Advertisement
ಹೇರ್ ಸ್ಟೈಲ್ ಚೇಂಜ್ ಮಾಡ್ತಾಳೆ. ಈ ಬಗ್ಗೆ ಯಾರಾದ್ರೂ ವಿಚಾರಿಸಿದ್ರೆ-“ಜನ ಚೇಂಜ್ ಕೇಳ್ತಾರೆ’ ಎಂದು ಹೇಳಿ ಕಣ್ಣು ಮಿಟುಕಿಸಿ ಹೋಗಿಬಿಡ್ತಾಳೆ. ಇನ್ನೂ ವಿವರಿಸಿ ಹೇಳುವುದಾದರೆ- ತನಗೆ ಹೇಗೆ ಇಷ್ಟವೋ ಹಾಗೆ ಬದುಕ್ತಾ ಇದ್ದಾಳೆ. ಫ್ಯಾಮಿಲಿ ಪರ್ಸನ್ ಆದ್ರೆ ಹೀಗೆಲ್ಲ ಬಿಂದಾಸ್ ಆಗಿ ಬದುಕಲು ಸಾಧ್ಯವಿಲ್ಲ. ಸೋ, ಅವಳು ಸಿಂಗಲ್ ಅಂತ ಧಾರಾಳವಾಗಿ ಹೇಳಬಹುದು…ಅಕೌಂಟ್ಸ್ ವಿಭಾಗದ ಕ್ಲರ್ಕ್ ಮಂಗಳಾ ಅವರನ್ನು ಕುರಿತು ಎಚ್‌ಆರ್ ವಿಭಾಗದ ಮುಖ್ಯಸ್ಥರು ಹೇಳಿದ್ದ ಮಾತುಗಳಿವು.
Related Articles
Advertisement
“ನಮುª ಕೊಪ್ಪಳ ಹತ್ರ ಒಂದು ಹಳ್ಳಿ ಸಾರ್. ಅಪ್ಪ ಕೃಷಿಕ. ನಾವು ಒಟ್ಟು ಐದು ಮಂದಿ ಹೆಣ್ಣು ಮಕ್ಕಳು! ಬಡವರ ಮನೇಲಿ ಸಾಲುಸಾಲಾಗಿ ಐದು ಹೆಣ್ಮಕ್ಕಳು ಅಂದಮೇಲೆ ಬಿಡಿಸಿ ಹೇಳಬೇಕಾ? ನಮಗೆ ಉಸಿರಾಟದಷ್ಟೇ ಸಹಜವಾಗಿ ಸಮಸ್ಯೆಗಳೂ ಜೊತೆಯಾಗುತ್ತಿದ್ದವು. ಅಪ್ಪನಿಗೆ, ಪಿತ್ರಾರ್ಜಿತವಾಗಿ ಬಂದ ಎರಡೆಕರೆ ಜಮೀನಿತ್ತು, ಆದರೆ, ಮಳೆ ಆಶ್ರಯಿಸಿದ್ದ ಕೃಷಿ ಪದ್ಧತಿಯಿಂದಾಗಿ, ಹೆಚ್ಚಿನ ಬೆಳೆ ತೆಗೆಯಲು ಸಾಧ್ಯವಾಗಲೇ ಇಲ್ಲ. ಮಳೆ ಬಿದ್ದ ವರ್ಷ ನಮ್ಮ ಜಮೀನಿನಲ್ಲಿ, ಬೀಳದೇ ಇದ್ದ ವರ್ಷ ಶ್ರೀಮಂತರ ಮನೆಯಲ್ಲಿ ಕೆಲಸ ಮಾಡುವುದು ಅಪ್ಪನ ಕೆಲಸ-ಕರ್ತವ್ಯ ಎರಡೂ ಆಗಿತ್ತು. ಹಳ್ಳಿ ಅಂದಮೇಲೆ ಕೇಳಬೇಕಾ ಸಾರ್? ಹೆಣ್ಣು ಮಕ್ಕಳು ಜಾಸ್ತಿ ಓದಿದ್ರೆ ಗಂಡು ಸಿಗೋದಿಲ್ಲ ಎಂಬ ಪುರಾತನ ನಂಬಿಕೆಗೆ ಬಲಿಯಾಗಿ, ಏಳನೇ ಕ್ಲಾಸ್ ಮುಗೀತಿ ದ್ದಂತೆಯೇ ನನ್ನ ಇಬ್ಬರೂ ಅಕ್ಕಂದಿರನ್ನು ಸ್ಕೂಲ್ ಬಿಡಿಸಿಬಿಟ್ರಾ.
