ಭದಾವತಿ: ವಿಶ್ವಕವಿ ತಿರುವಳ್ಳುವರ್ ಅವರ ಪ್ರತಿಮೆಯನ್ನು ರಾಜ್ಯದಲ್ಲಿ ಪ್ರತಿಷ್ಠಾಪಿಸಿದರೆ ಎಲ್ಲಿ ಕನ್ನಡಿಗರು ರೊಚ್ಚಿಗೇಳುತ್ತಾರೋ ಎಂಬ ಅಂಜಿಕೆಯಿಂದ ಹಿಂದಿನ ಮುಖ್ಯಮಂತ್ರಿಗಳು 10 ವರ್ಷಗಳ ಕಾಲ ಅದನ್ನು ಬಟ್ಟೆಯಲ್ಲಿ ಸುತ್ತಿ ಮೂಲೆಗಿಟ್ಟಿದ್ದರು. ಆದರೆ ನಾನು ರಾಜ್ಯದ ಮುಖ್ಯಮಂತ್ರಿಯಾದಾಗ ಕನ್ನಡಿಗರು ಹಾಗೂ ತಮಿಳರನ್ನು ಮಾತನಾಡಿಸಿ ಅವರ ಮನವೊಲಿಸಿ ಕರ್ನಾಟಕದಲ್ಲಿ ವಿಶ್ವಕವಿ ತಿರುವಳ್ಳುವರ್ ಅವರ ಪ್ರತಿಮೆಯನ್ನು ಹಾಗೂ ತಮಿಳುನಾಡಿನ ಚೆನ್ನೈನಲ್ಲಿ ವಿಶ್ವಕವಿ ಸರ್ವಜ್ಞನ ಪ್ರತಿಮೆ ಪ್ರತಿಷ್ಠಾಪಿಸುವ ಕೆಲಸ ಮಾಡುವ ಮೂಲಕ ಎರಡೂ ಭಾಷಿಕರ ಭಾವನೆಗೆ ಧಕ್ಕೆಯಾಗದ ರೀತಿ ಸೌಹಾರ್ದವಾಗಿ ಸಮಸ್ಯೆ ಬಗೆಹರಿಸಿದ್ದೆ. ಇದನ್ನು ತಮಿಳು ಸಮಾಜ ಇಂದಿಗೂ ಸ್ಮರಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಭಾನುವಾರ ಹಳೇನಗರದ ಕನಕ ಮಂಟಪ ಮೈದಾನದಲ್ಲಿ ತಿರುವಳ್ಳುವರ್ ಸೇವಾಸಂಘದ ವತಿಯಿಂದ ಏರ್ಪಡಿಸಿದ್ದ ಸ್ನೇಹಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕೀಯವಾಗಿ ತಮಿಳರಿಗೆ ಸರಿಯಾದ ಪ್ರಾತಿನಿಧ್ಯ ಸಿಕ್ಕಿಲ್ಲ. ಚುನಾವಣೆ ಮುಗಿದ ನಂತರ ನಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಈ ಬಗ್ಗೆ ಗಮನ ಹರಿಸಿ ನಿಗಮ ಮಂಡಳಿಗೆ ತಮಿಳರನ್ನು ನೇಮಿಸಲಾಗುವುದು ಎಂದರು.
ತಮಿಳು ಸಮಾಜ ವಿಶ್ವಾಸಕ್ಕೆ ಅರ್ಹವಾದ ಸಮಾಜ: ತಮಿಳು ಸಮಾಜ ವಿಶ್ವಾಸಕ್ಕೆ ಅರ್ಹವಾದ ಸಮಾಜವಾಗಿದ್ದು ಎಲ್ಲಾ ರೀತಿಯ ಪರಿಶ್ರಮದ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುವ ಸಮಾಜವಾಗಿದೆ. ಚುನಾವಣೆಯ ಪ್ರಚಾರದ ವೇಳೆ ಮನೆ, ಮನೆಗೆ ನಮ್ಮವರೊಂದಿಗೆ ಹೋಗಿ. ಯಾರು ಯಾರಿಗೆ ಮನೆಯಿಲ್ಲ, ಕೆಲಸವಿಲ್ಲ, ಎಂಬುದನ್ನು ಪಟ್ಟಿ ಮಾಡಿಕೊಂಡು ಬನ್ನಿ. ಚುನಾವಣೆ ಮುಗಿದ ನಂತರ ಅವರೆಲ್ಲರಿಗೂ ಮನೆ, ಉದ್ಯೋಗ, ಮುದ್ರಾ ಯೋಜನೆಯಡಿ ಬ್ಯಾಂಕ್ ಸಾಲ ಇತ್ಯಾದಿ ಸೌಲಭ್ಯವನ್ನು ದೊರಕಿಸಿಕೊಡುವ ಜವಾಬ್ದಾರಿ ನನ್ನದು ಎಂದರು.
