Advertisement
ಕೋಟ: ಸಾಮಾನ್ಯ ಕಾರ್ಮಿಕನಾಗಿ ದುಡಿಯುತ್ತಿದ್ದವ ತನ್ನ ಬರಡುಭೂಮಿಯಲ್ಲಿ ಏನಾದರು ಸಾಧಿಸಬೇಕು ಎನ್ನುವ ಹಠಕ್ಕೆ ಬಿದ್ದು ನೀರಾವರಿ ವ್ಯವಸ್ಥೆ ಮಾಡಿ, ಹಲವು ವರ್ಷಗಳಿಂದ ಹಡಿಲು ಬಿದ್ದ ಭೂಮಿಯನ್ನು ಉತ್ತಿ-ಬಿತ್ತಿ ಬಂಗಾರದ ಬೆಳೆ ತೆಗೆವ ಮೂಲಕ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದವರು ಆವರ್ಸೆಯ ಕೃಷ್ಣ ಕುಲಾಲರು. ಇವರ ಸಾಧನೆಗೆ ರಾಜ್ಯ ಸರಕಾರದ ಕೃಷಿ ಪಂಡಿತ ಪ್ರಶಸ್ತಿ ಇನ್ನೊಂದು ಗರಿಯನ್ನೂ ಮೂಡಿಸಿದೆ. ತನ್ನಲ್ಲಿರುವ 4.5 ಎಕರೆ ಭೂಮಿಯಲ್ಲಿ ಸಣ್ಣಪ್ರಮಾಣದಲ್ಲಿ ಕೃಷಿ ಮಾಡುತ್ತಿದ್ದ ಇವರು ಜಿಲ್ಲೆಗೆ ಹೊಸದಾಗಿ ಪರಿಚಯಗೊಂಡಿದ್ದ ಗ್ರಾಮಾಭಿವೃದ್ಧಿ ಯೋಜನೆಯ ಸಂಪರ್ಕಕ್ಕೆ ಬಂದು ಯೋಜನೆಯ ಸದಸ್ಯರಾದರು. ಗುಡ್ಡ ಪ್ರದೇಶವಾಗಿದ್ದ ಇವರ ಜಮೀನಿಗೆ ನೀರಾವರಿ ವ್ಯವಸ್ಥೆ ಇಲ್ಲದಿರುವುದರಿಂದ ಬೇಸಾಯ ಕಷ್ಟವಾಗಿತ್ತು. ಆಗ ನೀರಿಂಗಿಸುವಿಕೆ, ಮಳೆನೀರು ಕೊಯ್ಲು ವಿಧಾನಗಳನ್ನು ಜಮೀನಿನಲ್ಲಿ ಅಳವಡಿಸಿಕೊಂಡು ಕೃಷಿ ಹೊಂಡಗಳನ್ನು ಮಾಡಿ ನೀರು ಪಡೆದು ಕೃಷಿ ಮುಂದುವರಿಸಿದರು. ಕೇವಲ 7 ನೇ ತರಗತಿ ಕಲಿತಿದ್ದರೂ ಅಪಾರವಾದ ಕೃಷಿ ಜ್ಞಾನದಿಂದ ಕೃಷಿ ಪಂಡಿತರಿಗೆ ಪಾಠ ಹೇಳುವಷ್ಟು ತಿಳಿದುಕೊಂಡಿದ್ದಾರೆ.
ಆವರ್ಸೆ ಗ್ರಾಮವನ್ನು ನಿರಂತರವಾಗಿ ಮೂರು-ನಾಲ್ಕು ವರ್ಷಗಳ ಕಾಲ ಸರಕಾರ ಸಂಪೂರ್ಣ ಸಾವಯವ ಗ್ರಾಮವಾಗಿ ಘೋಷಿಸಲ್ಪಟ್ಟಿತ್ತು. ಹೀಗೆ ಸಾವಯವಗೊಳಿಸುವಲ್ಲಿ ಕುಲಾಲರ ಕೊಡುಗೆ ಸಾಕಷ್ಟಿದೆ. ಗ್ರಾಮಾಭಿವೃದ್ಧಿ ಯೋಜನೆಯ ಜತೆಗೂಡಿ ರೈತರ ಮನೆ-ಮನೆಗೆ ಭೇಟಿ ನೀಡಿ ಮಾಹಿತಿ, ಮಾರ್ಗದರ್ಶನ ನೀಡಿ, ಅವರ ಜಮೀನಿನಲ್ಲಿ ದುಡಿದು ಗ್ರಾಮವನ್ನು ಸಾವಯವಗೊಳಿಸಿದ್ದರು. ಸಮಗ್ರ ಕೃಷಿ ಅಳವಡಿಕೆ
ಇವರು ಕೇವಲ ಒಂದೇ ವಿಧಾನದ ಕೃಷಿಗೆ ಸೀಮಿತವಾಗಿಲ್ಲ ಭತ್ತ, ತೆಂಗು, ಅಡಿಕೆ, ಗೇರು, ಬಾಳೆ, ಕಾಳುಮೆಣಸು, ವೀಳ್ಯದೆಲೆ, ಅಲಸಂಡೆ, ಬೆಂಡೆ, ಕುಂಬಳಕಾಯಿ ಮುಂತಾದ ತರಕಾರಿಗಳು, ಜೇನು ಸಾಕಾಣಿಕೆ, ಕೋಳಿಸಾಕಾಣಿಕೆ, ನರ್ಸರಿ, ಅಗರ್‌ವುಡ್ ಹೀಗೆ ಸಮಗ್ರ ಕೃಷಿ ಪ್ರಪಂಚವೇ ಇವರ ಜಮೀನಿನಲ್ಲಿದೆ. ನಾಟಿ ಕೋಳಿ ಫಾರ್ಮ್ ಅಭಿವೃದ್ಧಿಗೊಳಿಸಿರುವ ಇವರು ಮೊಟ್ಟೆ ಹಾಗೂ ಮಾಂಸಕ್ಕಾಗಿ ಅವುಗಳನ್ನು ಮಾರಾಟ ಮಾಡುತ್ತಾರೆ. ದೇಶೀಯ ತಳಿಯ ಹಸುಗಳನ್ನು ಸಾಕಣೆ ಮಾಡುವ ಮೂಲಕ ಹೈನುಗಾರಿಕೆಯಲ್ಲೂ ತೊಡಗಿಸಿಕೊಂಡಿದ್ದಾರೆ.
