Advertisement

ಉಕ್ಕಿನ ನಗರಿಯಲ್ಲಿ ಪೇಜಾವರ ಸ್ವಾಮೀಜಿ ಹೆಜ್ಜೆ ಗುರುತು

06:09 PM Dec 30, 2019 | Naveen |

ಭದ್ರಾವತಿ: ಭಾನುವಾರ ಹರಿಪಾದ ಸೇರಿದ ಉಡುಪಿಯ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶ್ವ ತೀರ್ಥ ಸ್ವಾಮೀಜಿಯವರು ಭದ್ರಾವತಿ ಕ್ಷೇತ್ರದ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಇಲ್ಲಿನ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಜನರಿಗೆ ಧಾರ್ಮಿಕ ವಿಷಯಗಳನ್ನು ಸಾಮಾಜಿಕ ಕಳಕಳಿಯ ಮೂಲಕ ಹೇಗೆ ಅರ್ಥೈಸಿಕೊಂಡು ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕು ಎಂಬುದರ ಕುರಿತು ಅನೇಕ ಬಾರಿ ಬಂದು ಸಂದೇಶ ನೀಡಿದ್ದನ್ನು ಇಲ್ಲಿನ ಜನತೆ ಸ್ಮರಿಸುತ್ತಾರೆ.

Advertisement

ಶ್ರೀಗಳು 1951-52 ನೇ ಸಾಲಿನಲ್ಲಿ ಇಲ್ಲಿನ ಹಳೇನಗರದಲ್ಲಿ ಕೆ.ಮಹಾಬಲಯ್ಯ ಅವರು ಕಟ್ಟಿಸಿದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಬಂದು ಮಠದ ಉದ್ಘಾಟನೆ ನೆರವೇರಿಸಿ ಜನರನ್ನು ಆಶೀರ್ವದಿಸಿದ್ದರು.

ಆಗಿನಿಂದ ಈ ಮಠಕ್ಕೆ ಅವರು ಅನೇಕ ಬಾರಿ ಬಂದು ಇಲ್ಲಿ ಉಳಿದುಕೊಂಡು ಕೃಷ್ಣನ ಪೂಜೆ ಮಾಡಿ ಜನರನ್ನು ಅನುಗ್ರಹಿಸಿ ಹೋಗುತ್ತಿದ್ದರು.

ದಲಿತ ಕೇರಿಗೆ ಭೇಟಿ: ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆಯ ಬೇಧಭಾವ ನಿವಾರಿಸಿ ಸಮಾಜದ ಮುಖ್ಯ ವಾಹಿನಿಯಲ್ಲಿ ಅವರನ್ನೂ ಸಮಾನವಾಗಿ ಬೆರೆಯುವಂತೆ ಮಾಡಬೇಕೆಂಬ ಉದಾತ್ತ ಚಿಂತನೆ ಹೊಂದಿದ್ದ ಶ್ರೀಗಳು ಭದ್ರಾವತಿ ನಗರಕ್ಕೆ 1990ರ
ದಶಕದಲ್ಲಿ ಭೇಟಿ ನೀಡಿ ಇಲ್ಲಿನ ಸೀಗೆಬಾಗಿ, ಉಜ್ಜನಿಪುರ ಮತ್ತು ಹಳೇನಗರದ ಅಂಬೇಡ್ಕರ್‌ ಕಾಲೋನಿಯಲ್ಲಿರುವ ದಲಿತ ಕೇರಿಗಳಿಗೆ ಬೇಟಿ ನೀಡಿ ಅಲ್ಲಿ ಪಾದಯಾತ್ರೆ ನಡೆಸಿ ದಲಿತರ ಅಭಿಮಾನಕ್ಕೆ ಪಾತ್ರರಾಗಿದ್ದರು ಎಂಬುದನ್ನು ಇಲ್ಲಿನ ಜನ ಅವರನ್ನು ನೆನಪಿಸಿಕೊಳ್ಳುತ್ತಾರೆ.

ದೌರ್ಜನ್ಯಕ್ಕೊಳಗಾದ ಮಹಿಳೆಗೆ ಸಾಂತ್ವನ: 80ರ ದಶಕದ ವೇಳೆ ಭದ್ರಾವತಿಯಲ್ಲಿ ದಲಿತ ಮಹಿಳೆ ಮೇಲೆ ನಡೆದ ದೌರ್ಜನ್ಯದ ಸಂದರ್ಭದಲ್ಲಿ ತಾಲೂಕಿನ ಗುಡ್ಡದ ನೇರಳೆಕೆರೆಗೆ ಶ್ರೀಗಳು ಭೇಟಿ ನೀಡಿ ಅಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯನ್ನು ಭೇಟಿ ಮಾಡಿ ಆಕೆಗೆ ಸಾಂತ್ವನ ಹೇಳಿ ಫಲ ಮಂತ್ರಾಕ್ಷತೆ ನೀಡುವ ಮೂಲಕ ಆಕೆಯಲ್ಲಿ ಆತ್ಮಸ್ಥೈರ್ಯ ತುಂಬಿದ್ದರು.

