Advertisement

ಮತದಾರರ ಪಟ್ಟಿ ಪರಿಷ್ಕರಣೆ ಸಮರ್ಪಕವಾಗಿರಲಿ

04:46 PM Jan 25, 2020 | Naveen |

ಭದ್ರಾವತಿ: ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಯಾವುದೇ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕುವ ಸಂದರ್ಭದಲ್ಲಿ ಕಡ್ಡಾಯವಾಗಿ ಮನೆಗೆ ಭೇಟಿ ನೀಡಿ ಸಮರ್ಪಕವಾಗಿ ಪರಿಶೀಲನೆ ನಡೆಸಿರಬೇಕು ಎಂದು ಮತದಾರರ ಪಟ್ಟಿ ಪರಿಷ್ಕರಣೆ ಜಿಲ್ಲಾ ನೋಡಲ್‌ ಅಧಿಕಾರಿ ಶಾಲಿನಿ ರಜನೀಶ್‌ ಅವರು ಸೂಚನೆ ನೀಡಿದರು.

Advertisement

ಶುಕ್ರವಾರ ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಪಡೆಯಲಾಗಿರುವ ಎಲ್ಲಾ ಅರ್ಜಿಗಳನ್ನು ಸೋಮವಾರದ ಒಳಗಾಗಿ ವಿಲೇವಾರಿ ಮಾಡಬೇಕು. ಇನ್ನೂ 3 ಸಾವಿರ ಅರ್ಜಿಗಳು ವಿಲೇವಾರಿಗೆ ಬಾಕಿಯಿದ್ದು, ಎರಡು ದಿನಗಳಲ್ಲಿ ಪೂರ್ಣಗೊಳಿಸಬೇಕು. ಮತದಾರರು ನೀಡಿರುವ ವಿಳಾಸದಲ್ಲಿ ವಾಸ ಇಲ್ಲದಿರುವುದನ್ನು ಖಾತ್ರಿಪಡಿಸಿದ ಬಳಿಕ ಮಾತ್ರ ಪಟ್ಟಿಯಿಂದ ಹೆಸರು ತೆಗೆದು ಹಾಕಬಹುದು. ಅಸಮರ್ಪಕವಾಗಿ ತೆಗೆದು ಹಾಕಬಾರದು ಎಂದು ಅವರು ಎಚ್ಚರಿಕೆ ನೀಡಿದರು.

1950 ಟೋಲ್‌ ಫ್ರೀ ಸಂಖ್ಯೆಯಲ್ಲಿ ಸ್ವೀಕರಿಸಲಾಗಿರುವ ಎಲ್ಲಾ ದೂರುಗಳನ್ನು ತಕ್ಷಣ ವಿಲೇವಾರಿ ಮಾಡಬೇಕು. ಸಾರ್ವಜನಿಕರು ಸಹ ಈ ಸೌಲಭ್ಯವನ್ನು ಗರಿಷ್ಟ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಮತದಾರರ ಹಾಗೂ ಜನಸಂಖ್ಯೆ ಅನುಪಾತ ಶೇ.72ರಷ್ಟಿರಬೇಕು. ಆದರೆ ಶಿವಮೊಗ್ಗದಲ್ಲಿ ಇದರ ಪ್ರಮಾಣ ಶೇ.82, ತೀರ್ಥಹಳ್ಳಿಯಲ್ಲಿ ಶೇ.78ರಷ್ಟಿದೆ. ಇಂತಹ ಪ್ರಕರಣಗಳಲ್ಲಿ ಕೂಲಂಕಶವಾಗಿ ಪರಿಶೀಲಿಸಿ ಅನುಪಾತ ಸರಿಯಾಗುವಂತೆ ನೋಡಿಕೊಳ್ಳಬೇಕು ಎಂದರು.

ಸಾರ್ವಜನಿಕರ ಜವಾಬ್ದಾರಿ: ಮತದಾರರ ಪಟ್ಟಿ ಪರಿಷ್ಕರಣೆ ಕುರಿತಾಗಿ ಮನೆಗಳಿಗೆ ಆಗಮಿಸುವ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಅಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಿ ಸಹಕರಿಸುವಂತೆ ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಜನಗಣತಿ ಕಾಯ್ದೆ ಕುರಿತಂತೆ ಎಲ್ಲೆಡೆ ಚರ್ಚೆ ಶುರುವಾದ ನಂತರ ಮತದಾರರ ಪಟ್ಟಿ ತಯಾರಿಕಾ ಕಾರ್ಯಕ್ಕೆ ನಿಯೋಜಿತರಾದ ಸಿಬ್ಬಂದಿಗಳಿಗೆ ನಾಗರಿಕರು ಕೆಲವೆಡೆ ಮಾಹಿತಿ ನೀಡದೆ ಅವರನ್ನು ಸಿಎಎ ಮಾಹಿತಿ ಸಂಗ್ರಹಕ್ಕಾಗಿ ಬಂದವರೆಂಬ ಅನುಮಾನದಿಂದ ನೋಡಿ ಅವರ ಮೇಲೆ ಕೋಪ ಪ್ರದರ್ಶಿಸುವ ಘಟನೆ ಸಹ ನಡೆದಿದೆ. ಆದ್ದರಿಂದ ಸಿಬ್ಬಂದಿ ಚುನಾವಣಾ ಇಲಾಖೆ ನೀಡಿರುವ ಬ್ಯಾಡ್ಜ್ನ್ನು ಕೊರಳಿಗೆ ಧರಿಸಿಕೊಂಡು ಕಾರ್ಯ ನಿರ್ವಹಿಸಿ ಎಂದರು.

