ಭದ್ರಾವತಿ: ಲಾಕ್‌ಡೌನ್ ಕಾರಣ ಬೆಂಗಳೂರಿಗೆ ತೆರಳಲಾಗದೆ ಭದ್ರಾವತಿಯಲ್ಲೇ ಉಳಿದುಕೊಂಡಿದ್ದ ಸುಮಾರು 400ಕ್ಕೂ ಅಧಿಕ ನಾಗರಿಕರು ತಾಲೂಕು ಆಡಳಿತದಿಂದ ಅನುಮತಿ ಪತ್ರ ಪಡೆದು ಮಂಗಳವಾರ ಬೆಂಗಳೂರಿಗೆ ರಾಜ್ಯ ಸರ್ಕಾರಿ ಬಸ್‌ಗಳಲ್ಲಿ ತೆರಳಿದರು.
ಹೊರ ಜಿಲ್ಲೆಗಳಿಗೆ ಹೋಗಲು ನಾಗರಿಕರು ಅರ್ಜಿಗಳನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದ್ದು ಅದನ್ನು ಅವರು ಪರಿಶೀಲಿಸಿದ ನಂತರ ಸುಮಾರು 400 ಜನರಿಗೆ ಬೆಂಗಳೂರಿಗೆ ತೆರಳಲು ಅನುಮತಿ ಪತ್ರ ನೀಡಿದ ಮೇರೆಗೆ ಅನುಮತಿ ಪತ್ರ ಪಡೆದವರು ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಲಗೇಜ್ ಸಮೇತವಾಗಿ ಬೆಳಗಿನಿಂದಲೇ ಜಮಾಯಿಸಿದ್ದರು. ಕೆಲಸಕ್ಕೆಂದು ಕೂಲಿಗೆ ವಲಸೆ ಬಂದಿದ್ದ ಉತ್ತರಪ್ರದೇಶದ ಕಾನ್ಪುರ್, ಬಿಹಾರ್, ತಮಿಳುನಾಡು, ಬೆಂಗಳೂರು, ಕೊಪ್ಪಳ ಮುಂತಾದೆಡೆ ಹೋಗುವ ಜನರಿದ್ದರು. ಸಾರ್ ನಾವು 4
ಮಂದಿ ಅನುಮತಿ ಕೇಳಿದ್ದರೆ ಇಬ್ಬರದು ಮಾತ್ರ ಪಟ್ಟಯಲ್ಲಿ ಹೆಸರು ಬಂದಿದೆ ಎಂದರೆ, ಮತ್ತೆ ಕೆಲವರು ನಮಗೆ ಮೊಬೈಲ್ ಗೆ ಮೆಸೇಜ್ ಅಥವಾ ಫೋನ್ ಬಂದಿಲ್ಲ ಎಂಬಿತ್ಯಾದಿ ಗೋಳು ತೋಡಿಕೊಳ್ಳುತ್ತಿದ್ದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ 16 ಬಸ್‌ಗಳನ್ನು ವಿವಿಧ ತಂಡಗಳಾಗಿ ವಿಂಗಡಿಸಿ ಪ್ರತಿ ಬಸ್‌ನಲ್ಲಿ 28 ಪ್ರಯಾಣಿಕರಿಗೆ ಮತ್ರ ಅವಕಾಶ ನೀಡಲಾಯಿತು. ಪ್ರಯಾಣಿಕರಿಂದ ತಲಾ 280 ರೂ. ನಿಗ ದಿತ ಬಸ್ ಚಾರ್ಜ್‌ನ್ನು ಪಡೆದ ಕಂಡೆಕ್ಟರ್ ಟಿಕೆಟ್ ನೀಡುವುದರ ಜೊತೆಗೆ ಪ್ರಯಾಣಿಕರಿಗೆ ಸೂಚನೆ ನೀಡಿ ಬಸ್ ನೇರವಾಗಿ ಬೆಂಗಳೂರಿನ ಮೆಜಸ್ಟಿಕ್ ನಲ್ಲಿರುವ ಬಸ್ ನಿಲ್ದಾಣಕ್ಕೆ ಹೋಗುತ್ತದೆ. ಮದ್ಯದಲ್ಲಿ ಯಾರನ್ನೂ ಹತ್ತಿಸುವುದಾಗಲಿ, ಇಳಿಸುವುದಾಗಲಿ ಮಾಡುವುದಿಲ್ಲ ಎಂದು ಪ್ರಯಾಣಿಕರಿಗೆ ತಿಳಿಸಿದ ನಂತರ ಬಸ್ ಬೆಂಗಳೂರಿನತ್ತ ಪ್ರಯಾಣ ಬೆಳಿಸಿತು.
ತಹಶೀಲ್ದಾರ್ ಚಂದ್ರಶೇಖರ್ ಅವರು ಸ್ಥಳದಲ್ಲಿ ಹಾಜರಿದ್ದು ಪ್ರಯಾಣಿಕರ ಅನುಮತಿ ಪತ್ರಗಳಿಗೆ ಸಹಿ ಮಾಡಿ ಪ್ರಯಾಣಿಕರಿಗೆ ಸೂಚನೆ ನೀಡುತ್ತಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ| ಗಾಯತ್ರಿ ಹಾಗೂ ಸಿಬ್ಬಂದಿ ನೀಲೇಶ್ ಅವರು ಸ್ಥಳದಲ್ಲಿದ್ದ ಪ್ರಯಾಣಿಕರ ದೇಹದ ತಾಪಮಾನವನ್ನು ತಪಾಸಣೆ ಮಾಡಿದರು.