Advertisement

ವಿಐಎಸ್‌ಎಲ್ ಉಳಿವಿಗಾಗಿ ಉರುಳು ಸೇವೆ

04:20 PM Jul 24, 2019 | Naveen |

ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆಯನ್ನು ಸಾರ್ವಜನಿಕ ವಲಯದಲ್ಲಿ ಉಳಿಸಬೇಕೆಂದು ಒತ್ತಾಯಿಸಿ ಕಾರ್ಮಿಕರು ಮತ್ತು ವಿವಿಧ ಸಂಘಟನೆಗಳು ನಡೆಸುತ್ತಿರುವ ಹೋರಾಟದ 19ನೇ ದಿನವಾದ ಮಂಗಳವಾರ ಕಾರ್ಮಿಕರು ಸಂಜೆ ಹಳೇನಗರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ತೆರಳಿ ದೇವಾಲಯದ ಸುತ್ತ ಉರುಳು ಸೇವೆ ಸಲ್ಲಿಸಿದರು.

Advertisement

ಆರಂಭದಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ಕಾರ್ಮಿಕರು ಅರ್ಚಕ ರಂಗನಾಥ ಶರ್ಮ ಅವರಿಂದ ನರಸಿಂಹ ಮೂಲ ಮಂತ್ರದ ಉಪದೇಶವನ್ನು ಸಾಮೂಹಿಕವಾಗಿ ಪಡೆದು ನಂತರ ಸಂಕಲ್ಪ ಸಹಿತವಾಗಿ ಪೂಜೆ ಸಲ್ಲಿಸಿ ನಂತರ ದೇವಾಲಯದ ಪ್ರಾಕಾರದ ಸುತ್ತ ಸುಮಾರು 50 ಕಾರ್ಮಿಕರು ಅಂಗಿಯನ್ನು ಕಳಚಿ ದೇವರ ನಾಮಸ್ಮರಣೆ ಮಾಡುತ್ತಾ ಉರುಳು ಸೇವೆ ಸಲ್ಲಿಸಿದರು. ಉಳಿದ ಕಾರ್ಮಿಕರು ಮತ್ತು ಅವರ ಕುಟುಂಬದವರು ದೇವಾಲಯದ ಕೆಳ ಆವರಣದಲ್ಲಿ ಪ್ರದಕ್ಷಿಣಾ ನಮಸ್ಕಾರ ಸಲ್ಲಿಸಿದರು.

ದೇವಾಲಯದ ಪ್ರಧಾನ ಅರ್ಚಕ ರಂಗನಾಥ ಶರ್ಮ ಮಾತನಾಡಿ, ಸರ್‌ ಎಂ. ವಿಶ್ವೇಶ್ವರಯ್ಯನವರಿಂದ ಸ್ಥಾಪಿತವಾದ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗೆ ಕ್ಷೇತ್ರಪಾಲಕನಾದ ಶ್ರೀಲಕ್ಷ್ಮೀನರಸಿಂಹ ದೇವರಲ್ಲಿ ಪ್ರತಿನಿತ್ಯ ನಿಷ್ಠೆಯಿಂದ ಪ್ರಾರ್ಥಿಸಿ ನರಸಿಂಹ ಮೂಲಮಂತ್ರವನ್ನು ಶ್ರದ್ಧಾಭಕ್ತಿಯಿಂದ ಪ್ರತಿನಿತ್ಯ ಸಂಕಲ್ಪಸಹಿತವಾಗಿ ಪ್ರಾರ್ಥಿಸುತ್ತಾ ಕಾರ್ಖಾನೆಯ ಉಳಿವಿಗೆ ಅಗತ್ಯವಾದ ಕಾರ್ಯಗಳನ್ನು ಕೈಗೊಂಡರೆ ಖಂಡಿತ ವಿಐಎಸ್‌ಎಲ್ ಕಾರ್ಖಾನೆ ಉಳಿದು ಬೆಳೆಯುವಲ್ಲಿ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಇಂದು ಕಾರ್ಮಿಕರು ದೇವಾಲಯಕ್ಕೆ ಬಂದು ಸಲ್ಲಿಸಿರುವ ಸೇವೆ ನಿಜಕ್ಕೂ ಒಂದು ಉತ್ತಮ ಪ್ರಯತ್ನವಾಗಿದೆ ಎಂದರು.

ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್‌, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್‌, ರಾಕೇಶ್‌, ಅಮೃತ್‌ ಮೋಹನ್‌, ನಿವೃತ್ತ ಕಾರ್ಮಿಕ ಸಂಘದ ಸದಸ್ಯರು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next