ಇದು ಕೇವಲ ಚುನಾವಣೆಯ ವೇಳೆ ಭರವಸೆಗೆ ಹೇಳುತ್ತಿರುವ ಮಾತಲ್ಲ. ನಾನು ನುಡಿದಂತೆ ನಡೆಯುವವನು. ಇದರಲ್ಲಿ ಯಾವುದೇ ಅನುಮಾನ ಬೇಡ. ನರೇಂದ್ರ ಮೋದಿ ಸರ್ಕಾರದ ಯೋಜನೆಯಡಿ ಶೌಚಾಲಯ, ಉಜ್ವಲ್ ಯೋಜನೆಯಡಿ ಅಡುಗೆ ಅನಿಲ ವಿತರಣೆ, ಬ್ಯಾಂಕ್ ಅಕೌಂಟ್ ಮುಂತಾದ ಅನೇಕ ಕಾರ್ಯಗಳನ್ನು ಕೋಟ್ಯಂತರ ಬಡ ಕುಟುಂಬಗಳಿಗೆ ಮದ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಫಲಾನುಭವಿಗಳಿಗೆ
ಒದಗಿಸಿದೆ. ಕೆಲವು ಯೋಜನೆಗಳನ್ನು ಮಧ್ಯವರ್ತಿಗಳ ಕಾರಣ ಜನರಿಗೆ ತಲುಪಿಸಲಾಗದಿರಬಹುದು. ಚುನಾವಣೆ ಮುಗಿದ ನಂತರ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ. ಆಗ ಇನ್ನೂ ಅನೇಕ ಜನಪರ ಯೋಜನೆಗಳನ್ನು ಅರ್ಹ
ಫಲಾನುಭವಿಗಳಿಗೆ ತಲುಪಿಸಲಾಗುವುದು ಎಂದರು.
ಬಿಸಿಲೇರುವುದರೊಳಗೆ ಮತ ಹಾಕಿ: ಅನ್ನ ಆಗಿದೆಯೋ ಇಲ್ಲವೋ ಎಂದು ನೋಡಲು ಎರಡು ಅಗುಳು ನೋಡಿ ತಿಳಿದುಕೊಳುವ ನೀವು ರಾಷ್ಟ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಏನು ಕೆಲಸ ಮಾಡಿದೆ ಎಂಬುದನ್ನು ನೋಡಿ ನೀವೇೆ ನಿರ್ಧರಿಸಿ. ಬಿಸಿಲು ಏರುವುದರೊಳಗೆ ಬೆಳಗ್ಗೆಯೇ ಬೇಗ ಮತಗಟ್ಟೆಗೆ ತೆರಳಿ ಮತ ಹಾಕಿ ಎಂದರು. ಮಾಜಿ ಸಂಸದ ಆಯನೂರು ಮಂಜುನಾಥ್,
ಜಿಲ್ಲಾಧ್ಯಕ್ಷ ರುದ್ರೇಗೌಡ, ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯದಾರ್ಶಿ ವಿಜಯೇಂದ್ರ, ದತ್ತಾತ್ರಿ, ನಗರಾಧ್ಯಕ್ಷ ಜಿ. ಆನಂದ
ಕುಮಾರ್, ಗ್ರಾಮಾಂತರ ಅಧ್ಯಕ್ಷ ಮಂಗೋಟೆ ರುದ್ರೇಶ್, ಪ್ರವೀಣ್
ಮಟೇಲ್, ತಮಿಳು ಸಮಾಜದ ಮುಖಂಡರಾದ ಶ್ರೀನಿವಾಸ್, ಕದಿರೇಶ್ ಕಣ್ಣಪ್ಪ, ಬಿಜಿಎಸ್ ಶಾಲೆ ಪ್ರಾಂಶುಪಾಲರಾದ ಅಮುದ
ಮತ್ತಿತರರು ಇದ್ದರು.
ಮಜ್ಜಿಗೆಗೆ ಮುಗಿಬಿದ್ದ ಜನತೆ: ಕಾರ್ಯಕ್ರಮದ ಆಯೋಜಕರು
ಕಾರ್ಯಕ್ರಮಕ್ಕೆ ಆಗಮಿಸಿದ್ದ ಜನರಿಗೆ ಬಿಸಿಲಿನ ಬೇಗೆ ಬಾಯಾರಿಕೆ
ದಾಹ ತೀರಿಸುವ ಸಲುವಾಗಿ ಮಜ್ಜಿಗೆ ಪ್ಯಾಕೆಟ್ ವಿತರಣೆಗೆ ವ್ಯಾನ್
ನಲ್ಲಿ ವ್ಯವಸ್ಥೆ ಮಾಡಿದ್ದರು. ಒಂದೆಡೆ ವೇದಿಕೆಯ ಕಾರ್ಯಕ್ರಮ
ನಡೆಯುತ್ತಿದ್ದರೆ ಮತ್ತೂಂದೆಡೆ ರಸ್ತೆಯಲ್ಲಿ ನಿಲ್ಲಿಸಿದ್ದ ಮಜ್ಜಿಗೆ
ವಿತರಣೆಯ ವ್ಯಾನ್ ಬಳಿ ಜನರು ಮಜ್ಜಿಗೆ ಪ್ಯಾಕೆಟ್ ಪಡೆಯಲು
ಮುಗಿಬಿದ್ದರು.