ಯುವ ತಂಡವೊಂದಕ್ಕೆ ದೆವ್ವದ ಕಾಟ ಆರಂಭವಾಗುತ್ತದೆ ಅಂದರೆ ಆ ತಂಡ ಎಲ್ಲೋ ಲಾಂಗ್ ಡ್ರೈವ್ ಹೋಗಿರುತ್ತದೆ ಅಥವಾ ಮೋಜು-ಮಸ್ತಿಯಲ್ಲಿ ತೊಡಗಿರುತ್ತದೆ ಎಂದೇ ಅರ್ಥ. ಬಹುತೇಕ ಹಾರರ್ ಸಿನಿಮಾಗಳಲ್ಲಿ ಯುವ ತಂಡಕ್ಕೆ ದೆವ್ವ ಕಾಣಿಸಿಕೊಳ್ಳುವುದು ಪ್ರವಾಸ ಹೊರಟ ಸಮಯದಲ್ಲೇ. “ಕೆಲವು ದಿನಗಳ ನಂತರ’ ಸಿನಿಮಾದಲ್ಲೂ ದೆವ್ವಗಳ ಕಾಟ ದೂರದ ಊರಿಗೆ ಪ್ರಯಾಣ ಹೊರಟ ತಂಡಕ್ಕೆ ಶುರುವಾಗುತ್ತದೆ. ರಾತ್ರಿಯ ರಸ್ತೆಯುದ್ದಕ್ಕೂ ದೆವ್ವಗಳು ಅದೆಷ್ಟು ಆಟವಾಡಿಸಬೇಕೋ, ಅಷ್ಟು ಆಟವಾಡಿಸಿ ಕೊನೆಗೊಂದು ಸಂದೇಶ ಕೊಟ್ಟು ತೊಲಗುತ್ತವೆ.
ಬಹುಶಃ ಆ ಸಂದೇಶವಿಲ್ಲದಿದ್ದರೆ ಈ ಸಿನಿಮಾ ಕೂಡಾ ಹತ್ತರಲ್ಲಿ ಹನ್ನೊಂದು ಸಿನಿಮಾವಾಗುತ್ತಿತ್ತು. ಆದರೆ, ಸಿನಿಮಾದ ಕೊನೆಯಲ್ಲಿ ಬರುವ ಆ ಸಂದೇಶ ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಚ್ಚು ಅಗತ್ಯವಾಗಿರುವುದರಿಂದ ಸಿನಿಮಾ ಕೂಡಾ ಇಷ್ಟವಾಗುತ್ತದೆ. “ಕೆಲವು ದಿನಗಳ ನಂತರ’ ಚಿತ್ರ ಆರಂಭವಾಗೋದೇ ಯುವ ತಂಡವೊಂದು ಸ್ನೇಹಿತೆಯ ಮದುವೆ ವಾರ್ಷಿಕೋತ್ಸವಕ್ಕೆ ದೂರದ ಊರಿಗೆ ಪ್ರಯಾಣ ಬೆಳೆಸುವ ಮೂಲಕ. ಅಲ್ಲಿಂದ ಆರಂಭವಾಗುವ ದೆವ್ವದ ಕಾಟ, ಕ್ಲೈಮ್ಯಾಕ್ಸ್‌ವರೆಗೆ ಯಥೇತ್ಛವಾಗಿ ಮುಂದುವರೆದಿದೆ.
ಎಲ್ಲಾ ಸಿನಿಮಾಗಳಂತೆ “ಕೆಲವು ದಿನಗಳ ನಂತರ’ದ ನಿರ್ದೇಶಕರು ಕೂಡಾ ಸಿನಿಮಾವನ್ನು ಟ್ರ್ಯಾಕ್‌ಗೆ ತರೋಕೆ ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಈ ಹೊತ್ತಿನಲ್ಲಿ ಯುವಕರ ಗುಂಪಿನ ಕಾಮಿಡಿ, ಲವ್ ಅಫೇರ್, ಫೇಸ್‌ಬುಕ್ ಸ್ಟೋರಿ … ಇಂತಹ ಅಂಶಗಳ ಮೂಲಕ ಒಂದಷ್ಟು ಸಮಯ ದೂಡಿದ್ದಾರೆ. ಆದರೆ, ನಿಜವಾದ ಕಥೆ ತೆರೆದುಕೊಳ್ಳುವುದು ಮಾತ್ರ ಇಂಟರ್‌ವಲ್ ನಂತರ. ಅಲ್ಲಿವರೆಗೆ ಕನಸಿನಂತೆ ಭಾಸವಾಗುವ ದೆವ್ವದ ಆಟಕ್ಕೆ ಒಂದು ಸ್ಪಷ್ಟತೆ ಸಿಗುತ್ತದೆ. ಯಾರಾದರೂ ಆಟವಾಡುತ್ತಿದ್ದಾರೋ ಅಥವಾ ದೆವ್ವದ ಕಾಟವೇ ಎಂಬ ಸಂದೇಹಕ್ಕೆ ಇಲ್ಲಿ ಉತ್ತರ ಸಿಗುತ್ತದೆ.
