Advertisement

ಲಿಫ್ಟ್‌ ಇಲ್ಲದೆ ವಕೀಲರು-ನಾಗರಿಕರ ಪರದಾಟ

01:24 PM Mar 04, 2020 | Naveen |

ಭದ್ರಾವತಿ: ನಗರದ ಹೃದಯ ಭಾಗದಲ್ಲಿರುವ ನ್ಯಾಯಾಲಯ ಸಂಕೀರ್ಣ ಮತ್ತು ಮಿನಿ ವಿಧಾನಸೌಧದ ಬಹು ಮಹಡಿ ಕಟ್ಟಡಗಳಿಗೆ ಪ್ರತಿನಿತ್ಯ ಅಸಂಖ್ಯಾತ ಜನರು ಕಾರ್ಯ ನಿಮಿತ್ತ, ಪ್ರಕರಣಗಳ ನಿಮಿತ್ತ ಬರುತ್ತಾರೆ. ಆದರೆ ಆ ರೀತಿ ಬರುವ ಅನೇಕರಲ್ಲಿ ವೃದ್ಧರು, ದೈಹಿಕ ಅಂಗವೈಕಲ್ಯಕ್ಕೆ ತುತ್ತಾದವರು, ಬಲಹೀನರು ಇದ್ದು ಅವರಿಗೆ ಮೇಲ್ಮಹಡಿ ತಲುಪಲು ಯಾವುದೇ ರೀತಿಯ ಲಿಫ್ಟ್‌ ವ್ಯವಸ್ಥೆಯನ್ನು ಈ ಎರಡೂ ಕಟ್ಟಡಗಳಲ್ಲಿ ಅಳವಡಿಸದಿರುವುದರಿಂದ ಬಹು ಪ್ರಯಾಸದಿಂದ ಮಹಡಿ ಮೆಟ್ಟಿಲುಗಳನ್ನು ಏದುಸಿರು ಬಿಡುತ್ತಾ ಹತ್ತಿಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಲಿಫ್ಟ್‌ ಇಲ್ಲದ ನ್ಯಾಯಾಲಯ ಸಂಕೀರ್ಣ: ಆಧುನಿಕ ವಿನ್ಯಾಸದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ನೆಲ ಅಂತಸ್ತನ್ನೂ ಒಳಗೊಂಡಂತೆ ನಾಲ್ಕು ಮಹಡಿಗಳಿದ್ದು.ನೆಲ ಅಂತಸ್ತಿನಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಹಾಗೂ ಜೆಎಂಎಫ್‌ಸಿ ಪ್ರಧಾನ ಮತ್ತು ಮೇಲಿನ ಮೂರು ಮಹಡಿಗಳಲ್ಲಿ ವಿವಿಧ ಶ್ರೇಣಿಯ ನ್ಯಾಯಾಲಯಗಳಿವೆ. ಒಂದನೇ ಮಹಡಿಯಲ್ಲಿರುವ ನ್ಯಾಯಾಲಯಗಳಲ್ಲಿ ವಾಹನ ಅಪಘಾತದ ನಷ್ಟ ಪರಿಹಾರದ ಪ್ರಕರಣಗಳು ನಡೆಯುತ್ತವೆ. ವಾಹನ ಅಪಘಾತದಿಂದ ಕೈಕಾಲು ಸೇರಿದಂತೆ ದೇಹದ ಅಂಗಾಂಗಗಳ ವೈಕಲ್ಯಕ್ಕೆ ತುತ್ತಾದ ಜನರು ಪರಿಹಾರಕ್ಕಾಗಿ ಹೂಡಲಟ್ಟ ಎಂವಿಸಿ ಪ್ರಕರಣಗಳ ಕಕ್ಷೀದಾರರು ಈ ನ್ಯಾಯಾಲಯಕ್ಕೆ ಹಾಜರಾಗಲು ಇಲ್ಲಿ ಯಾವುದೇ ಲಿಫ್ಟ್‌ ವ್ಯವಸ್ಥೆಯಿಲ್ಲದಿರುವ ಕಾರಣ ಅತಿ ಕಷ್ಟಪಟ್ಟು ಮಹಡಿ ಮೆಟ್ಟಿಲನ್ನು ಹತ್ತಿಳಿಯುವ ಪರಿಸ್ಥಿತಿಯದೆ.

