Advertisement

ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ತಾರತಮ್ಯ

03:21 PM Mar 09, 2020 | Naveen |

ಭದ್ರಾವತಿ: ನಗರದಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಜೊತೆಗೆ ಕೆಲವೆಡೆ ರಸ್ತೆ ಅಗಲೀಕರಣ ನಿಗದಿತ ವಿಸ್ತೀರ್ಣಕ್ಕೆ ತಕ್ಕಂತೆ ಮಾಡದೆ ಅಲ್ಲಲ್ಲಿ ಅದರ ವಿಸ್ತೀರ್ಣವನ್ನು ಕಿರಿದುಗೊಳಿಸಿ ಕಾಮಗಾರಿ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Advertisement

ನಗರದ ಬಿ.ಎಚ್‌. ರಸ್ತೆಯಲ್ಲಿರುವ ಕೆಎಸ್‌ಆರ್‌ ಟಿಸಿ ಮುಖ್ಯ ಬಸ್‌ ನಿಲ್ದಾಣದಿಂದ ಹೊಸಸೇತುವೆ ಮಾರ್ಗವಾಗಿ ತಾಲೂಕು ಕಚೇರಿ ಮುಂಭಾಗದವರೆಗೆ ನಡೆದಿರುವ ರಸ್ತೆ ಅಗಲೀಕರಣದ ಕಾಮಗಾರಿಯ ಆರಂಭದಲ್ಲಿ ರಸ್ತೆ ಅಗಲೀಕರಣದ ಹೆಸರಲ್ಲಿ ಈ ರಸ್ತೆಯ ಬದಿಯಲ್ಲಿ ರಸ್ತೆಯಿಂದ ಬಹಳ ಹಿಂದಿದ್ದ ಬೃಹತ್‌ ಮರಗಳನ್ನು ಕಡಿದು ಸಾಗಿಸುವಲ್ಲಿ ತೋರಿದ ಶೀಘ್ರತೆ ಅಥವಾ ಕಾರ್ಯದ ವೇಗ, ಈಗ ಇಲ್ಲವಾಗಿದೆ. ಎಲ್ಲ ಮರಗಳನ್ನು ಕಡಿದಾದ ಮೇಲೆ ರಸ್ತೆ ಅಗಲೀಕರಣದ ಕೆಲಸ ಆಮೆಗತಿಯಲ್ಲಿ ಸಾಗುತ್ತಿದೆ. ಪ್ರಸ್ತುತ ನಡೆದಿರುವ ಕಾಂಕ್ರೀಟ್‌ ರಸ್ತೆಯ ಅಗಲೀಕರಣದ ವಿಸ್ತೀರ್ಣದಲ್ಲಿ ಸಹ ಕೆಲವೆಡೆ ಅಲ ³ಸ್ವಲ್ಪ ಅಗಲವನ್ನು ಕಿರಿದುಗೊಳಿಸಿ ರಸ್ತೆ ನಿರ್ಮಿಸಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕವಾಗಿ ಕೇಳಿಬರುತ್ತಿದೆ.

ಕಾಂಕ್ರೀಟ್‌ ರಸ್ತೆ ಅಗಲೀಕರಣ ಕಾರ್ಯ ಪ್ರಸ್ತುತ ಮಿನಿ ವಿಧಾನ ಸೌಧದ ಎದುರಿನ ಆಚೆ ಭಾಗದವರೆಗೆ ಸಾಗಿಬಂದಿದ್ದು, ಮಿನಿ ವಿಧಾನಸೌಧದ ಪಕ್ಕದಲ್ಲಿರುವ ನ್ಯಾಯಾಲಯದ ಸಂಕೀರ್ಣದ ಎದುರಿನ ರಸ್ತೆಯನ್ನು ಅಗಲೀಕರಣ ಮಾಡಲು ಈವರೆಗೆ ಯಾವುದೇ ರೀತಿಯ ಕಾರ್ಯಚಟುವಟಿಕೆ ನಡೆದಿಲ್ಲದಿರುವುದು ನಾಗರಿಕರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುವಂತೆ ಮಾಡಿದೆ.

ಪ್ರಸ್ತುತ ನಡೆಯುತ್ತಿರುವ ರಸ್ತೆ ಅಗಲೀಕರಣ ರಂಗಪ್ಪ ವೃತ್ತದವರೆಗೆ ನಡೆಯಬೇಕಿದೆ. ಆದರೆ ಈಗ ನಡೆಸುತ್ತಿರುವ ಕಾಮಗಾರಿಯನ್ನು ನೋಡಿದರೆ ನ್ಯಾಯಾಲಯದ ಮುಂದಿರುವ ರಸ್ತೆಯ ಅಗಲೀಕರಣದ ವಿಸ್ತೀರ್ಣವನ್ನು ಹೆಚ್ಚಿಸದೆ, ಇರುವ ಸಣ್ಣ ರಸ್ತೆಯ ಗಾತ್ರಕ್ಕೆ ಕಾಂಕ್ರೀಟ್‌ ಹಾಕಿ ರಸ್ತೆ ಅಗಲೀಕರಣದ ಕಾಮಗಾರಿ ಮುಗಿಸುವ ಹುನ್ನಾರ ನಡೆದಿದೆಯೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಕಾರಣ ನ್ಯಾಯಾಲಯದ ಎದುರಿನ ರಸ್ತೆಯ ಆಚೆ ಬದಿಯಿರುವ ರಸ್ತೆಗೆ ಅತೀ ಸನಿಹದಲ್ಲಿರುವ ಕೆಲವು ಕಟ್ಟಡಗಳ ಮಾಲೀಕರು ಇಲ್ಲಿನ ಸ್ಥಳೀಯ ಅಧಿಕಾರರೂಢ ರಾಜಕಾರಣಿಯ ಮೇಲೆ ಒತ್ತಡ ತಂದಿರುವ ಸಾಧ್ಯತೆ ಹಾಗೂ ಈ ರಸ್ತೆ ಅಗಲೀಕರಣಕ್ಕೆ ಕಟ್ಟಡಗಳನ್ನು ತೆರೆವುಗೊಳಿಸುವ ಯಾವುದೇ ಪ್ರಯತ್ನವನ್ನು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾಡದೆ ಇರುವುದು ಅನುಮಾನ ಹೆಚ್ಚಿಸಿದೆ.

ಕೋರ್ಟ್‌ ಮುಂದಿನ ರಸ್ತೆ ಅಗಲೀಕರಣದ ಅಗತ್ಯ: ರಸ್ತೆಯ ಒಂದು ಬದಿಯಲ್ಲಿರುವ ನ್ಯಾಯಾಲಯದ ಸಂಕೀರ್ಣದಲ್ಲಿ 7 ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು ಪ್ರತಿನಿತ್ಯ ನೂರಾರು ವಕೀಲರು, ಸಾವಿರಾರು ಕಕ್ಷೀದಾರರು ನ್ಯಾಯಾಲಯಕ್ಕೆ ಬರಲು ಇದೊಂದೇ ಮಾರ್ಗ, ಅದೇ ರೀತಿ ಈ ರಸ್ತೆಯಲ್ಲಿ ಮಿನಿವಿಧಾನಸೌಧ, ತಾಪಂ, ಸಮಾಜ ಕಲ್ಯಾಣ ಇಲಾಖೆ, ಖಾಸಗಿ ಆಸ್ಪತ್ರೆ ಇರುವುದರಿಂದ ಹಾಗೂ ಶಿವಮೊಗ್ಗ- ಭದ್ರಾವತಿಗೆ ಸಂಚರಿಸುವ ಬಸ್‌, ಟ್ರ್ಯಾಕ್ಸ್ ಗಳು ಈ ಮಾರ್ಗದಲ್ಲಿ ಸಂಚರಿಸುವುದರಿಂದ ಶಾಲಾ- ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ ಸಂಚರಿಸುವ ರಸ್ತೆ ಇದೇ ಆಗಿರುವುದರಿಂದ, ಈಗಿರುವ ಈ ರಸ್ತೆ ರಂಗಪ್ಪ ವೃತ್ತದವರೆಗೆ ಅಗಲ ಆಗಲೇಬೇಕಾದ ತುರ್ತು ಅಗತ್ಯವಿದೆ. ಆದರೆ ಈಗ ನಡೆಯುತ್ತಿರುವ ರಸ್ತೆ ಅಗಲೀಕರಣದ ವಿಸ್ತೀರ್ಣವನ್ನು ನ್ಯಾಯಾಲಯದ ಮುಂದಿರುವ ಕಟ್ಟಡಗಳನ್ನು ತೆರವುಗೊಳಿಸದೆ ಈಗಿರುವಷ್ಟೇ ರಸ್ತೆಯನ್ನು ಅಲ್ಪ-ಸ್ವಲ್ಪ ಬದಲಾವಣೆಯೊಂದಿಗೆ ಮಾಡಿದರೆ ರಸ್ತೆ ಅಗಲೀ ಕರಣದ ಉದ್ದೇಶ ಈಡೇರುವುದಿಲ್ಲ ಹಾಗೂ ಇದರಿಂದ ಈ ಸ್ಥಳದಲ್ಲಿ ವಾಹನ ಸಂಚಾರಕ್ಕೆ ತೊಂದರೆ ಆಗುವುದರ ಜೊತೆಗೆ ರಸ್ತೆ ಅಗಲೀಕರಣದ ಕಾಮಗಾರಿ ತಾರತಮ್ಯ ನೀತಿ ಅನುಸರಿಸಿದಂತಾಗುತ್ತದೆ.