ಕಾಮಿಡಿಯಾಗಿ ಆರಂಭವಾಗುವ ಹಾರರ್ ಸಿನಿಮಾಗಳು ಕಾಮಿಡಿಯಾಗಿಯೇ ಮುಗಿದುಹೋಗುತ್ತದೆ. ಆದರೆ, “ಕೆಲವು ದಿನಗಳ ನಂತರ’ ಹಾರರ್ ಸಿನಿಮಾವಾಗಿ ಒಂದು ಮಟ್ಟಕ್ಕೆ ಪ್ರೇಕ್ಷಕರನ್ನು ಭಯಬೀಳಿಸುವಲ್ಲಿ ಯಶಸ್ವಿಯಾಗಿದೆ. ಅದು ಚಿತ್ರದ ದೃಶ್ಯಜೋಡಣೆಯಿಂದ ಹಿಡಿದು ಸೌಂಡ್‌ಎಫೆಕ್ಟ್, ರೀರೆಕಾರ್ಡಿಂಗ್‌ನಲ್ಲಿ “ಕೆಲವು ದಿನಗಳ ನಂತರ’ ಇಷ್ಟವಾಗುತ್ತದೆ. ಮೊದಲೇ ಹೇಳಿದಂತೆ ಕೇವಲ ದೆವ್ವದ ಕಾಟದ ಸಿನಿಮಾವಾಗಿ ಮುಗಿಯುತ್ತಿದ್ದರೆ ಪ್ರೇಕ್ಷಕನಿಗೆ ಇಲ್ಲಿ ಹೊಸತನ ಕಾಣುತ್ತಿರಲಿಲ್ಲ. ಆದರೆ, ಚಿತ್ರದಲ್ಲೊಂದು ಸಂದೇಶವಿದೆ.
ರಸ್ತೆ ಮಧ್ಯೆ ಅಪಘಾತವಾಗಿ ಬಿದ್ದಿರುವವರಿಗೆ ಸಹಾಯ ಮಾಡಿ, ಅವರ ಪ್ರಾಣ ಉಳಿಸಿ. ಆ ನಿಟ್ಟಿನಲ್ಲಿ ಹಿಂಜರಿಯಬೇಡಿ ಎಂಬ ಅಂಶವನ್ನು ಹೇಳಲಾಗಿದೆ. ತಾಂತ್ರಿಕವಾಗಿ ಅಪ್‌ಡೇಟ್ ಆಗುವ ನಾವು ಮಾನವೀಯತೆಯಲ್ಲೂ ಅಪ್‌ಡೇಟ್ ಆಗಬೇಕು, ಮೋಜು-ಮಸ್ತಿಗಿಂತ ಮನುಷ್ಯನ ಜೀವ ಉಳಿಸೋದು ಮಹತ್ಕಾರ್ಯ ಎಂಬುದನ್ನು ಇಲ್ಲಿ ಹೇಳಲಾಗಿದೆ. ಈ ಸಂದೇಶವನ್ನು ಹಾರರ್ ಸಿನಿಮಾವೊಂದರ ಮೂಲಕ ಹೇಳುವ ಜಾಣ್ಮೆ ಮೆರೆದಿದ್ದಾರೆ ನಿರ್ದೇಶಕರು. ಅದು ಹೇಗೆ ಎಂಬ ಕುತೂಹಲವಿದ್ದರೆ ನೀವು ಸಿನಿಮಾ ನೋಡಿ.
ಹಾಗಂತ ಇದು ಅದ್ಭುತ ಸಿನಿಮಾ ಎಂದಲ್ಲ, ಸಾಕಷ್ಟು ತಪ್ಪುಗಳು, ಅನಾವಶ್ಯಕ ಕಾಮಿಡಿ ಎಲ್ಲವೂ ಇದೆ. ಅವೆಲ್ಲವನ್ನು ಬದಿಗಿಟ್ಟು ನೋಡಿದರೆ “ಕೆಲವು ದಿನಗಳ ನಂತರ’ ಒಂದು ಪ್ರಯತ್ನವಾಗಿ ಮೆಚ್ಚಬಹುದು. ಚಿತ್ರದಲ್ಲಿ ಶುಭಾ ಪೂಂಜಾ ಬಿಟ್ಟರೆ ಮಿಕ್ಕಂತೆ ಬಹುತೇಕ ಹೊಸಬರೇ ನಟಿಸಿದ್ದಾರೆ. ಪವನ್, ಲೋಕೇಶ್, ಜಗದೀಶ್, ಸೋನು ಪಾಟೀಲ್, ರಮ್ಯಾ ಸೇರಿದಂತೆ ಇತರರು ನಟಿಸಿದ್ದಾರೆ. ಪ್ರತಿಯೊಬ್ಬರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಛಾಯಾಗ್ರಹಣ ಹಾಗೂ ಹಿನ್ನೆಲೆ ಸಂಗೀತ ಪೂರಕವಾಗಿದೆ.
ಚಿತ್ರ: ಕೆಲವು ದಿನಗಳ ನಂತರ
ನಿರ್ಮಾಣ: ಮುತ್ತುರಾಜ್, ವಸಂತ್ ಕುಮಾರ್, ಚಂದ್ರಕುಮಾರ್
ನಿರ್ದೇಶನ: ಶ್ರೀನಿ
ತಾರಾಗಣ: ಶುಭಾ ಪೂಂಜಾ, ಪವನ್, ಲೋಕೇಶ್, ಜಗದೀಶ್, ಸೋನು ಪಾಟೀಲ್, ರಮ್ಯಾ ಮುಂತಾದವರು
* ರವಿಪ್ರಕಾಶ್ ರೈ