Advertisement

ವಿಐಎಸ್‌ಎಲ್ ಮಾರಾಟ ಬೇಡ

11:59 AM Jul 08, 2019 | Team Udayavani |

ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆ ಖಾಸಗೀಕರಣ ಮಾಡುವುದಿಲ್ಲ. ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದಿಂದ ಬಂಡವಾಳ ಹೂಡಿಸುತ್ತೇವೆ ಎಂದು ಕಾರ್ಮಿಕರಿಗೆ ಮಾತು ಕೊಟ್ಟು ನಂತರ ಅದರಂತೆ ನಡೆದುಕೊಳ್ಳದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಭದ್ರಾವತಿ ಕ್ಷೇತ್ರಕ್ಕೆ ಬರದಂತೆ ಮಾಡಬೇಕು ಎಂದು ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕೇಂದ್ರ ಸರಕಾರ ವಿಐಎಸ್‌ಎಲ್ ಕಾರ್ಖಾನೆ ಮಾರಾಟ ಮಾಡಲು ಜಾಗತಿಕ ಟೆಂಡರ್‌ ಕರೆದಿರುವುದರ ವಿರುದ್ಧ ಕಾರ್ಖಾನೆಯ ಮುಖ್ಯದ್ವಾರದ ಮುಂಭಾಗ ಕಾರ್ಮಿಕ ಸಂಘ, ಗುತ್ತಿಗೆ ಕಾರ್ಮಿಕ ಸಂಘ, ನಿವೃತ್ತ ಕಾರ್ಮಿಕರು ಮತ್ತು ಕುಟುಂಬ ಸದಸ್ಯರು ಹಾಗು ಸರ್ವ ಪಕ್ಷಗಳವರು ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕಾರ್ಮಿಕರ ಆಕ್ರೋಶಕ್ಕೆ ಹೆದರಿ ಸಂಸದ ರಾಘವೇಂದ್ರ ಪಲಾಯನಗೈದಿರುವುದು ಅವರಿಗೆ ಕಾರ್ಮಿಕರ ಮತ್ತು ಕಾರ್ಖಾನೆಯ ಮೇಲೆ ಎಷ್ಟು ಅಭಿಮಾನವಿದೆ ಎಂದು ತೋರಿಸುತ್ತದೆ. ಕ್ಷೇತ್ರದ ಎರಡು ಕಣ್ಣುಗಳೆನಿಸಿದ ಎಂಪಿಎಂ ಮತ್ತು ವಿಐಎಸ್‌ಎಲ್ ಪೈಕಿ ಈಗಾಗಲೇ ಎಂಪಿಎಂ ಅಧೋಗತಿಗೆ ತಳ್ಳಲ್ಪಟ್ಟಿದೆ. ದುಸ್ಥಿತಿಯಲ್ಲಿದ್ದ ವಿಐಎಸ್‌ಎಲ್ ಕಾರ್ಖಾನೆ ಉಳಿಸುವ ಭರವಸೆ ನೀಡಿ ಕಾರ್ಮಿಕರಿಂದ, ಕ್ಷೇತ್ರದ ಜನತೆಯಿಂದ ಮತ ಗಳಿಸಿ ಆಯ್ಕೆಯಾದ ಸಂಸದ ಬಿ.ವೈ. ರಾಘವೇಂಧ್ರ ಹಾಗೂ ಅವರ ತಂದೆ ಯಡಿಯೂರಪ್ಪ ಇಬ್ಬರೂ ವಚನ ಭ್ರಷ್ಟರಾಗಿದ್ದಾರೆ ಎಂದರು.

ಕಾರ್ಖಾನೆ ವಿಷಯದಲ್ಲಿ ರಾಜಕೀಯ ಬೇಡ: ಕೇಂದ್ರ ಸರಕಾರ ಜಾಗತಿಕ ಟೆಂಡರ್‌ ಕರೆದ ಹಿನ್ನಲೆಯಲ್ಲಿ ಹೋರಾಟ ಮಾಡಿ ಎಂದು ಹೇಳಿದ ಸಂಸದ ರಾಘವೇಂದ್ರ ಈಗ ಹೋರಾಟಕ್ಕೆ ಗೈರಾಗಿರುವುದು ಸರಿಯಲ್ಲ. ಕಾರ್ಮಿಕರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಹೆದರಿ ಪಲಾಯನ ಮಾಡಿದ್ದಾರೆ. ಹೋರಾಟಗಳಲ್ಲಿ ಯಾರೂ ರಾಜಕೀಯ ಮಾಡಬಾರದು. ಈ ಕಾರ್ಖಾನೆಯನ್ನು ಉಳಿಸುವ ಶಕ್ತಿ ಸಂಸದ ರಾಘವೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇದೆ. ಆದರೆ ಅವರು ಜನರು ನೀಡಿದ ಅಧಿಕಾರವನ್ನು ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ ಎಂದರು.

