Advertisement

ನ.4ರಿಂದ ಭಗವದ್ಗೀತಾ ಅಭಿಯಾನ

03:13 PM Sep 15, 2022 | Team Udayavani |

ಶಿರಸಿ: ಹದಿನಾಲ್ಕನೇ ವರ್ಷದ ಭಗವದ್ಗೀತಾ ಅಭಿಯಾನಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನ.4 ರಿಂದ ಆರಂಭಿಸಲಾಗುತ್ತಿದೆ. ಡಿ.4 ರಂದು ದಾವಣಗೆರೆಯಲ್ಲಿ ಮಹಾ ಸಮರ್ಪಣೆ ನಡೆಯಲಿದೆ ಎಂದು ಭಗವದ್ಗೀತಾ ಅಭಿಯಾನದ ಮುಖ್ಯಸ್ಥರು, ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಪ್ರಕಟಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಗೀತಾ ಅಭಿಯಾನಕ್ಕೆ ಈ ಬಾರಿ ಐದನೇ ಅಧ್ಯಾಯ ಆಯ್ಕೆ ಮಾಡಿಕೊಳ್ಳಲಾಗಿದೆ. 2007 ರಿಂದ ಆರಂಭಗೊಂಡ ಈ ಅಭಿಯಾನ ಸಮಾಜದಲ್ಲಿ ಗೀತೆ ಮೂಲಕ ಸುಖ ಶಾಂತಿ ನೆಲೆಸುವಂತೆ, ಪ್ರತಿ ವ್ಯಕ್ತಿ ಸುಸಂಸ್ಕೃತರಾಗಲು ಪ್ರೇರೇಪಿಸಲು ಇದು ನಿರಂತರವಾಗಿ ನಡೆಯುತ್ತಿದೆ. ಕಳೆದೆರಡು ವರ್ಷ ಕೊರೊನಾ ಕಾರಣದಿಂದ ಸಾರ್ವಜನಿಕವಾಗಿ ನಡೆಸಲು ಸಾಧ್ಯ ಆಗಿರಲಿಲ್ಲ. ಈ ವರ್ಷ ಸಾರ್ವಜನಿಕರ, ಸರಕಾರದ, ಸಂಸ್ಥೆಗಳ ಸಹಕಾರದಲ್ಲಿ ಮುನ್ನಡೆಸಲಾಗುತ್ತದೆ ಎಂದರು. ರಾಯಚೂರು ಜಿಲ್ಲಾ ಕಾರಾಗೃಹದಲ್ಲಿ ತಪ್ಪದೇ ಗೀತಾಭಿಯಾನ ನಡೆದಿದೆ. ಈ ಬಾರಿ ರಾಜ್ಯದ ಎಲ್ಲ ಜೈಲಿನಲ್ಲೂ ನಡೆಸಲು ಯೋಜಿಸಿದ್ದೇವೆ ಎಂದ ಅವರು, ಮೂರು ಹಂತದಲ್ಲಿ ರಾಜ್ಯದಲ್ಲಿ ಗೀತಾ ಅಭಿಯಾನ ನಡೆಯಲಿದೆ ಎಂದರು.

ಅಭಿಯಾನದಲ್ಲಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಗೀತೆ ಕುರಿತ ವಿವಿಧ ಸ್ಪರ್ಧೆ ರಾಜ್ಯ ಮಟ್ಟದ ತನಕ ನಡೆಯಲಿದೆ. ಸಾರ್ವಜನಿಕವಾಗಿ ಮೂರು ಹಂತದ ಅಭಿಯಾನಕ್ಕೆ ನ.4 ರಿಂದ 10, 12 ರಿಂದ 18, 20 ರಿಂದ ನ.26 ರ ತನಕ ನಡೆಸಬೇಕು. ಒಟ್ಟೂ ಎಂಟು ದಿನಗಳ ಅಭ್ಯಾಸ ಇಲ್ಲಾಗಬೇಕು ಎಂದ ಶ್ರೀಗಳು, ನ.28 ರಂದು ತಾಲೂಕು ಮಟ್ಟದ, ನ.30 ಜಿಲ್ಲಾ ಮಟ್ಟದ, ಡಿ.4 ರಾಜ್ಯ ಮಟ್ಟದ ಸ್ಪರ್ಧೆಗಳು ನಡೆಯಲಿದೆ ಎಂದರು.

ನ.27 ರಿಂದ ಏಳು ದಿನ ಪ್ರತಿ ಮನೆಯಲ್ಲಿ 5ನೇ ಅಧ್ಯಾಯ ಪಠಿಸಬೇಕು. ಡಿ.3 ರಂದು 18 ಅಧ್ಯಾಯ ಪಠಣ ಮಾಡಿ ಗೀತಾ ಜಯಂತಿ ಆಚರಿಸಬೇಕು ಎಂದೂ ಆಶಿಸಿದರು.

ಈಗಾಗಲೇ ರಾಜ್ಯಮಟ್ಟದ ಅಭಿಯಾನ ಸಮಿತಿ ರಚನೆ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಪ್ರಮುಖರನ್ನೂ ನಿಯೋಜಿಸಲಾಗಿದೆ ಎಂದರು.

Advertisement

ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್‌. ಹೆಗಡೆ ಮಾಹಿತಿ ನೀಡಿ ಅಭಿಯಾನ ಕುರಿತು ಮಾಹಿತಿ, ಸಂಪರ್ಕಕ್ಕೆ ವೆಂಕಟ್ರಮಣ ಹೆಗಡೆ 8277383500 ಅಥವಾ 08384 279359ಗೆ ಮುಂಜಾನೆ 11 ರಿಂದ 1 ಅಥವಾ ಸಂಜೆ 4ರಿಂದ 6ರ ತನಕ ಸಂಪರ್ಕ ಮಾಡಬಹುದಾಗಿದೆ ಎಂದರು. ಮಠದ ವ್ಯವಸ್ಥಾಪಕ ಎಸ್‌.ಎನ್‌. ಗಾಂವಕರ್‌ ಇತರರು ಇದ್ದರು.

ಮನುಷ್ಯ ಅನೇಕ ವಿಕಾರಗಳಿಗೆ ಬಲಿ ಆಗುತ್ತಿದ್ದಾನೆ. ವಿಕೃತ ಮನಸ್ಸು ಅಡ್ಡದಾರಿ ಹಿಡಿಯುತ್ತಿದೆ. ಅಪಕ್ವ, ವಿಕೃತ ಮನಸ್ಸಿನ ಪರಿಷ್ಕಾರಕ್ಕೆ ಆಧ್ಯಾತ್ಮ ವಿದ್ಯೆಯೇ ಏಕೈಕ ಪರಿಹಾರ. ಆಧ್ಯಾತ್ಮ ವಿದ್ಯೆಯ ಆಕರ ಗ್ರಂಥವೇ ಭಗವದ್ಗೀತೆ. -ಸ್ವರ್ಣವಲ್ಲೀ ಶ್ರೀ

Advertisement

Udayavani is now on Telegram. Click here to join our channel and stay updated with the latest news.

Next