Advertisement

ಭದ್ರಾವತಿ: ಕಳಪೆ ರಸ್ತೆ ಕಾಮಗಾರಿಗೆ ಸಾರ್ವಜನಿಕರ ಬ್ರೇಕ್‌!

11:45 AM May 29, 2021 | Suhan S |

ಭದ್ರಾವತಿ: ಕೋವಿಡ್ ಆರಂಭಕ್ಕೂ ಮುನ್ನ ನಗರಸಭೆ ವ್ಯಾಪ್ತಿಯಲ್ಲಿ ಕೈಗೊಂಡಿದ್ದ ಕೆಲವು ಕಾಮಗಾರಿಗಳನ್ನು ಅಸಮರ್ಪಕ ಹಾಗೂ ಬೇಕಾಬಿಟ್ಟಿ ಮಾಡಲಾಗುತ್ತಿದೆ ಎಂಬ ಸಾರ್ವಜನಿಕರ ಮತ್ತು ಸಂಘ-ಸಂಸ್ಥೆಗಳ ಆರೋಪದ ಮೇರೆಗೆ ಸ್ಥಗಿತಗೊಂಡಿದ್ದ ಕೆಲವು ಕಾಮಗಾರಿಗಳನ್ನು ಈಗ ಲಾಕ್‌ಡೌನ್‌ ಇರುವ ವೇಳೆ ಮರು ಚಾಲನೆ ನೀಡುವ ಪ್ರಯತ್ನವನ್ನು ಲೋಕೋಪಯೋಗಿ ಇಲಾಖೆ ಮತ್ತು ನಗರಸಭೆಯವರು ಮಾಡಲು ಮುಂದಾಗಿದ್ದರು. ಇದನ್ನು ಸಾರ್ವಜನಿಕರು ಖಂಡಿಸಿ ಅಸಮರ್ಪಕ ರಸ್ತೆ ಕಾಮಗಾರಿ ಮಾಡದಂತೆ ತಡೆದ ಘಟನೆ ಶುಕ್ರವಾರ ನಗರದಲ್ಲಿ ನಡೆಯಿತು.

Advertisement

ಕಳಪೆ ಕಾಮಗಾರಿ ಮುಂದುವರಿಕೆ ಸ್ಥಗಿತ: ನಗರದ ತಾಲೂಕು ಕಚೇರಿ ರಸ್ತೆ ಅಗಲೀಕರಣದ ನೆಪದಲ್ಲಿ ಅಸಂಖ್ಯಾತ ಬೃಹತ್‌ ಮರಗಳನ್ನು ಕಡಿದು ಹಾಕಲಾಯಿತು. ಆದರೆ ಮಾಡಿರುವ ರಸ್ತೆ ಅಗಲೀಕರಣ ಅಸಮರ್ಪಕವಾಗಿದ್ದು, ಒಂದೊಂದು ಕಡೆ ಒಂದೊಂದು ಅಳತೆಯಂತೆ ಮನಸ್ಸಿಗೆ ಬಂದಂತೆ ಸಿಮೆಂಟ್‌ ರಸ್ತೆ ಮಾಡಿ, ಕೋರ್ಟ್‌ ಮುಂದೆ ರಸ್ತೆಯ ವಿಸ್ತೀರ್ಣವನ್ನು ಮಾಡದೆ ಅದಕ್ಕೇ ತೇಪೆ ಹಾಕುವ ಕೆಲಸಕ್ಕೆ ಮುಂದಾದಾಗ ನಗರದ ನ್ಯಾಯವಾದಿಗಳ ಸಂಘ ಹಾಗೂ ಸಾರ್ವಜನಕರು ಖಂಡಿಸಿ ಆಗಿರುವ ಲೋಪವನ್ನು ಸರಿಪಡಿಸುವಂತೆ 2020ರ ಮಾರ್ಚ್‌ ತಿಂಗಳಲ್ಲಿ ಪ್ರತಿಭಟನೆ ಮಾಡಿದ್ದರು.

ಆಗ ಅಧಿ ಕಾರಿಗಳು ಸ್ಥಳಕ್ಕೆ ಬಂದು ಆಗಿರುವ ಲೋಪವನ್ನು ಸರಿಪಡಿಸಿ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿರುವ ಕಟ್ಟಡವನ್ನು ತೆರವುಗೊಳಿಸಿ ಸರಿಯಾದ ಪ್ರಮಾಣದ ರಸ್ತೆ ಅಗಲೀಕರಣ ಮಾಡುವ ಭರವಸೆ ನೀಡಿದ ಮೇರೆಗೆ ವಕೀಲರ ಸಂಘ ಪ್ರತಿಭಟನೆ ನಿಲ್ಲಿಸಿತ್ತು.

ಶುಕ್ರವಾರ ಕೋರ್ಟ್‌ ಮುಂದಿನ ಸಂಕುಚಿತ ರಸ್ತೆಯನ್ನೇ ಅಗೆದು ತೇಪೆ ಹಾಕಲು ಹಿಟಾಚಿ ಯಂತ್ರದಿಂದ ರಸ್ತೆ ಅಗೆಯಲು ಆರಂಭಿಸುತ್ತಿದ್ದಂತೆ ಕೆಲವು ವಕೀಲರು ಹಾಗೂ ನಾಗರಿಕರು ಕಳಪೆ ಕಾಮಗಾರಿಯನ್ನು ನಿಲ್ಲಿಸುವಂತೆ ಆಗ್ರಹಿಸಿದ ಮೇರೆಗೆ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ ಜಗದೀಶ್‌ ಬಂದು ರಸ್ತೆ ಅಗಲೀಕರಣದಲ್ಲಿ ಆಗಿರುವ ಲೋಪವನ್ನು ವೀಕ್ಷಿಸಿ ನಗರಸಭೆಯೊಂದಿಗೆ ಮಾತನಾಡಿ, ರಸ್ತೆ ಅಗಲೀಕರಣಕ್ಕೆ ಅಗತ್ಯವಾದಷ್ಟು ಪ್ರಮಾಣದ ಜಾಗದಲ್ಲಿರುವ ಕಟ್ಟಡವನ್ನು ತೆರವಿಗೊಳಿಸಿದ ನಂತರ ರಸ್ತೆ ಅಗಲೀಕರಣ ಮಾಡುತ್ತೇವೆ.

ಅಲ್ಲಿಯವರೆಗೆ ಈ ಕಾಮಗಾರಿಯನ್ನು ಮಾಡುವುದಿಲ್ಲ. ಅಗೆದಿರುವ ಜಾಗಕ್ಕೆ ಜಲ್ಲಿ ಕಲ್ಲು ಹಾಕಿ ಸರಿಪಡಿಸಿಕೊಡುವುದಾಗಿ ಭರವೆಸೆ ನೀಡಿದ ನಂತರ ವಕೀಲರು ಮತ್ತು ನಾಗರಿಕರು ಸ್ಥಳದಿಂದ ತೆರಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next