ಮಂಗಳೂರು: ಈ ಹಿಂದೆ ಕಟೀಲು ಯಕ್ಷಗಾನ ಮೇಳದಲ್ಲಿದ್ದ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ಶೀಘ್ರದಲ್ಲೇ ಹೊಸ ಮೇಳ ಆರಂಭಗೊಳ್ಳಲಿದ್ದು, ಸಿದ್ಧತೆಗಳು ನಡೆಯುತ್ತಿವೆ.
ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ಹೊಸ ಮೇಳವೊಂದು ಆರಂಭವಾಗಲಿದೆ ಎಂಬ ಊಹಾಪೋಹ ಹಲವು ತಿಂಗಳುಗಳಿಂದ ಕೇಳಿಬರುತ್ತಿತ್ತು. ಇದೀಗ ಅದಕ್ಕೆ ಪುಷ್ಟಿ ನೀಡುವಂತೆ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ಮೇಳ ಆರಂಭವಾಗಲಿದೆ.
ಈ ಬಗ್ಗೆ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ,”ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಮೇಳದ ಭಾಗವತಿಕೆಗೆ ಸಂಬಂಧಪಟ್ಟಂತೆ ಕ್ಷೇತ್ರದ ಕಮಿಟಿ-ನನ್ನ ನಡುವೆ ಮಾತುಕತೆ ನಡೆದಿದೆ. ಆ ಮೇಳದಲ್ಲಿ ನಾನು ಕಲಾವಿದ ಇರಬಹುದಷ್ಟೇ; ಆ ಮೂಲಕ ನಾನು ಸುಬ್ರಹ್ಮಣ್ಯ ದೇವರ ಸೇವೆ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಆಶ್ಲೇಷ ನಕ್ಷತ್ರ ಹಿನ್ನಲೆ ಕುಕ್ಕೆಯಲ್ಲಿ ಭಕ್ತರ ದಂಡು: ರವಿವಾರ ರಾತ್ರಿಯಿಂದಲೇ ಸರತಿ ಸಾಲು
ಪಾವಂಜೆ ಶ್ರೀಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಹೆಸರಿನಲ್ಲಿ ಮೇಳ ಆರಂಭದ ಕುರಿತು ಕಳೆದ ಮೂರು ವರ್ಷಗಳ ಹಿಂದೆಯೇ ಚಿಂತನೆ ಇತ್ತು. ಸದ್ಯ ಪ್ರಥಮ ಹಂತದಲ್ಲಿದೆ. ಪಟ್ಲ ಸತೀಶ್ ಶೆಟ್ಟಿ ಹೆಸರು ಕೇಳಿಬಂದ ಕಾರಣ ಈ ವಿಚಾರ ಮುನ್ನೆಲೆಗೆ ಬಂದಿದೆ. ಪಟ್ಲ ಸತೀಶ್ ಶೆಟ್ಟಿ ಅವರನ್ನು ಭಾಗವತರಾಗಿ ಆಯ್ಕೆ ಮಾಡುವ ಕುರಿತು ಚರ್ಚೆ ನಡೆಯುತ್ತಿದ್ದು, ಕಮಿಟಿ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್ ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಕಟೀಲಿನ ಆರು ಮೇಳಗಳಲ್ಲಿ ಕಲಾವಿದರ ವರ್ಗಾವಣೆ ಮಾಡಲಾಗಿತ್ತು. ಈ ವೇಳೆ ಐದನೇ ಮೇಳದಲ್ಲಿದ್ದ ಪಟ್ಲರನ್ನು ನಾಲ್ಕನೇ ಮೇಳಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ಬೆಳವಣಿಗೆಯನ್ನು ವಿರೋಧಿಸಿ ಐದನೇ ಮೇಳದ ಕೆಲವು ಕಲಾವಿದರು ಬಂಡೆದಿದ್ದರು. ಇದಾಗಿ ವರ್ಷಗಳ ನಂತರ ಪಟ್ಲರನ್ನೇ ಮೇಳದಿಂದ ಹೊರಹಾಕಲಾಗಿತ್ತು. ಇದು ವಿವಾದಕ್ಕೂ ಕಾರಣವಾಗಿತ್ತು.
ಕಟೀಲು ಮೇಳದಿಂದ ಬಂಡಾಯವೆದ್ದಿದ್ದ ಕೆಲವು ಕಲಾವಿದರು ನಂತರ ಇತರ ಯಕ್ಷಗಾನ ಮೇಳಗಳಿಗೆ ಸೇರಿದ್ದರು. ಈ ಕಲಾವಿದರು ಮತ್ತೆ ಪಟ್ಲರ ಜೊತೆ ಸೇರಬಹುದು ಎನ್ನಲಾಗಿದೆ.