ಮನೇಲಿ ನಾನು ಮೂರನೇ ಮಗಳು. ಮಧ್ಯದವಳು ಎಂಬ ಕಾರಣಕ್ಕೇ ಇರಬೇಕು: ನನಗೆ ತುಸು ಹೆಚ್ಚೇ ಅಭದ್ರತೆ ಇತ್ತು. ಯಾವಾಗಲೂ ಅಪ್ಪನಿಗೆ ಅಂಟಿಕೊಂಡೇ ಇರ್ತಿದ್ದೆ. ಇದನ್ನೇ ನೆಪಮಾಡಿಕೊಂಡು ಅಪ್ಪ ನನಗೆ “ಬಾಲ’ ಎಂದೇ ಹೆಸರು ಕಟ್ಟಿದ್ದರು. ಅವರು ಇಡೀ ದೇಹ, ನಾನು ಯಾವಾಗಲೂ ಅದಕ್ಕೆ ಅಂಟಿಕೊಂಡೇ ಇರುವ ಬಾಲ ಎಂಬುದು ಅವರ ಮಾತಿನ ಅರ್ಥವಾಗಿತ್ತು. ಬಡತನ, ನಮ್ಮ ಕುಟುಂಬಕ್ಕೆ ಶಾಪದಂತೆ ಅಂಟಿಕೊಂಡಿದೆ. ಹಾಗಾಗಿ ನಾವು ಯಾವತ್ತೂ ಶ್ರೀಮಂತಿಕೆಯ ಕನಸು ಕಾಣಬಾರದು ಎಂಬುದು ನಮಗೆ ನಾವೇ ಹಾಕಿಕೊಂಡ ಲಕ್ಷ್ಮಣ ರೇಖೆಯಾಗಿತ್ತು.
ಅವತ್ತೂಂದು ರಾತ್ರಿ ನಿದ್ರೆ ಬಾರದೆ ಹೊರಳಾಡುತ್ತಿದ್ದೆ. ಆಗಲೇ ಅಪ್ಪನ ಮಾತು ಕೇಳಿಸಿತು. ಈ ಹೊತ್ತಿನಲ್ಲಿ ಏನು ಹೇಳುತ್ತಿರಬಹುದು ಎಂಬ ಕುತೂಹಲದಿಂದಲೇ ಆಲಿಸಿದೆ: “ನಾನಾದ್ರೂ ಏನ್ಮಾಡಲಿ ಹೇಳು? ಇಬ್ಬರೂ ಬೆಳೆದು ನಿಂತಿದಾರೆ. ಬೇಗ ಮದುವೆ ಮಾಡಬೇಕು. ಇಲ್ಲಾಂದ್ರೆ ಜನ ಆಡಿಕೊಳ್ತಾರೆ. ವ್ಯಕ್ತಿಯೊಬ್ಬನಿಗೆ ಕಷ್ಟ ಕೊಡಬೇಕು ಅನಿಸಿದ್ರೆ- ಹೆಣ್ಣು ಮಕ್ಕಳು ಅಥವಾ ಬಡತನ-ಎರಡರಲ್ಲಿ ಒಂದು ಕೊಟ್ರೆ ಸಾಕು. ದೇವ್ರು ನಮಗೆ ಎರಡನ್ನೂ ಕೊಟ್ಟಿದಾನೆ. ಏನ್ಮಾಡಲಿ ಹೇಳು…ಒಂದೇ ಒಂದು ಗಂಡು ಮಗು ಇದ್ದಿದ್ರೆ-ಕೊನೆಗಾಲದಲ್ಲಿ ನಮ್ಮನ್ನು ನೋಡಿಕೊಳ್ಳಲಿಕ್ಕೆ, ಅಕ್ಕ ತಂಗೀರ ಮದುವೆಯ ಸಾಲ ತೀರಿಸೋಕ್ಕೆ ದಾರಿ ಆಗ್ತಿತ್ತು. ಅವನಿಗೆ ನಮ್ಮ ಕಷ್ಟವನ್ನೆಲ್ಲ ಹೇಳಿ ನೆಮ್ಮದಿಯಿಂದ ಸಾಯಬಹುದಿತ್ತು. ನಮ್ಮ ಕರ್ಮಕ್ಕೆ, ಎಲ್ಲಾ ಹೆಣ್ಣುಮಕ್ಕಳೇ ಆಗಿಬಿಟುÌ…’ ಅಪ್ಪ ಹೀಗೆ ಹೇಳುತ್ತಿದ್ದಂತೆಯೇ ಅಮ್ಮ- “ಭಗವಂತಾ, ಒಂದೇ ಸಲ ನಮ್ಮನ್ನ ಕರ್ಕೊಂಡ್ ಬಿಡಪ್ಪಾ. ಯಾಕೆ ಹೀಗೆ ದಿನಾದಿನ ಪರೀಕ್ಷೆ ಮಾಡ್ತೀಯ?’ ಅನ್ನುತ್ತ ಬಿಕ್ಕಿ ಬಿಕ್ಕಿ ಅತ್ತಳು.
ಒಬ್ಬ ಗಂಡು ಮಗ ಇದ್ದಿದ್ರೆ ನಮ್ಮ ಕಷ್ಟಗಳೆಲ್ಲ ಕಳೆದು ಹೋಗಿರ್ತಿದುÌ. ಹೆಣ್ಣು ಯಾವತ್ತಿದ್ರೂ ಹುಣ್ಣಿದ್ದ ಹಾಗೆ ಎಂಬರ್ಥದಲ್ಲಿ ಅಪ್ಪ-ಅಮ್ಮ ಮಾತಾಡಿದರಲ್ಲ: ಅವತ್ತೇ ನಾನೊಂದು ನಿರ್ಧಾರಕ್ಕೆ ಬಂದೆ. ಇವತ್ತಿಂದ ನಾನೇ ಈ ಮನೆಯ ಗಂಡು ಮಗ. ನನ್ನ ಪರ್ಸನಲ್ ಲೈಫ್ ಏನಾದ್ರೂ ಪರವಾಗಿಲ್ಲ. ಹೆತ್ತವರಿಗೆ ನೆರವಾಗಬೇಕು. ತಂಗಿಯರಿಗೆ ಮದುವೆ ಮಾಡಬೇಕು. ಕೊನೆಗಾಲದಲ್ಲಿ ಅಪ್ಪ-ಅಮ್ಮನಿಗೆ ಆಸರೆಯಾಗ ಬೇಕು. ಹೀಗೆಲ್ಲಾ ಆಗಬೇಕಾದ್ರೆ ಮೊದಲು ಚೆನ್ನಾಗಿ ಓದಬೇಕು. ಆಮೇಲೆ ನೌಕರಿ ಹಿಡಿಯಬೇಕು. ಒಂದೊಂದೇ ರುಪಾಯಿ ಜೋಡಿಸಿ, ಅದರಿಂದಲೇ ಕಷ್ಟಗಳನ್ನು ಎದುರಿಸ್ತಾ ಹೋಗಬೇಕು ಅಂದುಕೊಂಡೆ. ಈ ಮಧ್ಯೆ ಇಬ್ಬರು ಅಕ್ಕಂದಿರಿಗೆ ಮದುವೆ ಯಾಯಿತು. ಆ ಕಾರಣಕ್ಕೇ ಇದ್ದ ಜಮೀನನ್ನೂ ಮಾರಬೇಕಾಗಿ ಬಂತು. ಜಮೀನಿಗಿಂತ ಮಕ್ಕಳ ಭವಿಷ್ಯ ಮುಖ್ಯ ಎಂದು ಅಮ್ಮನೂ ಹೇಳಿದ್ದರಿಂದ, ಕೂಲಿ ಮಾಡಿಕೊಂಡೇ ಬದುಕಿದರಾಯ್ತು ಎಂದುಕೊಂಡು ಅಪ್ಪ ಮೌನಿಯಾದರು.
ಅಂದುಕೊಂಡಂತೆಯೇ ನಾನು ಡಿಗ್ರಿ ಮುಗಿಸಿದೆ. ಕೆಲಸಕ್ಕೂ ಸೇರಿಕೊಂಡೆ. ಪೈಸೆಗೆ ಪೈಸೆ ಸೇರಿಸಿ ಊರಲ್ಲಿ ಮನೆ ಕಟ್ಟಿಸಿದೆ. ಇದನ್ನಂತೂ ಅಪ್ಪ-ಅಮ್ಮ ಇಬ್ಬರೂ ನಿರೀಕ್ಷಿಸಿರಲಿಲ್ಲ. ಹುಡುಗಿ ಬೆಂಗಳೂರಲ್ಲಿದ್ದಾಳೆ. ಸಂಪಾದನೆ ಮಾಡ್ತಾಳೆ ಎಂದು ಗೊತ್ತಾಗುತ್ತಿ ದ್ದಂತೆಯೇ ಗಂಡಿನ ಕಡೆಯವರು ಬರತೊಡಗಿದರು. ಅಕಸ್ಮಾತ್, ಮದುವೆಯಾಗಿಬಿಟ್ಟರೆ ಅಪ್ಪ-ಅಮ್ಮನ ಬದುಕು ಸೂತ್ರ ಹರಿದ ಗಾಳಿಪಟದಂತೆ ಆಗುತ್ತದೆ ಅನ್ನಿಸಿತು. ಹೆಂಡತಿಯ ಅಷ್ಟೂ ಸಂಬಳ ನನಗೇ ಬೇಕು ಎಂದು ಅದೆಷ್ಟೋ ಗಂಡುಗಳು ಮದುವೆಯ ನಂತರ ರಂಪ ಮಾಡಿದ ಕಥೆಗಳೂ ಗೊತ್ತಿದ್ದವು. ಆದರೆ, ಈಗಲೇ ನನಗೆ ಮದುವೆ ಬೇಡ ಎಂದು ನೇರವಾಗಿ ಹೇಳಿ ಹೆತ್ತವರಿಗೆ ಬೇಸರ ಮಾಡಲು ಇಷ್ಟವಿರಲಿಲ್ಲ. ಆಗ ನಾನೇನು ಮಾಡ್ತಿದ್ದೆ ಗೊತ್ತೆ? ಗಂಡಿನ ಕಡೆಯವರು ಬರ್ತಿದಾರೆ ಅನ್ನುವ ದಿನ ಬಾಬ್‌ಕಟ್ ಮಾಡಿಸಿಕೊಂಡು, ವಿಪರೀತ ಮಾಡ್ ಅನ್ನುವಂಥ ಡ್ರೆಸ್ ಹಾಕಿಕೊಂಡು ಅಥವಾ ಬಾಲ್ಡಿ ಮಾಡಿಸಿಕೊಂಡು ಹೋಗಿಬಿಡುತ್ತಿದ್ದೆ. ಈ ಅವತಾರದಲ್ಲಿ ನನ್ನನ್ನು ಕಂಡವರು, ಹುಡುಗಿ ಸರಿಯಿಲ್ಲ ಎಂದೋ, ಹುಡುಗಿ ಚೆನ್ನಾಗಿಲ್ಲ ಎಂದೋ ಕಾರಣ ಹೇಳಿ ಹೋಗಿಬಿಡುತ್ತಿದ್ದರು. ಒಂದು ಬಾರಿಯಂತೂ ನನ್ನನ್ನು ನೋಡಲು ಬಂದಿದ್ದವರು ಹೊರಡುವ ಮುನ್ನ ಅಪ್ಪನನ್ನು ಹೊರಗೆ ಕರೆದು-“ದೊಡ್ಡ ಹುಡುಗಿ ಬೇಡ. ಚಿಕ್ಕವಳನ್ನು ಮಾಡಿಕೊಡ್ತೀರಾ ನೋಡಿ’ ಎಂದುಬಿಟ್ಟಿದ್ದರು. ಇದನ್ನೇ ಪಾಯಿಂಟ್ ಥರಾ ಇಟ್ಕೊಂಡು ಒಬ್ಬಳು ತಂಗಿಗೆ ಮದುವೆ ಮಾಡಿಸಿದೆ. ಹೀಗೆ, ಮೊದಲಿನಿಂದಲೂ ಕಷ್ಟಗಳ ಮಧ್ಯೆಯೇ ಬೆಳೆದು ಬಂದೆನಲ್ಲ ಸಾರ್…ಅದೇ ಕಾರಣ ಇರಬಹುದು: ಎಲ್ಲರೊಂದಿಗೆ ರಾéಶ್ ಆಗಿ ನಡೆದುಕೊಳ್ಳುವುದು ಅಭ್ಯಾಸ ಆಗಿಹೋಯ್ತು. ಹೀಗೆಲ್ಲಾ ವರ್ತಿಸಬಾರದು ಅಂತ ತುಂಬಾ ಸಲ ಅಂದೊRಳ್ತಿದ್ದೆ. ಆದರೆ ಇದ್ದಕ್ಕಿದ್ದಂತೆಯೇ ಸಿಟ್ಟು ಬಂದು ಎಲ್ಲವೂ ಕೈ ಮೀರಿ ಹೋಗುತ್ತಿತ್ತು…’
ನಾನು ಹೇಳಬೇಕಿರುವುದೆಲ್ಲಾ ಮುಗೀತು ಎಂಬಂತೆ ಮೌನಿ ಯಾದಳು ಮಂಗಳಾ. ಆಕೆಯ ರಫ್ ಆ್ಯಂಡ್ ಟಫ್ ವರ್ತನೆ, ಪದೇ ಪದೆ ಬದಲಾಗುತ್ತಿದ್ದ ಗೆಟಪ್, ಕೆಲಸ ಕಳ್ಕೊàಬಾರದು ಎಂಬಂತೆ ಇನ್ನಿಲ್ಲದ ಶ್ರದ್ಧೆಯಿಂದ ದುಡಿಯುತ್ತಿದ್ದುದರ ಹಿಂದಿದ್ದ ರಹಸ್ಯವೆಲ್ಲಾ ಗೊತ್ತಾಯಿತು. ಕಾಯಿಲೆಯ ಸ್ವರೂಪ ಗೊತ್ತಾದರೆ ಚಿಕಿತ್ಸೆ ತುಂಬಾ ಸುಲಭ. “ಇನ್ನು ನಾಲ್ಕೇ ತಿಂಗಳಲ್ಲಿ ಡಿಪ್ರಶನ್ ಎಂಬ ಪದವೇ ಗೊತ್ತಿಲ್ಲದಂತೆ ನಿಮ್ಮನ್ನು ಬದಲಿಸ್ತೇನೆ. ಆರಾಂ ಆಗಿರಿ’ ಎಂದು ಧೈರ್ಯ ಹೇಳಿದ್ದೆ.
ಎಲ್ಲರ ನಿರೀಕ್ಷೆಯೂ ಉಲ್ಟಾ ಆಗುವಂತೆ ಅದೊಂದು ದಿನ ದಿಢೀರನೆ ನೌಕರಿ ಬಿಟ್ಟಳು ಮಂಗಳಾ, ಕಾರ್ಪೊರೇಟ್ ಕಂಪನಿಯ ಕೆಲಸವಲ್ಲವೇ? ಕೆಲವೇ ದಿನಗಳಲ್ಲಿ ಆಕೆ ಮರೆತೂ ಹೋದಳು. ನೋಡನೋಡುತ್ತಲೇ ಎರಡು ವರ್ಷಗಳು ಕಳೆದುಹೋದವು. ವಾರದ ಹಿಂದೆ ಅದೇ ಮಂಗಳಾ. ಬೆಂಗಳೂರಿನಲ್ಲಿ ಆಕಸ್ಮಿಕವಾಗಿ ಮೆಟ್ರೋ ಸ್ಟೇಷನ್‌ನಲ್ಲಿ ಸಿಕ್ಕಿಬಿಟ್ಟಳು. “ವಯಸ್ಸಾಯ್ತು ಅಲ್ವ ಸಾರ್, ಅದೇ ಕಾರಣದಿಂದ ಅಪ್ಪನಿಗೆ ಕೂಲಿ ಕೆಲಸ ಮಾಡಲು ಆಗ್ತಿರಲಿಲ್ಲ. ಕೊನೆಯ ತಂಗಿಯೂ ಮದುವೆ ವಯಸ್ಸಿಗೆ ಬಂದಿದ್ಲು. ಅಪ್ಪ-ಅಮ್ಮನಿಗೆ ಆಸರೆಯಾಗಿ ಮನೇಲಿ ಒಬ್ಬರು ಇರಲೇಬೇಕಿತ್ತು. ಹಾಗಾಗಿ ಕೆಲಸ ಬಿಟ್ಟೆ. ಸೇವಿಂಗ್ಸ್ ರೂಪದಲ್ಲಿ ದುಡ್ಡು ಸಿಕ್ತಲ್ಲ; ಅದರಲ್ಲಿ ನಾಲ್ಕು ಹಸು ತಗೊಂಡೆ. ಉಳಿದಿದ್ದ ಹಣದಲ್ಲಿ ತಂಗಿಯ ಮದುವೆ ಮಾಡಿದೆ. ಈಗ ಅಪ್ಪ ಕೂಲಿಗೆ ಹೋಗಲ್ಲ. ಬೆಳಗ್ಗಿಂದ ಸಂಜೆಯವರೆಗೆ ಹಸು ಮೇಯಿಸ್ತಾರೆ. ನಾನು-ಅಮ್ಮ ಮನೇಲಿದ್ದು ಹಾಲು ಮಾರ್ತೀವಿ. ಅಪ್ಪನಿಗೆ ಕಣ್ಣಿನ ಆಪರೇಷನ್ ಆಗಬೇಕಿತ್ತು. ಆಸ್ಪತ್ರೆಗೆ ಕರ್ಕೊಂಡು ಬಂದಿದೀನಿ. ಹಿಂದೊಮ್ಮೆ- “ಈ ಹೆಣ್ಣುಮಕ್ಕಳು ನಮ್ಮ ಪಾಲಿಗೆ ನೋವು ಕೊಡುವ ಹುಣ್ಣುಗಳು’ ಎಂದು ಅಪ್ಪ ಹೇಳಿದ್ದರು: ಇವತ್ತು ಅದೇ ಅಪ್ಪ, ನೀನು ನಮ್ಮ ಮನೆಯ ಲಕ್ಷ್ಮಿದೇವಿ ಮಗಳೇ. ಗಂಡು ಮಗನಿಗಿಂತ ಹೆಚ್ಚಾಗಿ ನೋಡಿಕೊಂಡಿದೀಯ. ನಿನ್ನ ಮದುವೇನ ನೋಡಿಬಿಟ್ರೆ ನೆಮ್ಮದಿಯಾಗಿ ಕಣ್ಮುಚ್ಚಬಹುದು ಅಂತಿದ್ದಾರೆ. ಇಷ್ಟು ದಿನ ಒಳ್ಳೇದು ಮಾಡಿದ ದೇವರು ಮುಂದೆಯೂ ಒಳ್ಳೆಯದು ಮಾಡ್ತಾನೆ ಎಂಬ ನಂಬಿಕೆಯಿದೆ. ನಾನು ಇಳಿಯೋ ಸ್ಟೇಷನ್ ಬಂತು ಸಾರ್. ಹೋಗಿಬತೇìನೆ…’ ಅಂದಳು.
“ನೀನು “ಮಂಗಳ’ ಅಲ್ಲಮ್ಮಾ. “ಶುಭಮಂಗಳ!’ ಒಳ್ಳೆಯವರಿಗೆ ಯಾವತ್ತೂ ಕೆಟ್ಟದಾಗೋದಿಲ್ಲ, ನೆಮ್ಮದಿಯಾಗಿರು’ ಎನ್ನುತ್ತಾ ಕೈಬೀಸಿದೆ…
ಎ.ಆರ್. ಮಣಿಕಾಂತ್