8 ನ್ಯಾಯಾಲಯಗಳಿರುವ ಈ ಸಂಕೀರ್ಣದಲ್ಲಿ ಮೇಲಂತಸ್ತಿನಲ್ಲಿರುವ ನ್ಯಾಯಾಲಯಗಳನ್ನು ತಲುಪಲು ವಕೀಲರಿಗೆ ಮತ್ತು ಕಕ್ಷೀದಾರರಿಗೆ ನ್ಯಾಯಾಲಯದ ಸಿಬ್ಬಂದಿಗಳಿಗೆ ಮತ್ತು ನ್ಯಾಯಾಧೀಶರಿಗೆ ಮಹಡಿ ಮೆಟ್ಟಿಲನ್ನೇ ಆಶ್ರಯಿಸಬೇಕಾದ ಪರಿಸ್ಥಿತಿಯಿದೆ. ಲಿಫ್ಟ್‌ ವ್ಯವಸ್ಥೆ ಅಳವಡಿಸದಿರುವುದೇ ಅದಕ್ಕೆ ಕಾರಣವಾಗಿದೆ.

ಲಿಫ್ಟ್‌ ಅಳವಡಿಸಲು ಒಂದು ಪ್ರತ್ಯೇಕ ಜಾಗ ಬಿಟ್ಟಿದ್ದರೂ ಸಹ ಅಲ್ಲಿ ಲಿಫ್ಟ್‌ ಮಾತ್ರ ಅಳವಡಿಸದಿರುವ ಕಾರಣ ಎಲ್ಲರಿಗೂ ತೊಂದರೆಯಾಗುತ್ತಿದೆ. ವಿಶೇಷವಾಗಿ ವಕೀಲರು ಎಲ್ಲಾ ಅಂತಸ್ತಿನಲ್ಲಿರುವ 8 ಕೋಟ್‌ ಗಳಿಗೂ ಪ್ರತಿನಿತ್ಯ ಕನಿಷ್ಠ 20ರಿಂದ 30 ಬಾರಿ ಮಹಡಿ ಮೆಟ್ಟಿಲನ್ನು ಹತ್ತಿಳಿಯುವ ಪರಿಸ್ಥಿತಿ ಇರುವುದರಿಂದ ಸ್ಥೂಲಕಾಯದ ಮತ್ತು ವಯೋವೃದ್ಧ ವಕೀಲರ ಆರೋಗ್ಯದಲ್ಲಿ ಏರುಪೇರಾದ ಸಂದರ್ಭಗಳು ಇವೆ. ಅನಾರೋಗ್ಯ ಪೀಡಿತರಾದ ಕೆಲವು ನಾಗರಿಕರು ನ್ಯಾಯಾಲಯಕ್ಕೆ ಹಾಜರಾಗಲು ಮಹಡಿ ಮೆಟ್ಟಿಲನ್ನು ಹತ್ತುವಾಗ ಎದೆನೋವಿನಿಂದ ಬಳಲುವ ಪ್ರಸಂಗ ಇಲ್ಲಿ ಸಾಮಾನ್ಯವಾಗಿದೆ. ಲಿಫ್ಟ್‌ ಅಳವಡಿಕೆಗೆ ವಕೀಲರ ಸಂಘ ಸಂಬಂಧಪಟ್ಟವರ ಗಮನಕ್ಕೆ ತಂದರೂ ಸಹ ಈವರೆಗೂ ಫಲಪ್ರದವಾಗಿಲ್ಲ.

