ಭದ್ರಾವತಿ: ಸರ್.ಎಂ. ವಿಶ್ವೇಶ್ವರಯ್ಯನವರಿಂದ ಸ್ಥಾಪಿತವಾದ ವಿಐಎಸ್‌ಎಲ್ ಕಾರ್ಖಾನೆ ಯಾವುದೇ ಕಾರಣಕ್ಕೂ ಖಾಸಗೀಕರಣವಾಗಲು ಅಥವಾ ಮುಚ್ಚಲು ಕಾರ್ಮಿಕರು ಅವಕಾಶ ನೀಡುವುದಿಲ್ಲ ಎಂದು ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ್ ಹೇಳಿದರು.
ಶನಿವಾರ ಮದ್ಯಾಹ್ನ ವಿಐಎಸ್‌ಎಲ್ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ನಿವೃತ್ತ ಕಾರ್ಮಿಕರು ಸಂಘಟಿತವಾಗಿ ನಡೆಸಿದ ಮೆರವಣಿಗೆ, ಅಂಬೇಡ್ಕರ್ ವೃತ್ತದಲ್ಲಿ ಅರೆಬೆತ್ತಲೆ ಪ್ರತಿಭಟನೆ ಮತ್ತು ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದ ವೇಳೆ ಕಾರ್ಮಿಕರನ್ನುದ್ದೇಶಿಸಿ ಅವರು ಮಾತನಾಡಿದರು.
ತಾಲೂಕು ಬಿಜೆಪಿಯಿಂದ ಹಿಡಿದು ಜಿಲ್ಲೆ, ರಾಜ್ಯ ಬಿಜೆಪಿ ಮುಖಂಡರು ಈ ಕಾರ್ಖಾನೆ ಉಳಿವಿಗೆ 2015ರಿಂದಲೂ ಭರವಸೆ ನೀಡುತ್ತಾ ಬಂದಿದ್ದು ಬಿ.ಎಸ್. ಯಡಿಯೂರಪ್ಪ ಕಾರ್ಖಾನೆಗೆ ಕೇಂದ್ರ ಉಕ್ಕು ಸಚಿವರನ್ನೂ ಸಹ ಕರೆ ತಂದು ಕಾರ್ಖಾನೆ ಉಳಿಯುತ್ತದೆ ಎಂಬ ಭರವಸೆಯನ್ನು ಕಾರ್ಮಿಕರಲ್ಲಿ ಭದ್ರಾವತಿ ನಾಗರಿಕರಲ್ಲಿ ಬಿತ್ತಿದರು. ಆದರೆ ಈಗ ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಹೊರಟಿರುವುದನ್ನು ಕಾರ್ಮಿಕರು ಬಲವಾಗಿ ಖಂಡಿಸುತ್ತೇವೆ ಎಂದರು.
ಭದ್ರಾವತಿಯ ಜೀವನಾಡಿ ಎನಿಸಿದ ಎಂಪಿಎಂ ಮತ್ತು ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಈಗಾಗಲೇ ಎಂಪಿಎಂ ಕಾರ್ಖಾನೆಗೆ ಬೀಗ ಹಾಕಿ ಅಲ್ಲಿನ ಕಾರ್ಮಿಕರು ಬೀದಿ ಪಾಲಾಗುವಂತಾಗಿದೆ. ಈಗ ವಿಐಎಸ್‌ಎಲ್ ಕಾರ್ಖಾನೆಯನ್ನು ಮುಚ್ಚುವ ಸಲುವಾಗಿ ಖಾಸಗೀಕರಣದ ನಾಟಕವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಕಾರ್ಖಾನೆ ಉಳಿದರೆ ಮಾತ್ರ ಭದ್ರಾವತಿ ಭವಿಷ್ಯವಿದೆ. ಆದ್ದರಿಂದ ಇದು ಕೇವಲ ಕಾರ್ಮಿಕರ ಹೋರಾಟವಲ್ಲ. ಇಡೀ ಭದ್ರಾವತಿ ಜನತೆಯ ಅಳಿವು- ಉಳಿವಿನ ಹೋರಾಟವಾಗಿದೆ. ಇಂದು ಕಾರ್ಮಿಕರು ಕಾರ್ಖಾನೆ ಉಳಿಸಲು ಬೀದಿಗಿಳಿದು ಅರೆಬೆತ್ತಲಾಗಿದ್ದಾರೆ. ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಸಾರ್ವಜನಿಕ ವಲಯದಲ್ಲಿ ಉಳಿಸಿಕೊಂಡು ಅಭಿವೃದ್ಧಿ ಮಾಡದಿದ್ದರೆ ಇಡೀ ಭದ್ರಾವತಿ ಜನತೆ ಬದುಕು ಬೆತ್ತಲಾಗುತ್ತದೆ. ಸಾರ್ವಜನಿಕರಿಗೆ ಈ ರೀತಿ ರಸ್ತೆ ತಡೆ ಮಾಡಿ ತೊಂದರೆ ಕೊಡಬೇಕೆಂಬುದು ನಮ್ಮ ಉದ್ದೇಶವಲ್ಲ. ಆದರೆ ಜನತೆಗೆ ಕಾರ್ಖಾನೆ ಖಾಸಗೀಕರಣಗೊಂಡರೆ ಆಗುವ ತೊಂದರೆ ತಿಳಿಸುವ ಸಲುವಾಗಿ ಈ ರೀತಿ ಹೋರಾಟ ಅನಿವಾರ್ಯವಾಗಿದೆ ಎಂದರು.
