Advertisement

ಗುರುವನ್ನೇ ಮೀರಿಸಿದ ಭಾಗಪ್ಪ: ಕೂಲಿ ಮಾಡುತ್ತಿದ್ದವ ಶಾರ್ಪ್‌ ಶೂಟರ್‌ 

08:29 AM Aug 09, 2017 | |

ಕಲಬುರಗಿ/ವಿಜಯಪುರ: ಅದು 2000ನೇ ಮೇ ತಿಂಗಳ 12ನೇ ದಿನಾಂಕ. ಕುಖ್ಯಾತ ಹಂತಕ ಚಂದಪ್ಪ ಹರಿಜನ ಮಹಾರಾಷ್ಟ್ರದ ಧೋತರೆ ಗ್ರಾಮದಲ್ಲಿ ಅಡಗಿ ಕುಳಿತಿದ್ದಾನೆ ಎನ್ನುವುದನ್ನು ಅರಿತು ಪೊಲೀಸರು ಬೆಳ್ಳಂಬೆಳಗ್ಗೆ ದಾಳಿ ಮಾಡಿದಾಗ ಅಲ್ಲಿ ಆತನ ಬಲಗೈ ಬಂಟ, ಶಿಷ್ಯ, ಸಂಬಂಧದಲ್ಲಿ ಅಳಿಯನಾದ ಭಾಗಪ್ಪ ಹರಿಜನನೂ ಇದ್ದ. ಪೊಲೀಸ್‌ ದಾಳಿ ವಾಸನೆ ಅರಿತ ಭಾಗಪ್ಪ ಸ್ವಲ್ಪದರಲ್ಲಿಯೇ ಕಾಲ್ಕಿತ್ತು
ಪರಾರಿಯಾಗಿದ್ದ.

Advertisement

ಸ್ವಲ್ಪ ಯಾಮಾರಿದ್ದರೂ ಅಂದು ಪೊಲೀಸರ ಗುಂಡಿಗೆ ಬಲಿಯಾಗುತ್ತಿದ್ದ. ಗುರು ಚಂದಪ್ಪ ಹರಿಜನ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದರೆ ಭಾಗಪ್ಪ ಹರಿಜನ ಚಾಣಾಕ್ಷತನದಿಂದ ಪರಾರಿಯಾಗಿ ಗುರುವನ್ನೇ ಮೀರಿಸಿದ್ದ. ಮಂಗಳವಾರ ವಿಜಯಪುರ ನ್ಯಾಯಾಲಯ ಆವರಣದಲ್ಲಿ ಭಾಗಪ್ಪ ಗುಂಡಿನ ದಾಳಿಗೆ ಒಳಗಾಗಿರುವ ಘಟನೆ 17 ವರ್ಷದ ಹಿಂದಿನ ಈ ಘಟನೆಯನ್ನು ನೆನಪಿಸುತ್ತದೆ. 

ಕೂಲಿ ಕೆಲಸ ಮಾಡುತ್ತಿದ್ದ: ವಿಜಯಪುರ ಜಿಲ್ಲೆಯ ಸಿಂದಗಿ ಬ್ಯಾಡಗಿಹಾಳ ಗ್ರಾಮದ ಭಾಗಪ್ಪ ಎಂಬ ಯುವಕ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಭೀಮಾ ತೀರದ ರಕ್ತ ಚರಿತ್ರೆ ಅಧ್ಯಾಯದಲ್ಲಿ ಭಾಗಪ್ಪ ಹರಿಜನನ ಪಾತ್ರವೂ ಬಲವಾಗಿದೆ. ಮಾವ ಚಂದಪ್ಪ ಹರಿಜನನ ಆಕರ್ಷಣೆಗೆ ಸಿಕ್ಕಿ, ಅಪರಾಧ ಲೋಕಕ್ಕೆ ಕಾಲಿಟ್ಟ ಭಾಗಪ್ಪ, ದಶಕಗಳ ಕಾಲ ಚಂದಪ್ಪ ಹರಿಜನನ ಜೊತೆಗಿದ್ದು, ಶಾರ್ಪ್‌ ಶೂಟರ್‌ ಎನಿಸಿಕೊಂಡಿದ್ದ. ಚಂದಪ್ಪ ಸಾಯುವವರೆಗೂ ಆತನ ಸಹಚರ ನಾಗಿ, ಅಕ್ರಮ ಚಟುವಟಿಕೆಯಲ್ಲಿ ಸಕ್ರಿಯ ನಾಗಿದ್ದ ಭಾಗಪ್ಪ ತದನಂತರ ಅಪರಾಧ ಚಟುವಟಿಕೆಗೆ ವೇಗ ನೀಡತೊಡಗಿದ. ಚಂದಪ್ಪ ಎಲ್ಲೆಲ್ಲಿ ಬಂದೂಕುಗಳನ್ನು ಇಟ್ಟಿದ್ದಾನೆ ಎನ್ನುವ ಮಾಹಿತಿ ಹೊಂದಿದ್ದ ಭಾಗಪ್ಪ ಅವುಗಳನ್ನೆಲ್ಲ ಸಂಗ್ರಹಿಸತೊಡಗಿದ. ಅದರ ಜತೆಗೆ ತಂಡ ಕಟ್ಟಿಕೊಂಡು ಕೊಲೆ-ಸುಲಿಗೆಗಳಂತ ಕುಕೃತ್ಯ ಎಸಗಲಾರಂಭಿಸಿದ. ತಾನೇ ಚಂದಪ್ಪ ಹರಿಜನನ ಉತ್ತರಾಧಿಕಾರಿ ಎಂಬುದಾಗಿ ನಿರೂಪಿಸ ತೊಡಗಿದ. ತನ್ನ ಅರಿವಿಗೇ ಬಾರದಷ್ಟರ ಮಟ್ಟಿಗೆ ಅಪರಾಧ ಜಗತ್ತಿನಲ್ಲಿ ಭಾಗಪ್ಪ ಹರಿಜನ ಗುರುತಿಸಿಕೊಂಡ.

ನಾಲ್ವರ ಕಗ್ಗೊಲೆ: ತನ್ನ ತಂಡದ ಸದಸ್ಯನಾಗಿದ್ದ ರಜಾಕ ಎಂಬಾತನ ತಮ್ಮ ಸೈಯದ್‌ನ ಕೊಲೆಗೆ ಸೇಡು ತೀರಿಸಿಕೊಳ್ಳುವ ಸಂಬಂಧ ಅಫಜಲಪುರ ತಾಲೂಕಿನ ಶಿರವಾಳದ ತಿಪ್ಪಣ್ಣ ಬಂಡಿವಡ್ಡರ್‌ ಹಾಗೂ ಇತರ ಇಬ್ಬರನ್ನು ಹತ್ಯೆ ಮಾಡುವ ಉದ್ದೇಶದಿಂದ ಭಾಗಪ್ಪ 13 ಜನರ ತಂಡದೊಂದಿಗೆ 2003ರ ಡಿಸೆಂಬರ್‌ 21ರಂದು ಶಿರವಾಳಕ್ಕೆ ಬಂದಿದ್ದ. ಆದರೆ ತಿಪ್ಪಣ್ಣ ಬಂಡಿವಡ್ಡರ್‌, ಯಲಗುರೇಶ ಬಂಡಿವಡ್ಡರ್‌ ಹಾಗೂ ರಾಹುಲ್‌ ಬಂಡಿವಡ್ಡರ್‌ ಗ್ರಾಮದಲ್ಲಿ ಸಿಗದಿದ್ದಾಗ ಅವರನ್ನು ಬೆಂಬಲಿಸಿದರೆಂಬ ಸಿಟ್ಟಿಗೆ ಈಶ್ವರ ಪವಾರ, ತಾಯಪ್ಪ, ಬಸಪ್ಪ ಹಾಗೂ ಜಟ್ಟಪ್ಪ ಎಂಬುವರ ಹತ್ಯೆ ಮಾಡಿಸಿದ್ದ ಎಂಬ ಆರೋಪವಿದೆ. ಈ ಘಟನೆ ದೊಡ್ಡ ಸುದ್ದಿಯಾಗಿ, ಭಾಗಪ್ಪ ಹರಿಜನ ಎಂದರೆ ಜನ ಭಯಬೀಳುವಂತಾಯಿತು.

