Advertisement

ಸಂಭ್ರಮದ ನಂಜುಂಡೇಶ್ವರ ಜಾತ್ರೆ

01:49 PM Apr 18, 2019 | Naveen |

ಭದ್ರಾವತಿ: ತಾಲೂಕಿನ ನಾಗತಿಬೆಳಗುಲು ಗ್ರಾಮದ ಶ್ರೀ ನಂಜುಂಡೇಶ್ವರ ರಥೋತ್ಸವದ ಜಾತ್ರಾ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ನೆರವೇರಿತು.

Advertisement

ಸೋಮವಾರದಿಂದ ಜಾತ್ರೆಯ ಪೂಜಾ ವಿಧಿ-ವಿಧಾನಗಳು ಆರಂಭಗೊಂಡಿದ್ದು, ಬುಧವಾರ ಬೆಳಗ್ಗೆ ಶ್ರೀ ನಂಜುಂಡೇಶ್ವರ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ದೇವಾಲಯದ ಪ್ರಾಕಾರದಲ್ಲಿ ಹಾಗೂ ಗ್ರಾಮದಲ್ಲಿ ಉತ್ಸವ ನಡೆಸಲಾಯಿತು.

ಕೆಂಡಾರ್ಚನೆ: ಪಲ್ಲಕ್ಕಿ ಉತ್ಸವ ದೇವಾಲಯದ ಹೊರಾವರಣಕ್ಕೆ ಬಂದು ಅಲ್ಲಿ ನಿರ್ಮಿಸಲಾಗಿದ್ದ ಕೆಂಡದ ಹೊಂಡದಲ್ಲಿ ಕೆಲವು ಬಾರಿ ಹಾಯ್ದು ನಂತರ ವಿವಿಧ ವರ್ಣಗಳ ಬಾವುಟದಿಂದ ಅಲಂಕೃತಗೊಂಡ ರಥಕ್ಕೆ ಪೂಜೆ ನೆರವೇರಿಸಿ, ರಥದಲ್ಲಿ ದೇವರ ವಸ್ತ್ರ, ಪೂಜಾ ಪರಿಕರಗಳನ್ನಿರಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ರಥದ ಕಳಶಕ್ಕೆ ಬಾಳೆಹಣ್ಣು,
ಉತ್ತುತ್ತಿ, ಕರಿಕಾಳು ಮೆಣಸು,ಮಂಡಕ್ಕೆಯನ್ನು ಎಸೆಯುವ ಮೂಲಕ ಹರಕೆ ತೀರಿಸಿದರು. ಅನೇಕ ಭಕ್ತರು ಒಣಕೊಬ್ಬರಿಯನ್ನು ಕೆಂಡದ ಹೊಂಡಕ್ಕೆ ಹಾಕುವ ಮೂಲಕ ಹರಕೆ ತೀರಿಸಿದರು.

ಕೆಂಡದ ಹೊಂಡದಲ್ಲಿ ಬೆಂದ ಕೊಬ್ಬರಿ ಕಾಳು ಮೆಣಸನ್ನು ಹಚ್ಚಿಕೊಂಡರೆ ಚರ್ಮರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಮೇರೆಗೆ ಅನೇಕರು ಕೆಂಡದ ಹೊಂಡದಲ್ಲಿ ಸುಟ್ಟು ಕರಕಲಾಗಿದ್ದ
ಕೊಬ್ಬರಿ, ಕಾಳುಮೆಣಸನ್ನು ಆರಿಸಿಕೊಳ್ಳುತ್ತಿದ್ದದ್ದು ಕಂಡುಬಂದಿತು. ದೇವಾಲಯದ ಒಳಗೆ ಶ್ರೀ ನಂಜುಂಡೇಶ್ವರ ಸ್ವಾಮಿಗೆ ರಜತ ಮುಖವಾಡ ಧರಿಸಿ ವಿಶೇಷ ಅಲಂಕಾರ ಮಾಡಲಾಗಿತ್ತು.

ದೇವಾಲಯದ ಒಳಾವರಣದಲ್ಲಿರುವ ಪರಿವಾರ ದೇವತೆಗಳಾದ ಗಂಗಾಂಬಿಕೆ ಮತ್ತು ಪಾರ್ವತಿ ಅಮ್ಮನವರಿಗೂ ವಿಶೇಷ ಅಲಂಕಾರ, ಪೂಜೆ ನಡೆಸಲಾಯಿತು.

Advertisement

ಗುಗ್ಗುಳ ಸೇವೆ: ಮೂಲ ದೇವರ ದರ್ಶನದ ನಂತರ ಪಾರ್ವತಿ ಅಮ್ಮನ ದರ್ಶನ ಪಡೆದ ಭಕ್ತಾದಿಗಳು ಕೆಂಡಾರ್ಚನೆಯ ಅಗ್ನಿಯಿಂದ ತಂದ ಬೆಂಕಿಯನ್ನು ಇರಿಸಿದ್ದ ಗುಗ್ಗುಳದ ಅಡಿಯಲ್ಲಿ ