Advertisement

ಭಗವದ್ಗೀತೆ ಮನುಕುಲಕ್ಕೆ ಶ್ರೇಷ್ಠ ಗ್ರಂಥ: ಡಾ|ಗುರುರಾಜ

01:12 PM Dec 12, 2021 | Team Udayavani |

ಬೀದರ: ಸತ್ಯ, ನ್ಯಾಯ, ನೀತಿ ಮತ್ತು ಧರ್ಮದ ಮಾರ್ಗ ತೋರುವ ಭಗವದ್ಗೀತೆ ಮನುಕುಲಕ್ಕೆ ಶ್ರೇಷ್ಠ ಗ್ರಂಥವಾಗಿದೆ ಎಂದು ಖ್ಯಾತ ಶಿಕ್ಷಣ ತಜ್ಞ ಡಾ| ಗುರುರಾಜ ಕರಜಗಿ ನುಡಿದರು.

Advertisement

ನಗರದ ಜನಸೇವಾ ಶಾಲೆಯಲ್ಲಿ ಭಗವದ್ಗೀತೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಗವಾನ ಶ್ರೀಕೃಷ್ಣ ಅರ್ಜುನನಿಗೆ ಭಗವದ್ಗೀತೆ ಬೋಧಿಸಿದರು. ಅದರಲ್ಲಿ 18 ಅಧ್ಯಾಯ ಹಾಗೂ 700 ಶ್ಲೋಕಗಳು ಇವೆ. ಭಗವದ್ಗೀತೆಯ ಮೂರನೇ ಅಧ್ಯಾಯದ ಆರಂಭದಲ್ಲಿ ಸುದೀಪ ಎಂಬ ಅಕ್ಷರ ಇದೆ. ಸ್ವಶಕ್ತಿಯಿಂದ ಬೆಳಗುವುದು, ನಿರಂತರ ಬೆಳಗುವುದು, ಇತರ ದೀಪಗಳನ್ನೂ ಬೆಳಗಿಸುವುದು ಸುದೀಪದ ಅರ್ಥವಾಗಿದೆ ಎಂದರು.

ಭಗವದ್ಗೀತೆಯ ಎಲ್ಲ ಅಧ್ಯಾಯ ಹಾಗೂ ಶ್ಲೋಕಗಳನ್ನು ಓದಿ ಅರ್ಥೈಸಿಕೊಳ್ಳಬೇಕು. ಯಾವ ಕ್ಷೇತ್ರದಲ್ಲಿದ್ದರೂ ಧರ್ಮದ ಮಾರ್ಗದಲ್ಲಿ ಸಾಗಬೇಕು. ಭಗವದ್ಗೀತೆ ಓದಿದ ಮಕ್ಕಳು ಸುಸಂಸ್ಕೃತ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದ ಅವರು, ತಂದೆ-ತಾಯಿ ನಿಜವಾದ ದೇವರು. ಹೀಗಾಗಿ ಮಕ್ಕಳು ಎಂದೂ ಪಾಲಕರ ಕಣ್ಣಲ್ಲಿ ನೀರು ತರಿಸಬಾರದು. ಗುರು ಹಿರಿಯರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು. ಮೊದಲು ಮನೆಯವರಿಗೆ ಒಳ್ಳೆಯವರಾಗಬೇಕು. ಜೀವಂತ ಇದ್ದಾಗ ಸಮಾಜಕ್ಕೆ ಕೊಡುಗೆ ನೀಡಬೇಕು. ಮರಣದ ನಂತರವೂ ಸಮಾಜಕ್ಕೆ ಉಪಕಾರಿ ಆಗುವಂಥ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.

ಈ ವೇಳೆ ಮಕ್ಕಳಿಗೆ ಭಗವದ್ಗೀತೆಯ ಮೂರನೇ ಅಧ್ಯಾಯದ ಸಾಮೂಹಿಕ ಪಠಣ ಮಾಡಿಸಲಾಯಿತು. ಜನಸೇವಾ ಪ್ರತಿಷ್ಠಾನದ ಆಡಳಿತ ಮಂಡಳಿ ಸದಸ್ಯ ಬಿ.ಎಸ್‌. ಕುದುರೆ ಅಧ್ಯಕ್ಷತೆ ವಹಿಸಿದ್ದರು. ಗ್ಲೊಬಲ್‌ ಸೈನಿಕ ಅಕಾಡೆಮಿ ಅಧ್ಯಕ್ಷ ಶರಣಪ್ಪ ಸಿಕೇನಪುರೆ, ಶಾಲೆ ಆಡಳಿತಾಧಿ ಕಾರಿ ಸೌಭಾಗ್ಯವತಿ, ಸಾಗರ ಮಲಾನಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next