Advertisement

5ನೇ ಪರ್ಯಾಯಕ್ಕೆ ಆಹ್ವಾನ: ಉಡುಪಿಯ ಅಷ್ಠಮಠದ ಪರ್ಯಾಯ ವ್ಯವಸ್ಥೆಯಲ್ಲಿ 5 ಬಾರಿ ಪರ್ಯಾಯ ಪೀಠ ಅಲಂಕರಿಸಿ ಶ್ರೀಕೃಷ್ಣನನ್ನು ಪೂಜೆ ಮಾಡಿದ ಕೀರ್ತಿ ಹೊಂದಿರುವ ಶ್ರೀಗಳು ತಮ್ಮ 5ನೆ ಬಾರಿಯ ಪರ್ಯಾಯ ಪೀಠಾರೋಹಣಕ್ಕೆ ಮುನ್ನ, ಭಕ್ತರಿಗೆ ಉಡುಪಿಯ ಪರ್ಯಾಯ ಮಹೋತ್ಸವಕ್ಕೆ ಆಗಮಿಸುವಂತೆ ಆಹ್ವಾನ ನೀಡುವ ಸಲುವಾಗಿ ನಗರಕ್ಕೆ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನ ತೀರ್ಥಸ್ವಾಮೀಜಿಗಳೊಂದಿಗೆ ಆಗಮಿಸಿದಾಗ ಅವರಿಗೆ ಹಳೇನಗರದ ಶ್ರೀ ರಾಮೇಶ್ವರ ದೇವಾಲಯದ ಎದುರಿಗಿರುವ ಶ್ರೀ ಶಂಕರಭವನದಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು.

ತಿಮ್ಲಾಪುರದಲ್ಲಿ ದೇವಾಲಯ ಉದ್ಘಾಟನೆ: ತಾಲೂಕಿನ ದೊಡ್ಡಗೊಪ್ಪೇನಹಳ್ಳಿಯ ತಿಮ್ಲಾಪುರದಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಗ್ರಾಮಸ್ಥರು ತಿರುಪತಿಯಿಂದ ತಂದ ಶ್ರೀ ವೆಂಕಟೇಶ್ವರ ದೇವರ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಶ್ರೀಗಳು ಆಗಮಿಸಿ ದೇವಾಲಯ ಉದ್ಘಾಟಿಸಿದ್ದರು.

ಅತಿರುದ್ರ ಮಹಾಯಾಗಕ್ಕೆ ಭೇಟಿ: ಈ ವರ್ಷ ಶ್ರೀಸತ್ಯಸಾಯಿ ಸೇವಾಕೇಂದ್ರದವರು ನ್ಯೂಟೌನ್‌ ನಲ್ಲಿ ಏರ್ಪಡಿಸಿದ್ದ ಅತಿರುದ್ರ ಮಹಾಯಾಗದ ಪೂರ್ಣಾಹುತಿ ವೇಳೆ ಅನಾರೋಗ್ಯದ ನಡುವೆಯೂ ಶ್ರೀಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ
ರೀತಿ ಅನೇಕ ಸಂದರ್ಭಗಳಲ್ಲಿ ಪೇಜಾವರ ಶ್ರೀಗಳು ಭದ್ರಾವತಿ ನಗರಕ್ಕೆ ಭೇಟಿ ನೀಡಿ ಸರ್ವ ಜನಾಂಗಕ್ಕೆ ಉತ್ತಮ ಸಂದೇಶವನ್ನು ನೀಡುವ ಕಾರ್ಯದ ಜೊತೆಗೆ, ಮಠಾಧೀಶರಾಗಿ ಸನ್ಯಾಸ ಧರ್ಮದ ಅನುಷ್ಠಾನ ಮಾಡುತ್ತಲೇ ಸಮಾಜಮುಖೀಯಾಗಿ ಸಾಮಾಜಿಕ ಕಳಕಳಿಯಿಂದ ಹೇಗೆ ಕಾರ್ಯ ನಿರ್ವಹಿಸಬಹುದು ಎಂಬುದನ್ನು ಸ್ವತಃ ಆಚರಿಸಿ ತೋರಿಸಿರುವುದನ್ನು ಇಲ್ಲಿನ ಜನತೆ ನೆನಪಿಸಿಕೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next