Advertisement

ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಕೊಳಚೆ ರಾಶಿ!

07:57 PM Nov 04, 2019 | Naveen |

ಭದ್ರಾವತಿ: ತಾಲೂಕಿನ ಕೂಡ್ಲಿಗರೆ ಗ್ರಾಮದ ಪ್ರಾಥಮಿಕ ಆರೋಗ್ಯ ಉಪಕೇಂದ್ರದ ಎದುರಿನ ಚರಂಡಿಯಲ್ಲಿ ಮಳೆನೀರು, ಕಸ- ಕಡ್ಡಿ ನಿಂತು ನಾರುತ್ತಿದ್ದು ಸೊಳ್ಳೆಗಳ ಸಂತತಿಗೆ ಆಶ್ರಯತಾಣವಾಗಿದೆ.

Advertisement

ಕೂಡ್ಲಿಗರೆ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಉಪ ಕೇಂದ್ರದ ಮುಂದಿರುವ ಈ ದುರವಸ್ಥೆಯ ಬಗ್ಗೆ ಆರೋಗ್ಯ ಕೇಂದ್ರದ ಅ ಧಿಕಾರಿಗಳಾಗಲಿ, ಗ್ರಾಪಂ ಅಧಿಕಾರಿಗಳಾಗಲಿ ಗಮನ ಹರಿಸಿದಂತೆ ಕಾಣುತ್ತಿಲ್ಲ. ನಾಗರಿಕರ ಆರೋಗ್ಯ ಕಾಪಾಡಬೇಕಾದ ಆರೋಗ್ಯ ಕೇಂದ್ರದ ಗೇಟ್‌ ಮುಂಭಾಗದಲ್ಲಿರುವ ಚರಂಡಿ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೆ ಇರುವುದರ ಜೊತೆಗೆ ಮಳೆ ನೀರು ಸಹ ಈ ಚರಂಡಿಯಲ್ಲಿ ಸಂಗ್ರಹವಾಗಿರುವುದರಿಂದ ಸೊಳ್ಳೆ ಮತ್ತಿತರ ರೋಗಕಾರಕ ಕ್ರಿಮಿ ಕೀಟಗಳಿಗೆ ಉತ್ತಮ ಆಶ್ರಯ ತಾಣವಾಗಿದೆ.

ಕೊಳಕು ತುಂಬಿದ ಚರಂಡಿಯ ಪಕ್ಕದಲ್ಲಿಯೇ ಸಂಜೆ ಮಂಡಕ್ಕಿ,ತಿಂಡಿ, ಕಾಫಿ – ಟೀ ಮಾರಲಾಗುತ್ತದೆ. ಈ ಸ್ಥಳಕ್ಕೆ ತಿನಿಸು ತಿನ್ನಲು ಇಟ್ಟಿರುವ ಪ್ಲಾಸ್ಟಿಕ್‌ ಚೇರ್‌ ಗಳನ್ನು ಕೆಲಸ ಮುಗಿದ ನಂತರ ಇದೇ ಚರಂಡಿಯಲ್ಲಿ ಇಟ್ಟು ಹೋಗಲಾಗುತ್ತದೆ. ಇದೇ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಸಾರ್ವಜನಿಕ ಗ್ರಂಥಾಲಯವೂ ಸಹ ಇದೆ. ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಗ್ರಂಥಾಲಯಕ್ಕೆ ಅನೇಕರು ಪತ್ರಿಕೆ, ಪುಸ್ತಕಗಳನ್ನು ಓದಲು ಬರುತ್ತಾರೆ.

ಇದರ ಅಕ್ಕಪಕ್ಕದಲ್ಲಿ ವಿವಿಧ ವಸ್ತಗಳನ್ನು ಮಾರಾಟ ಮಾಡುವ ಅಂಗಡಿಗಳೂ ಸಹ ಇವೆ. ಕಾಫಿ , ಟೀ ಕುಡಿದವರು ಮತ್ತು ತಿಂಡಿ ತಿಂದವರು ಕಾಗದದ ಲೋಟ,ಪ್ಲೇಟ್‌ಗಳನ್ನು ಗ್ರಂಥಾಲಯದ ಕಾಂಪೌಂಡ್‌ ಒಳಗೆ ಹಾಕಿರುವುದರಿಂದ ಗ್ರಂಥಾಲಯದ ಆವರಣ ಕಸದ ತೊಟ್ಟಿಯಂತಾಗಿದೆ.

ರೀತಿ ಸದಾ ಜನ ಸೇರುವ ಈ ಪ್ರದೇಶದ ಶುಚಿತ್ವದ ಬಗ್ಗೆ ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು, ಗ್ರಾಪಂ ಅಧಿಕಾರಿಗಳು ಗಮನ ಹರಿಸದಿರುವುದರಿಂದ ಆರೋಗ್ಯ ಕೇಂದ್ರ ಮತ್ತು ಗ್ರಂಥಾಲಯದ ಸನಿಹ ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ. ನಾಗರಿಕರಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸಬೇಕಾದ ಆರೋಗ್ಯ ಇಲಾಖೆ ಮತ್ತು ಗ್ರಾಪಂ ಅಧಿಕಾರಿಗಳು ಇಂತಹ ಅಸ್ವಚ್ಛತೆಯ ವಾತಾವರಣವನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next