ನಿವೃತ್ತ ಕಾರ್ಮಿಕ ಹಾಗೂ ಸಂಘದ ಮಾಜಿ ಅಧ್ಯಕ್ಷ ಚಂದ್ರಹಾಸ ಮಾತನಾಡಿ, ಕೇಂದ್ರ ಸರ್ಕಾರ ಕೂಡಲೇ ಕಾರ್ಖಾನೆ ಉಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಖಾಸಗೀಕರಣದ ನಿರ್ಧಾರದಿಂದ ಹಿಂದೆ ಸರಿಯಬೇಕು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ರಾಘವೇಂದ್ರ ಅವರು ಈ ಬಗ್ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆಯುತ್ತದೆ ಎಂದರು.
ಪೊಲೀಸ್ ಇಲಾಖೆ ಕಾರ್ಮಿಕರ ಹೋರಾಟಕ್ಕೆ ಸಹಾನುಭೂತಿಯಿಂದ ಸಹಕಾರ ನೀಡಿದೆ. ಅದನ್ನು ಕಾರ್ಮಿಕರು ಗೌರವಿಸುತ್ತೇವೆ. ಹೋರಾಟ ಶಾಂತಿಯುತವಾಗಿ ನಡೆಸುತ್ತೇವೆ ಎಂದರು.
ಘೋಷಣೆಗಳು: ಕಾರ್ಖಾನೆಯ ಪ್ರವೇಶದ್ವಾರದಿಂದ ಘೋಷಣೆಗಳನ್ನು ಕೂಗುತ್ತಾ ಅಂಬೇಡ್ಕರ್ ವೃತ್ತದವರೆಗೆ ಸಾಗಿದ ಪ್ರತಿಭಟನಾಕಾರರು ಯಡಿಯೂರಪ್ಪ, ಯಡಿಯೂರಪ್ಪ- ಎಲ್ಲಿದ್ಯಪ್ಪ, ಎಲ್ಲಿದ್ಯಪ್ಪ, ಕಾರ್ಮಿಕರು ಬೀದಿಯಲ್ಲಿ- ಯಡಿಯೂರಪ್ಪ ರೆಸಾರ್ಟ್‌ನಲ್ಲಿ, ಖಾಸಗೀಕರಣ ಬೇಡವೇ ಬೇಡ, ಉಳಿಸಿ- ಉಳಿಸಿ, ವಿಐಎಸ್‌ಎಲ್ ಉಳಿಸಿ, ರಕ್ತವನ್ನು ಕೊಟ್ಟೇವು ವಿಐಎಸ್‌ಎಲ್ ಕೊಡುವುದಿಲ್ಲ ಎಂದು ಘೋಷಣೆಗಳನ್ನು ಕೂಗುತ್ತಾ ಯಡಿಯೂರಪ್ಪ, ಸಂಸದ ರಾಘವೇಂದ್ರ ಮತ್ತು ಕೇಂದ್ರ ಸರ್ಕಾರಕ್ಕೆ ಹಾಗೂ ಮೋದಿಗೆ ಧಿಕ್ಕಾರ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕಾರ್ಮಿಕರ ಸಂಘದ ಪದಾಧಿಕಾರಿಗಳು ಹಾಗೂ ಹಿರಿಯ ಕಾರ್ಮಿಕ ಮುಖಂಡ ಡಿ.ಸಿ. ಮಾಯಣ್ಣ ಸೇರಿದಂತೆ ಅನೇಕರು ಭಾಗವಹಿಸಿ ಅಂಬೇಡ್ಕರ್ ವೃತ್ತದ ಬಳಿ ಒಬ್ಬೊಬ್ಬರೇ ಅರೆ ಬೆತ್ತಲಾಗುತ್ತ ರಸ್ತೆಯಲ್ಲಿ ಕುಳಿತು ಘೋಷಣೆ ಕೂಗಿದರು. ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಭಾಗವಹಿಸಿದ್ದರು. ರಸ್ತೆ ತಡೆಯಿಂದಾಗಿ ಅರ್ಧ ಗಂಟೆ ಕಾಲ ವಾಹನಗಳ ಸಂಚಾರ ವ್ಯತ್ಯಯವಾಯಿತು. ಇದೇ ಸಂದರ್ಭದಲ್ಲಿ ಶವವೊಂದನ್ನು ಹೊತ್ತೂಯ್ಯತ್ತಿದ್ದ ಮುಕ್ತಿ ವಾಹನಕ್ಕೆ ಪ್ರತಿಭಟನಾಕಾರರು ಮುಂದೆ ಹೋಗಲು ಅವಕಾಶ ನೀಡಿದರು. ಪ್ರತಿಭಟನಾ ಸ್ಥಳದಲ್ಲಿ ಪೊಲೀಸ್ ಇಲಾಖೆಯಿಂದ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.