ಭದ್ರಾವತಿ: ಸರಕಾರಿ ಸ್ವಾಮ್ಯದ ಎಂಪಿಎಂ ಮಂಡಳಿಯು ಕಾರ್ಖಾನೆಯನ್ನು ಸಮಾಪ್ತಿಗೊಳಿಸುವ ಕಾರ್ಯಾಚರಣೆಗೆ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ಶುಕ್ರವಾರ ಕಾರ್ಖಾನೆ ಮುಂಭಾಗ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘದ ನೇತೃತ್ವದಲ್ಲಿ ಕಾರ್ಮಿಕರು ಧರಣಿ ಸತ್ಯಾಗ್ರಹ ನಡೆಸಿದರು.
ನಂತರ ಧರಣಿಯ ಅಂಗವಾಗಿ ಪ್ರತಿಭಟನಾನಿರತರು ಕಾರ್ಖಾನೆಯ ಪ್ರವೇಶದ್ವಾರದಿಂದ ಹಳೇನಗರದ ರಂಗಪ್ಪ ವೃತ್ತದವರೆಗೆ ಸಾಗಿ ಬಂದು ರಂಗಪ್ಪ ವೃತ್ತದ ಬಳಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿದರು. ಅನಂತರ ಸಮೀಪದಲ್ಲಿರುವ ಮಿನಿವಿಧಾನ ಸೌಧಕ್ಕೆ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಐಎಸ್‌ಎಲ್ ಕಾರ್ಮಿಕ ಸಂಘದ ಕಾರ್ಯದರ್ಶಿ ಬಸಂತ್ ಕುಮಾರ್, ಮೈಸೂರು ಅರಸರ ಹಾಗೂ ಅಂದಿನ ದಿವಾನರ ದೂರದೃಷ್ಟಿಯ ಫಲವಾಗಿ ಜನ್ಮ ತಳೆದ ಎಂಪಿಎಂ ಕಾರ್ಖಾನೆಯನ್ನು ಉಳಿಸಿ ಬೆಳೆಲು ಇನ್ನೂ ಸಹ ಅವಕಾಶವಿದೆ. ಕ್ಷೇತ್ರದ ಪ್ರತಿಯೊಬ್ಬ ನಾಗರಿಕರು ಈ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಎರಡೂ ಕಾರ್ಖಾನೆಗಳನ್ನು ಉಳಿಸಬೇಕಿದೆ. ಭದ್ರಾವತಿಯ ಭವಿಷ್ಯ ಈ ಕಾರ್ಖಾನಗಳನ್ನೇ ಅವಂಲಂಬಿಸಿದೆ ಎಂದು ಮರೆಯಬಾರದು. ಎಂಪಿಎಂ ಕಾರ್ಮಿಕರ ಹೋರಾಟಕ್ಕೆ ವಿಐಎಸ್‌ಎಲ್ ಕಾರ್ಮಿಕ ಸಂಘ ಸದಾ ಸ್ಪಂದಿಸುತ್ತದೆ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ಶ್ರೀಹರ್ಷ ಮಾತನಾಡಿ, ಎಂಪಿಎಂ- ವಿಐಎಸ್‌ಎಲ್ ಕಾರ್ಖಾನೆ ಉಳಿದು ಬೆಳೆಯಬೇಕೆಂಬ ಹಂಬಲ ಕ್ಷೇತ್ರದ ಪ್ರತಿಯೊಬ್ಬ ನಾಗರಿಕರಲ್ಲಿ ಇದೆ. ಆದರೆ ಕಾರ್ಖಾನೆಯ ಉಳಿವಿಗೆ ಹೋರಾಟ ನಡೆಸುವ ಕಾರ್ಮಿಕ ಮುಖಂಡರು ಹೋರಾಟದ ವಿಷಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡದೆ ನಾಯಕರಿಗೆ ಹೆಚ್ಚಿನ ಮಹತ್ವ ನೀಡುತ್ತಾ ಬಂದ ಪರಿಣಾಮ ಹೋರಾಟ ದುರ್ಬಲವಾಗಿದೆ. ಈ ಕಾರ್ಖಾನೆಗಳ ಉಳಿವಿನ ಮೇಲೆ ಭದ್ರಾವತಿ ಭವಿಷ್ಯ ಉಳಿದಿದೆ ಎಂಬುದನ್ನು ಅರಿತು ಹೋರಾಟಗಾರರು ಹೋರಾಟಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.
ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್. ರಾಜು ಮಾತನಾಡಿ, ಎಂಪಿಎಂ ಕಾರ್ಖಾನೆ ಉಳಿವಿಗೆ ಇಲ್ಲಿನ ಜನಪ್ರತಿನಿಧಿಗಳು ಸರಿಯಾದ ರೀತಿ ತಮ್ಮ ಜವಾಬ್ದಾರಿ ನಿರ್ವಹಿಸದಿರುವ ಕಾರಣ ಈಗ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಗಳಾಗುತ್ತಿರುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿ ಭದ್ರಾವತಿಯ ಎರಡೂ ಕಾರ್ಖಾನೆಗಳನ್ನು ಉಳಿಸಬೇಕು. ಕಾರ್ಮಿಕರ ಸಂಘದ ನಾಯಕರು ರಾಜಿ ಮಾಡಿಕೊಳ್ಳುವ ಮನಸ್ಥಿತಿಯಿಂದ ಹೊರಬಂದು ಹೋರಾಟವನ್ನು ಸರಿಯಾದ ದಿಕ್ಕಿನಲ್ಲಿ ನಡೆಸಬೇಕು ಎಂದರು.
ಕಾರ್ಖಾನೆಯ ಕಾರ್ಮಿಕ ಸಂಘದ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಎಂಪಿಎಂ ಕಾರ್ಖಾನೆಯ ಉಳಿವಿಗೆ ಕಾರ್ಮಿಕ ಸಂಘವು ಎಂದಿಗೂ ರಾಜಿ ಮನಸ್ಥಿತಿ ಪ್ರದರ್ಶಿಸಿಲ್ಲ. ಕಾರ್ಖಾನೆ ಉಳಿವಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿದೆ ಎಂದರು.
ಕಾರ್ಮಿಕ ಸಂಘದ ಮುಖಂಡ ತಿಮ್ಮಪ್ಪ ಮಾತನಾಡಿ, ಕಾರ್ಖಾನೆಯಲ್ಲಿ ಸ್ವಯಂ ನಿವೃತ್ತಿ ಪಡೆಯದೆ ಸುಮಾರು 226 ಅಧಿಕಾರಿ ಹಾಗೂ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ನಡುವೆ ರಾಜ್ಯ ಸರಕಾರದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಗಳು ಜೂ. 28ರಂದು ಕಾರ್ಖಾನೆ ಮುಚ್ಚಲು ಆಡಳಿತ ಮಂಡಳಿಗೆ ಆದೇಶ ನೀಡಿರುವುದನ್ನು ನೆಪ ಮಾಡಿಕೊಂಡು ಆಡಳಿತ ಮಂಡಳಿ ಹುನ್ನಾರ ನಡೆಸುತ್ತಿದೆ. ಸಚಿವ ಸಂಪುಟದ ಆದೇಶವಿಲ್ಲದೆ ಕೇವಲ ಕಾರ್ಮಿಕ ಕಾರ್ಯದರ್ಶಿಗಳ ಅನುಮತಿ ಮೇರೆಗೆ ಕಾರ್ಖಾನೆ ಮುಚ್ಚಲು ಆಡಳಿತ ವರ್ಗ ಹುನ್ನಾರ ನಡೆಸುತ್ತಿರುವುದು ಖಂಡನೀಯ ಎಂದರು.
ಕಾನೂನುಬಾಹಿರ ಕ್ರಮದಿಂದ ದೀರ್ಘಾವಧಿ ಸೇವೆ ಹಿಂದಿರುವ ಸುಮಾರು 226 ಕಾರ್ಮಿಕರು ತೊಂದರೆ ಅನುಭವಿಸುವಂತಾಗಿದೆ. ಅದ್ದರಿಂದ ಕೂಡಲೇ ಕಾರ್ಮಿಕ ಇಲಾಖೆ ಕಾರ್ಯದರ್ಶಿಗಳು ಕಾರ್ಖಾನೆ ಮುಚ್ಚಲು ಹೊರಡಿಸಿರುವ ಆದೇಶವನ್ನು ರದ್ದುಪಡಿಸಿ ಕಾರ್ಖಾನೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಿದರು.