ಭದ್ರಾವತಿ: ಗೌರಿ- ಗಣೇಶ ಹಬ್ಬ ಮತ್ತು ಮೊಹರಂ ಹಬ್ಬವನ್ನು ಶಾಂತಿ ಸೌಹಾರ್ದಯುತವಾಗಿ ಆಚರಿಸುವಂತೆ ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ. ಶಾಂತರಾಜು ಹೇಳಿದರು.
ಹಬ್ಬಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಹುತ್ತಾಕಾಲೋನಿ ಒಕ್ಕಲಿಗರ ಸಮುದಾಯ ಭವನದಲ್ಲಿ ಕರೆದಿದ್ದ ಗೌರಿ- ಗಣೇಶ ಹಾಗೂ ಮೊಹರಂ ಹಬ್ಬದ ಪೂರ್ವಭಾವಿ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಏಕಗವಾಕ್ಷಿ ವ್ಯವಸ್ಥೆ: ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವ ಸಮಿತಿಯವರು ಪ್ರತಿಷ್ಠಾಪನೆ ಮತ್ತು ವಿಸರ್ಜನೆಯ ಎರಡೂ ದಿನಾಂಕವನ್ನೂ ಸಹ ಇಲಾಖೆಗೆ ತಿಳಿಸಬೇಕು. ಗಣಪತಿ ಪ್ರತಿಷ್ಠಾಪನೆಗೆ ಅಗತ್ಯವಾದ ಧ್ವನಿವರ್ಧಕ, ವಿದ್ಯುತ್ ಮುಂತಾದವುಗಳ ಕುರಿತ ನೋಂದಣಿ ಅನುಮತಿ ಪಡೆಯಲು ಹಳೇನಗರ ಪೊಲೀಸ್ ಠಾಣೆಯಲ್ಲಿ ಏಕಗವಾಕ್ಷಿ ಕೇಂದ್ರವೊಂದನ್ನು ತೆರೆಯಲಾಗಿದ್ದು ಇಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿ ಅನುಮತಿ ಪಡೆದುಕೊಳ್ಳಬೇಕು ಎಂದರು.
ಸೆ.10 ರಂದು ನಡೆಯುವ ಮೊಹರಂ ಹಬ್ಬವನ್ನು ಸಹ ಶಾಂತಿಯುತವಾಗಿ ಆಚರಿಸಲು ಇಲಾಖೆ ಎಲ್ಲಾ ಸಹಕಾರ ನೀಡಲಿದೆ. ಹಬ್ಬಗಳು ಎಲ್ಲರನ್ನೂ ಒಂದುಗೂಡಿಸುವಂತಿರಬೇಕೇ ಹೊರತು ವಿಂಗಡಣೆ ಮಾಡುವಂತಿರಬಾರದು. ಶಾಂತಿಯುತವಾಗಿ ಹಬ್ಬವನ್ನು ಈವರೆಗೆ ಆಚರಿಸಿಕೊಂಡು ಬಂದಿರುವ ಆಚರಣಾ ಪದ್ಧತಿ ಹೊರತು ಪಡಿಸಿದರೆ ಹೊಸದಾಗಿ ಯಾವುದೇ ಆಚರಣೆಗಳಿಗೆ ಅವಕಾಶ ವಿಲ್ಲ. ಶಾಂತಿ- ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿ ಎಲ್ಲರೂ ಸೌಹಾರ್ದ ಭಾವನೆಯಿಂದ ಹಬ್ಬವನ್ನು ಆಚರಿಸಬೇಕು. ಇದಕ್ಕೆ ಇಲಾಖೆಯ ಸಂಪೂರ್ಣ ಸಹಕಾರವಿದೆ ಎಂದರು.
ಬೈಕ್ ರ್ಯಾಲಿ- ಡಿಜೆ ಸೌಂಡ್‌ಗೆ ಅವಕಾಶವಿಲ್ಲ: ಡಿವೈಎಸ್‌ಪಿ ಓಂಕಾರ ನಾಯ್ಕ ಮಾತನಾಡಿ, ಗಣೇಶನ ಮೆರವಣಿಗೆಯಲ್ಲಿ ಯಾವುದೇ ಬೈಕ್ ರ್ಯಾಲಿ, ಡಿಜೆ ಸೌಂಡ್‌ಗಳಿಗೆ ಅವಕಾಶವಿಲ್ಲ. ಪಾನಮತ್ತರಾಗಿ ವಿಸರ್ಜನೆಯಲ್ಲಿ ಯಾರೂ ಪಾಲ್ಗೊಳ್ಳುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಗಣಪತಿ ಪ್ರತಿಷ್ಠಾಪಿಸುವ ಸಮಿತಿಗಳು ಏಕಗವಾಕ್ಷಿ ಕೇಂದ್ರಕ್ಕೆ ಬಂದು 20 ಅಂಶಗಳುಳ್ಳ ಸೂಚನಾಪತ್ರ ಪಡೆದುಕೊಳ್ಳಬೇಕು ಎಂದರು.
ಪ್ಲಾಸ್ಟಿಕ್ ಬ್ಯಾನರ್ ಬಳಸಬೇಡಿ: ಪೌರಾಯುಕ್ತ ಮನೋಹರ್ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು ಶುಚಿತ್ವ ಕಾಪಾಡಿಕೊಳ್ಳಬೇಕು. ಸರ್ಕಾರದ ಆದೇಶದನ್ವಯ ಪ್ಲಾಸ್ಟಿಕ್ ಬ್ಯಾನರ್- ಕಟೌಟ್ ಸೇರಿದಂತೆ ಎಲ್ಲಾ ರೀತಿಯ ಪ್ಲಾಸ್ಟಿಕ್ ಬಳಕೆ ನಿಷೇಧವಿದ್ದು ಯಾರೂ ಬಳಸಬಾರದು. ರಾಸಾಯನಿಕ ಬಣ್ಣ ಲೇಪಿಸಿ ಗಣಪತಿಯನ್ನು ಪ್ರತಿಷ್ಠಾಪಿಸದೆ ನೈಸರ್ಗಿಕವಾಗಿ ತಯಾರಿಸಿದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು ಎಂದರು.
ಭಕ್ತಿಪೂರ್ವಕವಾಗಿ ಆಚರಿಸಿ: ವಿಎಚ್ಪಿ ಮುಖಂಡ ಹಾ| ರಾಮಪ್ಪ ಬ್ಯಾಟ್ ಮಾಡುವ, ಸಿಗರೇಟು ಸೇದುವ, ನೃತ್ಯ ಮಾಡುವಂತ ಗಣಪತಿಯನ್ನು ಪ್ರತಿಷ್ಠಾಪಿಸದೆ ಭಕ್ತಿ ಬರುವ ರೂಪದಲ್ಲಿ ಮೂರ್ತಿಗಳ ಪ್ರತಿಷ್ಠಾಪನೆಯಾಗಲಿ ಎಂದು ಮನವಿ ಮಾಡಿದರು.
ನಗರ ವೃತ್ತ ನಿರೀಕ್ಷಕ ನಂಜಪ್ಪ, ತಹಶೀಲ್ದಾರ್ ಸೋಮಶೇಖರ್, ಮೆಸ್ಕಾಂ ಇಂಜಿನಿಯರ್ ಸುರೇಶ್ ಇದ್ದರು. ಸಭೆಯಲ್ಲಿ ಮುಖಂಡರಾದ ಹಿಂದೂ ಮಹಾಸಭಾ ಹಾಗೂ ಹಿಂದೂ ರಾಷ್ಟ್ರ ಸೇನಾ ಮುಖಂಡ ವಿ. ಕದಿರೇಶ್, ಕೃಷ್ಣೇಗೌಡ, ವೆಂಕಟೇಶ್, ಮಂಗೋಟೆ ರುದ್ರೇಶ್, ಸಿ.ಎಂ. ಖಾದರ್, ಅಮೀರ್‌ಜಾನ್ ಮತ್ತಿತರರು ಇದ್ದರು.