ತೃಪ್ತಿ ತಂದಿಲ್ಲ ಯುವ ಮತದಾರರ ನೋಂದಣಿ: ಯುವ ನೂತನ ಮತದಾರರ ನೋಂದಣಿ ಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿ ಮೂದಾಗದಿರುವುದರಿಂದ ಇಲಾಖೆಗೆ ತೃಪ್ತಿ ತಂದಿಲ್ಲ. ಆದ್ದರಿಂದ ಯುವ ನೂತನ ಮತದಾರರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವ ಕಾರ್ಯದ ಬಗ್ಗೆ ರಾಷ್ಟ್ರೀಯ ಮತದಾರರ ದಿನಾಚರಣೆಯ ದಿನವಾದ ಶನಿವಾರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ವಿಶೇಷವಗಿ ಕಾರ್ಯಕ್ರಮವನ್ನು ಆಯೋಜಿಸಿ ನೂತನ ಯುವಜನಾಂಗ ಮತದರರ ಪಟ್ಟಿಗೆ ಅವರ ಹೆಸರನ್ನು ಸೇರಿಸಲು ಪ್ರೇರೇಪಿಸಿ ಎಂದು ಸಭೆಯಲ್ಲಿ ಹಾಜರಿದ್ದ ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರಿಗೆ ಸೂಚನೆ ನೀಡಿದರು.

Advertisement

ಕಾರ್ಯದರ್ಶಿ ಸೂಚನೆ: ಮತದಾರರ ಪಟ್ಟಿ ಪರಿಷ್ಕರಣೆ ಜಿಲ್ಲಾ ನೋಡಲ್‌ ಅಧಿಕಾರಿ ಶಾಲಿನಿ ರಜನೀಶ್‌ ಅವರು ಭದ್ರಾವತಿ ತಾಲೂಕಿನ ಕೂಡಲಗೆರೆ ಗ್ರಾಪಂನ ಮತಗಟ್ಟೆ ಕೇಂದ್ರ 9ಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಬಿಕಾಂ ವಿದ್ಯಾರ್ಥಿನಿಯೊಬ್ಬಳ ಬಳಿ ಚುನಾವಣಾ ಗುರುತಿನ ಚೀಟಿ ಇದೆಯೇ ಎಂದು ಪ್ರಶ್ನಿಸಿದರು. ಆಕೆ ಇನ್ನೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಲ್ಲ ಎಂದಾಗ, ತಕ್ಷಣ ಆಕೆಗೆ ನಿಗದಿತ ಅರ್ಜಿ ನಮೂನೆ ನೀಡಿ ಶನಿವಾರ ನಡೆಯುವ ರಾಷ್ಟ್ರೀಯ ಮತದಾರರ ದಿನಾಚರಣೆ ಸಂದರ್ಭದಲ್ಲಿ ಮತದಾರರ ಗುರುತಿನ ಚೀಟಿಯನ್ನು ವಿತರಿಸುವಂತೆ ತಹಶೀಲ್ದಾರ್‌ ಅವರಿಗೆ ಸೂಚನೆ ನೀಡಿದರು. ತನ್ನ ಎಲ್ಲಾ ಸಹಪಾಠಿಗಳಿಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ತಿಳಿಸುವಂತೆ ಆಕೆಗೆ ಕಾರ್ಯದರ್ಶಿ ಅವರು ಮನವಿ ಮಾಡಿದರು. ತಹಶೀಲ್ದಾರ್‌ ಹಾಗೂ ಉಪ ವಿಭಾಗಾಧಿಕಾರಿಗಳು ಕನಿಷ್ಟ ಶೇ.10ರಷ್ಟು ಮನೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಪರಿಶೀಲಿಸುವಂತೆ ಕಾರ್ಯದರ್ಶಿ ಅವರು ತಿಳಿಸಿದರು.ಅಪರ ಜಿಲ್ಲಾ ಧಿಕಾರಿ ಅನುರಾಧಾ, ಉಪ ವಿಭಾಗಾಕಾರಿ ಪ್ರಕಾಶ್‌, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿ ಗಳು ಸಭೆಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next