Advertisement

ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಈಗಾಗಲೇ ರಸ್ತೆ ಅಗಲೀಕರಣದ ನೆಪದಲ್ಲಿ ಸಾಲುಮರಗಳನ್ನು ಕಡಿದು ಹಾಕುವಲ್ಲಿ ತೋರಿಸಿದಷ್ಟೇ ಆಸಕ್ತಿ, ಕಾರ್ಯಶ್ರದ್ಧೆಯನ್ನು ರಸ್ತೆಯ ಅಗಲೀಕರಣದ ಕಾರ್ಯದಲ್ಲಿಯೂ ತೋರಿಸಿ, ನಿಗದಿತವಾಗಿ ನ್ಯಾಯಾಲಯದ ಎದುರಿಗೆ ಇರುವ ಅನಧಿಕೃತ ಕಟ್ಟಡವನ್ನು ತೆರವುಗೊಳಿಸಿ ವಿಶಾಲ ಹಾಗೂ ಸರಾಗವಾಗಿ ವಾಹನ ಮತ್ತು ನಾಗರಿಕರು ಸಂಚರಿಸಲು ಸಾಧ್ಯವಾಗುವಂತೆ ಕಾಂಕ್ರೀಟ್‌ ರಸ್ತೆಯನ್ನು ಯಾವುದೇ ತಾರತಮ್ಯವಿಲ್ಲದೆ ನಿರ್ಮಾಣ ಮಾಡುವ ಅಗತ್ಯವಿದೆ.

ಒಂದೊಮ್ಮೆ ಸಂಬಂಧಪಟ್ಟ ಇಲಾಖೆಯವರು ಈ ವಿಷಯದಲ್ಲಿ ರಾಜಕೀಯ ಒತ್ತಡಕ್ಕೋ ಅಥವಾ ಬೇರೆ ಕಾರಣಕ್ಕೋ ಈ ಭಾಗದ ರಸ್ತೆಯನ್ನು ಸಂಕುಚಿತವಾಗಿ ಉಳಿಸಲು ಮುಂದಾದರೆ ಇಲಾಖೆ ಅಧಿ ಕಾರಿಗಳು, ನಾಗರಿಕರ ತೀವ್ರ ಪ್ರತಿಭಟನೆಯಂತಹ ಕ್ರಮವನ್ನು ಎದುರಿಸುವ ಸಂದರ್ಭ ಉದ್ಭವವಾಗುವ ಸಾಧ್ಯತೆ ಇದೆ.

„ಕೆ.ಎಸ್‌. ಸುಧೀಂದ್ರ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next