ಮಿನಿವಿಧಾನ ಸೌಧದ ಕಥೆಯೂ ಇದೇ: ನ್ಯಾಯಾಲಯದ ಸಂಕೀರ್ಣದ ಪಕ್ಕದಲ್ಲಿರುವ ತಾಲೂಕು ಕಚೇರಿ ಅಥವಾ ಮಿನಿ ವಿಧಾನ ಸೌಧದ ಕಥೆಯೂ ಹ ಇದಕ್ಕಿಂತ ಭಿನ್ನವಾಗಿಲ್ಲ. ಈ ಮಿನಿ ವಿಧಾನಸೌಧ ಮೂರು ಮಹಡಿಗಳ ಕಟ್ಟಡವಾಗಿದ್ದು ಇದರ ಮೊದಲ ಮಹಡಿಯಲ್ಲಿ ಚುನಾವಣಾ ಇಲಾಖೆ, ಖಜಾನೆ, ಭೂ ದಾಖಲಾತಿಗಳ ಇಲಾಖೆ, ಪಡಿತರ ಇಲಾಖೆ ಕಚೇರಿಗಳು ಹಾಗೂ ಅದರ ಮೇಲಿನ ಮಹಡಿಯಲ್ಲಿ ಸರ್ವೆ ಇಲಾಖೆಗಳ ಕಚೇರಿಗಳಿವೆ. ಈ ಕಟ್ಟಡದಲ್ಲಿಯೂ ಸಹ ಲಿಫ್ಟ್‌ ಸೌಲಭ್ಯ ಅಳವಡಿಸದಿರುವುದರಿಂದ ವಿವಿಧ ಪಿಂಚಣಿಗೆ ಅರ್ಜಿ ಸಲ್ಲಿಸಲು ಬರುವವರು ಪಡಿತರ ಚೀಟಿ ಪಡೆಯಲು ಸೇರಿದಂತೆ ವಿವಿದ ಕಾರ್ಯಗಳ ನಿಮಿತ್ತವಾಗಿ ಬರುವ ವೃದ್ಧ ಹಾಗೂ ಅಂಗವಿಕಲ ನಾಗರಿಕರಿಗೆ ಮೇಲಿನ ಮಹಡಿ ತಲುಪಲು ಮಹಡಿ ಮೆಟ್ಟಿಲನ್ನು ಕಷ್ಟಪಟ್ಟು ಹತ್ತಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ.

Advertisement

ಇತ್ತೀಚೆಗೆ ಶಾಸಕರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಧಿಕಾರಿಗಳ ಗಮನಕ್ಕೆ ನಾಗರಿಕರು ಮಿನಿವಿಧಾನ ಸೌಧದಲ್ಲಿ ಲಿಫ್ಟ್‌ ಸೌಲಭ್ಯದ ಅಗತ್ಯತೆಯ ಕುರಿತು ತಿಳಿಸಿದ ಮೇರೆಗೆ ಶೀಘ್ರವಾಗಿ ಲಿಫ್ಟ್‌ ಅಳವಡಿಕೆ ಕಾರ್ಯರೂಪಕ್ಕೆ ತರಲು ಅವರು ತಹಶೀಲ್ದಾರ್‌ ಅವರಿಗೆ ಸೂಚಿಸಿದರೂ ಸಹ ಈವರೆಗೂ ಲಿಫ್ಟ್‌ ಅಳವಡಿಕೆಯ ಕಾರ್ಯ ಆರಂಭವಾಗದಿರುವುದರಿಂದ ನಾಗರಿಕರು ಮಹಡಿ ಮೆಟ್ಟಿಲು ಹತ್ತಿಳಿಯುವ ತೊಂದರೆ ಅನುಭವಿಸುತ್ತಲೇ ಇದ್ದಾರೆ.

ಸರ್ಕಾರಿ ಕಟ್ಟಡಗಳು ಬಹು ಅಂತಸ್ತನ್ನು ಹೊಂದಿದ್ದರೆ ಅಲ್ಲಿ ಲಿಫ್ಟ್‌ ಅಳವಡಿಕೆ ಮತ್ತು ರ್‍ಯಾಂಪ್‌ ವ್ಯವಸ್ಥೆ ಅಳವಡಿಸಬೇಕು. ಆದರೆ ಇಲ್ಲಿ ಆ ರೀತಿಯ ವ್ಯವಸ್ಥೆ ಅಳವಡಿಕೆ ಮಾಡದಿರುವುದರಿಂದ ಸಾಮಾನ್ಯ ನಾಗರಿಕರು ವಿಶೇಷವಾಗಿ ವೃದ್ಧರು, ಅಂಗವಿಕಲರು, ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುವ ಹಿರಿಯ ವಕೀಲರು, ಕಕ್ಷೀದಾರರು, ನ್ಯಾಯಾಲಯದ ಸಿಬ್ಬಂದಿಗಳು ಕಷ್ಟಪಡುವ ಪರಿಸ್ಥಿತಿ ಮುಂದುವರಿದಿದೆ.ಸಂಬಂಧ ಪಟ್ಟವರು ಇನ್ನಾದರೂ ಈ ಎರಡೂ ಸಂಕೀರ್ಣಗಳಲ್ಲಿ ಶೀಘ್ರವಾಗಿ ಲಿಫ್ಟ್‌ ಅಳವಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ.

„ಕೆ.ಎಸ್‌. ಸುಧೀಂದ್ರ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next