ಶಿರವಾಳದಲ್ಲಿ ನಾಲ್ವರ ಹತ್ಯೆಯಾದ ನಂತರ ಭಾಗಪ್ಪ ಪರಾರಿಯಾಗಿ ಮಹಾರಾಷ್ಟ್ರದ ಪುಣೆಯಲ್ಲಿ ವಾಸವಾಗಿದ್ದ. ಆದರೆ 2007ರ ಜುಲೈ 5ರಂದು ಈಶಾನ್ಯ ವಲಯ ಐಜಿಪಿಯಾಗಿದ್ದ ಆರ್‌.ಕೆ. ದತ್ತಾ ಹಾಗೂ ಎಸ್ಪಿ ಮನೀಶ ಖಬೇìಕರ್‌ ಮಾರ್ಗದರ್ಶನದಲ್ಲಿ ಎಂ.ಎನ್‌. ನಾಗರಾಜ,
ಸುಧೀರ ಹೆಗ್ಡೆ ಮತ್ತಿತರ ಅಧಿಕಾರಿಗಳ ತಂಡ ಪುಣೆಗೆ ತೆರಳಿ ಕಾರ್ಯಾಚರಣೆ ನಡೆಸಿ ಭಾಗಪ್ಪ ಹರಿಜನನ್ನು ಮಾರಕಾಸ್ತ್ರಗಳ ಸಮೇತ ಬಂಧಿಸಿತ್ತು. ಅಫಜಲಪುರ ಪೊಲೀಸ್‌ ಠಾಣೆಯಿಂದ ಪೊಲೀಸ್‌ ಗನ್‌ ಕಳ್ಳತನ ಮತ್ತಿತರ ಪ್ರಕರಣಗಳು ಕಲಬುರಗಿ ಜಿಲ್ಲೆಯಲ್ಲಿ ಆತನ ಮೇಲಿವೆ.

Advertisement

ಹಲವು ವರ್ಷಗಳಿಂದ ಭೂಗತನಾಗಿದ್ದ ಭಾಗಪ್ಪ, ಚಂದಪ್ಪ ಹರಿಜನನ ಸಹೋದರರಾದ ಬಸಪ್ಪ ಹಾಗೂ ಯಲ್ಲಪ್ಪ ಹರಿಜನ ಅವರೊಂದಿಗೆ ದ್ವೇಷ ಕಟ್ಟಿಕೊಂಡಿದ್ದ. ಇದರಿಂದಾಗಿಯೇ 2013 ಜನವರಿ 2ರಂದು ರಾತ್ರಿ ವೇಳೆ ಚಂದಪ್ಪ ಹರಿಜನನ ಹುಟ್ಟೂರು ಬೊಮ್ಮನಹಳ್ಳಿ ಗ್ರಾಮಕ್ಕೆ
ತೆರಳಿ, ಅಲ್ಲಿನ ಬಸ್‌ ನಿಲ್ದಾಣದಲ್ಲಿ ಚಂದಪ್ಪನ ಸಹೋದರ ಬಸಪ್ಪನ ಮೇಲೆ ಗುಂಡಿನ ದಾಳಿ ಮಾಡಿ ಹತ್ಯೆಗೈದು ಪರಾರಿಯಾಗಿದ್ದ. ಈ ಕುರಿತು ಬಸಪ್ಪನ ಸಹೋದರ ಯಲ್ಲಪ್ಪ ನೀಡಿದ ದೂರಿನ ಮೇಲೆ ಆಲಮೇಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬೈಕ್‌ ಬಿಟ್ಟು ಹೋದ ಆಗಂತುಕ: ಆ. 8ರಂದು ವಿಜಯಪುರ ನ್ಯಾಯಾಲಯದ ಆವರಣದಲ್ಲಿ ಭಾಗಪ್ಪನ ಮೇಲೆ ಗುಂಡು ಹಾರಿಸಿದ ಆರೋಪಿ, ಪಲ್ಸರ್‌ ಬೈಕ್‌ನಲ್ಲಿ ಬಂದಿದ್ದ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಆದರೆ, ಪರಾರಿಯಾಗುವಾಗ ಬೈಕ್‌ ಬಳಸಿಲ್ಲ. ನ್ಯಾಯಾಲಯದ ಪ್ರವೇಶ ದ್ವಾರದಿಂದ ಓಡಿದ್ದರೂ ಬಳಿಕ ಪಕ್ಕದಲ್ಲೇ ಇದ್ದ ಕಾಂಪೌಂಡ್‌ ಗೋಡೆ ಹಾರಿ ತಪ್ಪಿಸಿಕೊಂಡಿದ್ದಾನೆ. ಗುಂಡು ಹಾರಿಸಿದ ವ್ಯಕ್ತಿ ಯಾರು, ಯಾವ ದ್ವೇಷದಿಂದ ಭಾಗಪ್ಪನ ಮೇಲೆ ದಾಳಿ ನಡೆಸಿದ ಎಂಬುದು ಪೊಲೀಸರ ತನಿಖೆಯಿಂದಷ್ಟೇ ಬಯಲಾಗಬೇಕಿದೆ. 

ಹಣಮಂತರಾವ ಭೈರಾಮಡಗಿ/ ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next