Advertisement

ವಿಐಎಸ್‌ಎಲ್ ಉಳಿಸಲು ಸಂಸದರು ಒಂದಾಗಿ

01:09 PM Jul 19, 2019 | Naveen |

ಭದ್ರಾವತಿ: ಮೈಸೂರು ಅರಸರ ಹಾಗೂ ಸಂಸ್ಥಾಸನದ ದಿವಾನರಾಗಿದ್ದ ಭಾರತರತ್ನ ಸರ್‌.ಎಂ. ವಿಶ್ವೇಶ್ವರಯ್ಯ ಅವರ ಪರಿಶ್ರಮದಿಂದ ಸ್ಥಾಪತವಾದ ವಿಐಎಸ್‌ಎಲ್ ಕಾರ್ಖಾನೆ ಇಂದು ಅವಸಾನದ ಹಾದಿಯಲ್ಲಿ ಸಾಗುತ್ತಿರುವುದನ್ನು ತಪ್ಪಿಸಿ ಕಾರ್ಖಾನೆಯನ್ನು ಉಳಿಸಲು ಸಂಘಟಿತ ಪ್ರಯತ್ನ ಮಾಡಬೇಕು ಎಂದು ಯುವ ಬ್ರಿಗೇಡ್‌ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

Advertisement

ಗುರುವಾರ ನ್ಯೂಟೌನ್‌ ಶಾರದಾ ಮಂದಿರದಲ್ಲಿ ವಿಐಎಸ್‌ಎಲ್ ಕಾರ್ಮಿಕ ಸಂಘ, ಗುತ್ತಿಗೆ ಕಾರ್ಮಿಕ ಸಂಘ ಹಾಗೂ ಯುವ ಬ್ರಿಗೇಡ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಐಎಸ್‌ಎಲ್ ಸಂವಾದ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಮತ್ತು ಕಾರ್ಮಿಕರೊಂದಿಗೆ ಪರಸ್ಪರ ಸಂವಾದ ನಡೆಸಿ ಅವರು ಮಾತನಾಡಿದರು.

ಒಂದು ಉತ್ತಮ ಕಾರ್ಖಾನೆ ನಡೆಸಲು ಅಗತ್ಯವಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿರುವ ಭದ್ರಾನದಿಯ ದಡದಲ್ಲಿರುವ ಭದ್ರಾವತಿಯಲ್ಲಿ ಸರ್‌.ಎಂ.ವಿ. ಅವರ ದೂರದೃಷ್ಟಿಯ ಫಲವಾಗಿ ಆರಂಭಗೊಂಡ ಈ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಸ್ಥಾಪನೆಯಿಂದ ಅಸಂಖ್ಯಾತ ಕುಟುಂಬಗಳಿಗೆ ಕೆಲಸ ದೊರಕುವಂತಾಗಿ ದೇಶದಲ್ಲಿಯೇ ಉತ್ತಮ ಹೆಸರು ಗಳಿಸಿತ್ತು. ಈ ಕಾರ್ಖಾನೆ ಶತಮಾನೋತ್ಸವದ ಸಂಭ್ರಮ ಆಚರಿಸಬೇಕಿತ್ತು. ಆದರೆ ಈಗ ಈ ಕಾರ್ಖಾನೆ ಅವಸಾನದ ಅಂಚಿಗೆ ಬಂದಿರುವುದನ್ನು ನೋಡಿಕೊಂಡು ಸುಮ್ಮನಿರಲಾಗದು. ಇಂತಹ ಬೃಹತ್‌ ಕಾರ್ಖಾನೆಯನ್ನು ರಾಜ್ಯದ ಎಲ್ಲಾ ಸಂಸದರು ಒಗ್ಗೂಡಿ ಉಳಿಸಬೇಕಾಗಿದೆ ಎಂದರು.

ಸರ್‌ಎಂವಿ ಹೆಸರು ಉಳಿಸಿ: ಮೈಸೂರು ಅರಸರ ಮತ್ತು ಜಗತøಸಿದ್ದ ಇಂಜಿನಿಯರ್‌ ಸರ್‌ಎಂವಿ ಅವರ ಹೆಸರು ಉಳಿಸಲು ಕಾರ್ಖಾನೆಯ ಲಾಭ-ನಷ್ಟಗಳ ವಿಷಯವನ್ನು ಬದಿಗಿಟ್ಟು ರಾಜ್ಯದ ಸಂಸದರು ಒಗ್ಗೂಡಿ ಪ್ರಧಾನ ಮಂತ್ರಿ, ಕೇಂದ್ರದ ಉಕ್ಕು ಮತ್ತು ಹಣಕಾಸು ಸಚಿವರು ಹಾಗೂ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಬೇಕಿದೆ. ಏಷ್ಯಾ ಖಂಡದಲ್ಲಿ ಉತ್ಕೃಷ್ಟ ಉಕ್ಕು ತಯಾರಿಕೆಯ ಈ ಕಾರ್ಖಾನೆ ಉಳಿದರೆ ದೇಶಕ್ಕೆ ಮಾದರಿ ಕಾರ್ಖಾನೆ ಎನಿಸಿ ಮತ್ತೆ ಗತವೈಭವ ಪಡೆದು ಪುನಃ ಅಸಂಖ್ಯಾತ ಕಾರ್ಮಿಕರಿಗೆ ಕೆಲಸ ದೊರಕುವಂತಾಗುತ್ತದೆ ಎಂದರು.

ದೇಶವ್ಯಾಪಿ ಹೋರಾಟ ಅಗತ್ಯ: ಪಕ್ಷಾತೀತವಾಗಿ ಚುನಾಯಿತ ಪ್ರತಿನಿಧಿಗಳು ಹೋರಾಡಿ ಸೈಲ್ ಆಡಳಿತದ ಮೇಲೆ ಒತ್ತಡ ತರಬೇಕು. ವಿಐಎಸ್‌ಎಲ್ ಉಳಿಸಿ ಹೋರಾಟ ಕೇವಲ ಶಿವಮೊಗ್ಗ ಜಿಲ್ಲೆಗೆ ಸೀಮಿತವಾಗದೆ ದೇಶವ್ಯಾಪಿ ಹೋರಾಟ ನಡೆಯಬೇಕು ಎಂದರು.

Advertisement

ಲಕ್ಷಾಂತರ ಕೋಟಿ ಬೆಲೆಬಾಳುವ ಕಾರ್ಖಾನೆಗೆ ಸೇರಿದ ಆಸ್ತಿಯನ್ನು ರಾಜ್ಯ ಸರಕಾರ ಕೇವಲ ಒಂದು ರೂ. ಮುಖಬೆಲೆಗೆ ಅಭಿವೃದ್ಧಿಪಡಿಸಲೆಂದು ಕೇಂದ್ರ ಸರಕಾರಕ್ಕೆ ನೀಡಿತ್ತಾದರೂ ಅಭಿವೃದ್ಧಿಪಡಿಸದೆ ಮಾರಾಟಕ್ಕೆ ಮುಂದಾಗಿರುವುದು ಸರಿಯಲ್ಲ ಎಂದರು.

ಖಾಸಗೀಕರಣಕ್ಕೆ ತಪ್ಪು ಮಾಹಿತಿ ಕಾರಣ: 700 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ಕಾರ್ಖಾನೆ ಮತ್ತು ಕಾರ್ಮಿಕರ ವಸತಿಗೃಹಗಳಿಂದ ವಾರ್ಷಿಕ ಸುಮಾರು 2 ಸಾವಿರ ಕೋಟಿ ಆದಾಯ ಲಭಿಸುತ್ತಿದೆ. ಕಾರ್ಖಾನೆಗೆ ಬಂಡವಾಳ ತೊಡಗಿಸಿ ಆಧುನಿಕ ಯಂತ್ರೋಪಕರಣ ಅಳವಡಿಸಿದರೆ ಕಾರ್ಖಾನೆ ಲಾಭದಾಯಕವಾಗಿ ನಡೆಯುವುದರಲ್ಲಿ ಅನುಮಾನವಿಲ್ಲ. ಆದರೆ ಇತ್ತೀಚೆಗೆ ಕಾರ್ಖಾನೆಗೆ ಭೇಟಿ ನೀಡಿದ್ದ ಕೇಂದ್ರ ಅಧಿಕಾರಿಗಳು ಸೈಲ್ ಆಡಳಿತಕ್ಕೆ ಈ ಬಗ್ಗೆ ಸರಿಯಾದ ಮಾಹಿತಿ ನೀಡದೆ ತಪ್ಪು ಮಾಹಿತಿ ನೀಡಿದ್ದ ಹಿನ್ನಲೆಯಲ್ಲಿ ಬಹುಶಃ ಕೇಂದ್ರ ಸರ್ಕಾರ ಈ ಸತ್ಯಾಂಶದ ಅರಿವಿಲ್ಲದೆ ಕಾರ್ಖಾನೆಯನ್ನು ಮಾರಾಟ ಮಾಡಲು ಮುಂದಾಗಿರುವ ಸಾಧ್ಯತೆ ಹೆಚ್ಚಾಗಿರುವಂತೆ ಕಾಣುತ್ತದೆ ಎಂದರು.

ಕಾರ್ಮಿಕರ ಹೋರಾಟ ಬೆಂಬಲಿಸಿ: ಕಾರ್ಮಿಕರ ಹೋರಾಟಕ್ಕೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚಾರ ಸಿಗುತ್ತಿಲ್ಲ. ಮಾಧ್ಯಮಗಳು ಇಂತಹ ಹೋರಾಟವನ್ನು ಹತ್ತಿಕ್ಕಲು ಯತ್ನಿಸಬಾರದು. ಇದನ್ನರಿತ ನಾವು ಕಾರ್ಮಿಕ ಮುಖಂಡರೊಂದಿಗೆ ಚರ್ಚಿಸಿ ಸಾಮಾಜಿಕ ಜಾಲತಾಣದಲ್ಲಿ ‘ವಿಐಎಸ್‌ಎಲ್ ಆನ್‌ ಡೆತ್‌ ಬೆಡ್‌’ ಎಂಬ ಹೆಸರಿನಲ್ಲಿ ಟ್ವೀಟ್ ಮಾಡಿದ್ದು ಸುಮಾರು 60 ಸಾವಿರಕ್ಕೂ ಅಧಿಕ ಜನರು ಪ್ರತಿಕ್ರಿಯೆ ನೀಡಿ ಕೇಂದ್ರ ಸರಕಾರದ ಗಮನ ಸೆಳೆಯುವಂತಾಗಿದೆ. ಇಂತಹ ಮಾಧ್ಯಮಗಳನ್ನು ಸದುಪಯೋಗ ಪಡಿಸಿಕೊಂಡು ಕೊನೆ ಉಸಿರು ಎಳೆಯುವ ರೋಗಿಗೆ ಆಕ್ಸಿಜನ್‌ ನೀಡುವಂತಾಗಬೇಕೆಂದರು.

ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್‌ ಮಾತನಾಡಿ, ಕಾರ್ಮಿಕ ಸಂಘ ಯಾವುದೇ ರಾಜಕೀಯ ಪಕ್ಷಗಳಿಗೆ ಸೇರದೆ ಹೋರಾಟ ಮನೋಭಾವ ಹೊಂದಿದೆ. ಪಕ್ಷಗಳಿಗೆ ಸಂಘವನ್ನು ಸೇರ್ಪಡೆಗೊಳಿಸಲು ಮುಂದಾಗಿಲ್ಲ. ಮೈಸೂರು ಅರಸರು ದಾನವಾಗಿ ನೀಡಿದ ಸಮಸ್ತ ಆಸ್ತಿ ಹೊಂದಿರುವ ಕಾರ್ಖಾನೆಯನ್ನು ಯಾವುದೇ ರೀತಿಯ ಹೋರಾಟ ಮಾಡಿ ಉಳಿಸಿಕೊಳ್ಳಬೇಕೆಂದರು.

ನಿವೃತ್ತ ಕಾರ್ಮಿಕ ಸಂಘದ ಮುಖಂಡ ಹನುಮಂತರಾವ್‌ ಮತ್ತು ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್‌ ಮಾತನಾಡಿದರು. ವಿವಿಧ ಸಂಘ-ಸಂಸ್ಥೆಗಳ ನೂರಾರು ಮಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next