ಭದ್ರಾವತಿ ಬಂದ್‌: ಯಡಿಯೂರಪ್ಪ ಮತ್ತು ರಾಘವೇಂದ್ರ ಅವರ ಅಧಿಕಾರಾವಧಿಯಲ್ಲಿ ಕಾರ್ಖಾನೆಯ ಉಳಿವಿಗೆ ಏನೂ ಮಾಡಿಲ್ಲ. ಸಂಸತ್ತಿನಲ್ಲಿ ರಾಘವೇಂದ್ರ ಮಾತನಾಡಿದ್ದು ಗಿಮಿಕ್‌ ಅಷ್ಟೇ. ಮಾನ- ಮರ್ಯಾದೆ ಇಲ್ಲದ ರಾಜಕಾರಣಿಗಳಾಗಿ ಕಾರ್ಮಿಕರ ಅನ್ನಕ್ಕೆ ಮಣ್ಣು ಹಾಕಿದ್ದಾರೆ. ತಾಯಿಯಾಣೆಗೂ ಇವರು ಕಾರ್ಖಾನೆಯನ್ನು ಉಳಿಸಲ್ಲ. ಅವರಿಗೆ ಇಚ್ಛಾಶಕ್ತಿ ಇಲ್ಲ. ಕೇಂದ್ರದ ಮೂರು ಮಂದಿ ಸಚಿವರನ್ನು ಕರೆತಂದು ಬಂಡವಾಳ ಹೂಡುವುದಾಗಿ ಹೇಳಿಸಿ ಕಾರ್ಖಾನೆಯನ್ನು ಅಧೋಗತಿಗೆ ತಂದು ಮಾರಾಟದ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಇಚ್ಛಾಶಕ್ತಿ ಇದ್ದಲ್ಲಿ ಪ್ರಧಾನಿ ಮೋದಿ ಅವರ ಬಳಿ ಕುಳಿತು ಚರ್ಚಿಸಿ ಕಾರ್ಖಾನೆ ಉಳಿಸಲಿ ಎಂದು ಹೇಳಿ ಭದ್ರಾವತಿ ಬಂದ್‌ಗೆ ಕರೆ ನೀಡಿದರು.

Advertisement

ಕಾರ್ಖಾನೆ ಉಳಿಸಲು ಪ್ರಾಮಾಣಿಕ ಪ್ರಯತ್ನ: ಬಿಜೆಪಿ ಮುಖಂಡ ಜ್ಯೋತಿಪ್ರಕಾಶ್‌ ಮಾತನಾಡಿ, ಕಾರ್ಖಾನೆ ಉಳಿಸಲು ಹಂಬಲ ತೊಟ್ಟಿದ್ದೇವೆ. ಸಂಸದ ರಾಘವೇಂದ್ರ ಸಹ ಬಹಳಷ್ಟು ಶ್ರಮ ಪಡುತ್ತಿದ್ದಾರೆ. ನಗರದ ಅವಳಿ ಕಾರ್ಖಾನೆಗಳಿಂದ ನಾವು ಸಹ ಅನ್ನ ತಿಂದಿದ್ದೇವೆ. ಅದರ ಋಣ ತೀರಿಸಬೇಕಿದೆ. ಸದ್ಯದಲ್ಲೇ ರಾಜ್ಯದ ಬಿಜೆಪಿ ಎಂಪಿಗಳನ್ನು ಒಗ್ಗೂಡಿಸಿ ಪ್ರಧಾನಿ ಮೋದಿ ಅವರ ಬಳಿ ನಿಯೋಗ ಕೊಂಡೊಯ್ದು ಕಾರ್ಖಾನೆ ಉಳಿಸುವ ಪ್ರಯತ್ನ ಮಾಡಬೇಕಿದೆ ಎಂದರು.

ಬಿಜೆಪಿ ಮುಖಂಡ ದತ್ತಾತ್ರಿ ಮಾತನಾಡಿ, ಕಾರ್ಖಾನೆಗೆ ಜಾಗತಿಕ ಟೆಂಡರ್‌ ಕರೆಯಬಾರದಿತ್ತು. ಹೋರಾಟದ ಸಭೆಗೆ ಸಂಸದ ಬಿ.ವೈ. ರಾಘವೇಂದ್ರ ಬರಬೇಕಿತ್ತು. ಆದರೆ ಕಾರಣಾಂತರದಿಂದ ಬಂದಿಲ್ಲ. ಕಾರ್ಮಿಕರ ಬಳಿ ಕ್ಷಮೆ ಕೋರುವಂತೆ ಹೇಳಿದ್ದಾರೆ. ನೀವು ನೀಡಿದ ಮತದ ಋಣ ತೀರಿಸಬೇಕಿದೆ. ಕಾರ್ಖಾನೆ ಉಳಿವು ಬಿವೈಆರ್‌ ಹಾಗೂ ಬಿಎಸ್‌ವೈ ಇಬ್ಬರಿಂದ ಮಾತ್ರ ಸಾಧ್ಯವಿಲ್ಲ. ರಾಜ್ಯದ 26 ಮಂದಿ ಎಂಪಿಗಳನ್ನು ಒಗ್ಗೂಡಿಸಿ ಪ್ರಧಾನಿ ಮೋದಿ ಅವರ ಬಳಿ ನಿಯೋಗ ಹೋಗಲು ಇತ್ತೀಚಿಗೆ ನಡೆದ ಪಕ್ಷದ ಕೋರ್‌ ಕಮಿಟಿಯಲ್ಲಿ ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಸಮಿಶ್ರ ಸರಕಾರ ಪತನಗೊಂಡು ಯಡಿಯೂರಪ್ಪ ಸಿಎಂ ಆದರೆ ಈ ಹೋರಾಟಕ್ಕೆ ಮತ್ತಷ್ಟು ಬಲ ಬರುವುದಾಗಿ ಹೇಳುತ್ತಿದ್ದಂತೆ ಕಾರ್ಮಿಕರು ಬಿಜೆಪಿ ಮುಖಂಡರ ವಿರುದ್ಧ ಕೆಂಡ ಕಾರಿ ವಿರೋಧಿಸಿದರು.

ಮುಖಂಡರಾದ ಟಿ. ಚಂದ್ರೇಗೌಡ, ಡಿ.ಟಿ. ಶ್ರೀಧರ್‌, ಕೆ.ಎನ್‌.ಭೈರಪ್ಪ ಗೌಡ, ಎಚ್.ಜಿ. ಉಮಾಪತಿ, ಬಿ.ಕೆ. ಮೋಹನ್‌, ಅಂಜನಿ, ಎಸ್‌.ಎನ್‌. ಬಾಲಕೃಷ್ಣ, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್‌, ಪ್ರಧಾನ ಕಾರ್ಯದರ್ಶಿ ಬಸಂತಕುಮಾರ್‌ ಮತ್ತಿತರರು ಕೇಂದ್ರ ಸರಕಾರದ ನೀತಿ ಖಂಡಿಸಿ ಮಾತನಾಡಿದರು. ಮುಖಂಡರಾದ ಆರ್‌. ಕರುಣಾಮೂರ್ತಿ, ವಿಶಾಲಾಕ್ಷಿ, ಎಂ.ಎಸ್‌. ಸುಧಾಮಣಿ, ಬದರಿನಾರಾಯಣ, ರವಿಕುಮಾರ್‌, ಜೆ.ಪಿ. ಯೋಗೀಶ್‌, ಮಣಿಶೇಖರ್‌, ಕರಿಯಪ್ಪ, ಕೃಷ್ಣೇಗೌಡ, ರಾಮಲಿಂಗಯ್ಯ, ಮಹಮದ್‌ ಸನಾವುಲ್ಲಾ, ನರಸಿಂಹಾಚಾರ್‌, ರಾಮಕೃಷ್ಣ, ವಿ. ಕದಿರೇಶ್‌, ಮಂಗೋಟೆ ರುದ್ರೇಶ್‌, ಜಿ. ಆನಂದಕುಮಾರ್‌ ಸೇರಿದಂತೆ ಕಾರ್ಮಿಕ ಕುಟುಂಬದ ಮಹಿಳೆಯರು, ಮಕ್ಕಳು ನೂರಾರು ಮಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next