Related Articles
Advertisement
ಪುರಸ್ಕಾರಗಳುಕೃಷಿ ಇಲಾಖೆಗೆ ಸಂಪನ್ಮೂಲ ವ್ಯಕ್ತಿಯಾಗಿರುವ ಇವರು ರಾಜ್ಯದ ಹಲವು ಕಡೆ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾರೆ. ರಾಜ್ಯಮಟ್ಟದ ಕೃಷಿಕ ಸಾಧಕ ಪ್ರಶಸ್ತಿ, ಕೃಷಿ ಪಂಡಿತ ಪ್ರಶಸ್ತಿ, 2011-12 ರಲ್ಲಿ ಸಾವಯವ ಕೃಷಿ ಕ್ಷೇತ್ರದಲ್ಲಿನ ಸಾಧನೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ಇವರ ಪತ್ನಿ ಜ್ಯೋತಿ ಕುಲಾಲ್ ಅವರು ಪತಿಯ ಕೆಲಸದಲ್ಲಿ ಹೆಗಲಾಗಿದ್ದು ಇವರಿಗೆ 2008-09 ರಲ್ಲಿ ರಾಜ್ಯಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿ ಬೆಂಗಳೂರು ಕೃಷಿ ವಿವಿಯಿಂದ ಲಭ್ಯವಾಗಿದೆ. ಜತೆಗೆ ಜಿಲ್ಲಾ ಮಟ್ಟ, ತಾಲೂಕು ಮಟ್ಟದ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಕೃಷ್ಣ ಕುಲಾಲರಿಗೆ ಸಂದಿದೆ. ಯಶಸ್ಸಿಗೆ ಗ್ರಾಮಾಭಿವೃದ್ಧಿ ಯೋಜನೆ ಕಾರಣ
ಕೃಷಿಯಲ್ಲಿ ಖಂಡಿತ ಲಾಭವಿದೆ. ಆದರೆ ಕಷ್ಟಪಟ್ಟು ದುಡಿಯುವ ಮನಃಸ್ಥಿತಿ ಬೇಕು ಹಾಗೂ ಲಾಭ-ನಷ್ಟದ ಲೆಕ್ಕಾಚಾರ ಹಾಕುವ, ನಷ್ಟವಾದ ಬೆಳೆಯನ್ನು ಬಿಟ್ಟು ಅದೇ ಕ್ಷೇತ್ರದಲ್ಲಿ ಪರ್ಯಾಯ ಬೆಳೆ ಬೆಳೆಯುವ ಸಂಶೋಧನಾತ್ಮಕ ಗುಣ ಅಗತ್ಯವಿದೆ. ಸಮಗ್ರ ಕೃಷಿಯಿಂದ ಅಧಿಕ ಲಾಭ ಸಾಧ್ಯವಿದೆ ಹಾಗೂ ಸಾಫ್ಟ್ ವೇರ್ ನೌಕರಿಯಂತಹ ವೈಟ್ ಕಾಲರ್ ಜಾಬ್‌ಗ ಕಡಿಮೆ ಇಲ್ಲದೆ ಕೃಷಿಯಿಂದ ಆದಾಯ ಪಡೆಯಲು ಸಾಧ್ಯವಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಮಾನ್ಯ ಕಾರ್ಮಿಕನಾಗಿದ್ದ ನನಗೆ ಮಾಹಿತಿ, ಮಾರ್ಗದರ್ಶನಗಳನ್ನು ನೀಡಿ, ಅಗತ್ಯ ಸೌಕರ್ಯಗಳನ್ನು ಒದಗಿಸಿ ಕೃಷಿ ಪಂಡಿತನಾಗುವ ಮಟ್ಟಿಗೆ ಬೆಳೆಸಿತು. ಹೀಗಾಗಿ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಹಾಗೂ ಯೋಜನೆಯ ಅಧಿಕಾರಿಗಳು, ಕೃಷಿ ಇಲಾಖೆಯ ಅಧಿಕಾರಿಗಳ ಸಹಕಾರವನ್ನು ಮರೆಯಲು ಅಸಾಧ್ಯ.
-ಕೃಷ್ಣ ಕುಲಾಲ್ ಆವರ್ಸೆ -ರಾಜೇಶ್ ಗಾಣಿಗ ಅಚ್ಲಾಡಿ