ರಬಕವಿ-ಬನಹಟ್ಟಿ: ನಿರುದ್ಯೋಗ ದೇಶದ ಬಹು ದೊಡ್ಡ ಸಮಸ್ಯೆಯಾಗಿದೆ. ಅದಕ್ಕಾಗಿ ಸರ್ಕಾರದ ನಿಯತ್ತು ಸರಿಯಾಗಿರಬೇಕು. ನಾವು ದ್ವೇಷದ ರಾಜಕಾರಣ ಮಾಡದೆ ಅಭಿವೃದ್ದಿ ಕಾರ್ಯಕ್ರಮಗಳ ಕುರಿತು ಮಾತನಾಡುತ್ತೇವೆ. ನಾವು ವಿದ್ಯುತ್, ಆಸ್ಪತ್ರೆ ಕುರಿತು ಮಾತನಾಡುತ್ತೇವೆ ಎಂದು ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಭಗವಂತ ಮಾನ್ ತಿಳಿಸಿದರು.
ಬುಧವಾರ ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್ ನಲ್ಲಿ ಜುಲೈ 1 ರಿಂದ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ. ಶೇ. 3 ರಷ್ಟು ಮನೆಗಳ ವಿದ್ಯುತ್ ಬಿಲ್ ಶೂನ್ಯವಾಗಿರುತ್ತದೆ. ಪಂಜಾಬ್ ರಾಜ್ಯದಲ್ಲಿ ಒಂದು ವರ್ಷದ ಅವಧಿಯಲ್ಲಿ 28042 ಉದ್ಯೋಗಗಳನ್ನು ನೀಡಿ ನಿಮ್ಮ ಮುಂದೆ ನಿಂತಿದ್ದೇನೆ. ಗುತ್ತಿಗೆ ಆಧಾರದ ಮೇಲಿರುವ ನೌಕರರನ್ನು ಖಾಯಃಗೊಳಿಸುತ್ತಿದ್ದೇವೆ. ಪಂಜಾಬ್ ರಾಜ್ಯಕ್ಕೆ ಬೃಹತ್ ಕೈಗಾರಿಕೆಗಳು ಬರುತ್ತಿವೆ. ನಾವು ಉತ್ತಮ ಶಾಲೆ, ಆಸ್ಪತ್ರೆಗಳನ್ನು ನೀಡುತ್ತಿದ್ದೇವೆ. ಉಚಿತ ಶಿಕ್ಷಣ ಆರೋಗ್ಯವನ್ನು ನೀಡುತ್ತಿದ್ದೇವೆ. ರೈತರ ಮತ್ತು ಕೂಲಿ ಕಾರ್ಮಿಕರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣ ಪಂಜಾಬ್ ನಲ್ಲಿ ಪ್ರಾಮಾಣಿಕ ಸರ್ಕಾರ ಅಧಿಕಾರ ನಡೆಸುತ್ತಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಐದೈದು ವರ್ಷ ಆಡಳಿತ ಮಾಡುತ್ತಿವೆ. ರಾಜ್ಯದಲ್ಲಿ ಪಕ್ಷಾಂತರ ಹೆಚ್ಚಾಗಿ ನಡೆಯುತ್ತಿದೆ. ರಾಜ್ಯದ ನಾಯಕರ ಮನೆಗಳಲ್ಲಿ ಹಣ ಎಣಿಕೆ ಮಾಡುವ ಯಂತ್ರಗಳು ದೊರೆಯುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಕರ್ನಾಟಕದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಭ್ರಷ್ಟಾಚಾರ ನಿರ್ಮೂಲನೆಗಾಗಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳನ್ನು ವಿಧಾನ ಸೌಧಕ್ಕೆ ಇಲ್ಲಿಯ ಜನತೆ ಕಳುಹಿಸಬೇಕು. ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಮತದಾರರಿಂದ ಉತ್ತಮ ಬೆಂಬಲ ದೊರಕಿದೆ ಎಂದರು.
ಆಮ್ ಆದ್ಮಿ ಪಕ್ಷ ಪ್ರಾಮಾಣಿಕ ಪಕ್ಷವಾಗಿರುವುದರಿಂದ ಭಾರತೀಯ ಜನತಾ ಪಕ್ಷಕ್ಕೆ ಅಂಜಿಕೆ ಹುಟ್ಟಿದೆ. ಆದ್ದರಿಂದ ಅವರು ಮನೀಷ್ ಸಿಸೋಡಿಯಾ ಅವರನ್ನು ಜೈಲಿಗೆ ಕಳುಹಿಸಿದೆ. ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ರನ್ನು ಸಿಬಿಐ ವಿಚಾರಣೆಗೆ ಕರೆಯುತ್ತಿದ್ದಾರೆ.
Related Articles
ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಕ್ಷಕ್ಕೆ ದೇಶದಲ್ಲಿ ಉತ್ತಮ ಭವಿಷ್ಯವಿದೆ ಎಂದು ಭಗವಂತ ಮಾನ್ ತಿಳಿಸಿದರು.
ಆಮ್ ಆದ್ಮಿ ಪಕ್ಷ ಸಾಮಾನ್ಯ ಜನರ ಪಕ್ಷವಾಗಿದೆ. ಸಾಮಾನ್ಯ ಜನರೇ ನಮ್ಮ ಪ್ರತಿನಿಧಿಗಳಾಗಿದ್ದಾರೆ. 92 ಜನ ಶಾಸಕರಲ್ಲಿ 82 ಜನ ಪ್ರಥಮ ಬಾರಿಗೆ ಶಾಸಕರಾಗಿದ್ದಾರೆ. ಅದರಲ್ಲಿ ನಾನು ಒಬ್ಬ. ಆಮ್ ಆದ್ಮಿ ಪಕ್ಷ ಯಾವುದೆ ಸರ್ವೆದಲ್ಲಿ ಮುಂದೆ ಬರಲಾರದೆ ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದು ಭಗವಂತ ಮಾನ್ ತಿಳಿಸಿದರು.
ಇದನ್ನೂ ಓದಿ: BJP, JDS ಅಭ್ಯರ್ಥಿಗಳಿಗೆ ಠೇವಣಿ ಸಿಗಬಾರದು: ನಾಮಪತ್ರ ಸಲ್ಲಿಸಿ ಪರಮೇಶ್ವರ್ ಕಿಡಿ