ಆರ್‌ಎಸ್‌ಎಸ್‌ ಪ್ರಚಾರಕರಾಗಿದ್ದ ದಿವಂಗತ ನ.ಕೃಷ್ಣಪ್ಪ ಕುರಿತು “ನಿರ್ಮಾಲ್ಯ’ ಕೃತಿ ಲೋಕಾರ್ಪಣೆ ಕಾರ್ಯಕ್ರಮ ಭಾನುವಾರ ಸಂಜೆ 5.30ಕ್ಕೆ ನಡೆಯಲಿದ್ದು, ಸರಸಂಘಚಾಲಕರು ಪಾಲ್ಗೊಳ್ಳಲಿದ್ದಾರೆ. ಹಿರಿಯ ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ, ಹಿರಿಯ ಲೇಖಕ ಚಂದ್ರಶೇಖರ ಭಂಡಾರಿ, ಆರ್‌ಎಸ್‌ಎಸ್‌ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಭಾಗವಹಿಸಲಿದ್ದಾರೆ.

ಆ.15 ರಂದು ಧ್ವಜಾರೋಹಣ
ಭಾನುವಾರ ಬೆಳಗ್ಗೆ ನಗರಕ್ಕೆ ಆಗಮಿಸುವ ಮೋಹನ್‌ ಭಾಗವತ್‌ ಅವರು ಆ.15ರವರೆಗೆ ಸಂಘಟನಾ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಆ.13ರಂದು ಆರ್‌ಎಸ್‌ಎಸ್‌ ಪ್ರಾಂತ ಕಾರ್ಯಕಾರಿಣಿ ಸಭೆ ಜತೆಗೆ ನಾನಾ ಹಂತದ ಪದಾಧಿಕಾರಿಗಳ ಸಭೆಯನ್ನು ಸರಸಂಘಚಾಲಕರು ನಡೆಸಲಿದ್ದಾರೆ. ಜತೆಗೆ ಸಂಘದ ಕಾರ್ಯಕ್ರಮಗಳ ಕುರಿತೂ ಅವಲೋಕನ ನಡೆಸಲಿದ್ದಾರೆ. ಆ.14ರಂದು ಬೆಂಗಳೂರಿನಲ್ಲಿ ವೈದ್ಯರು, ಉದ್ಯಮಿಗಳು, ಶಿಕ್ಷಣತಜ್ಞರು ಸೇರಿದಂತೆ ಐದಾರು ಮಂದಿ ಗಣ್ಯರನ್ನು ಭೇಟಿಯಾಗಿ ವಿಚಾರ ವಿನಿಮಯ ಮಾಡಲಿದ್ದಾರೆ. ಆ. 15ರಂದು ಬನಶಂಕರಿಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಶಾಲೆಯಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಲಿದ್ದಾರೆ. ಆ.16ರಂದು ಬೆಳಗ್ಗೆ ಕೇರಳದ ಕೊಚ್ಚಿಗೆ ತೆರಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next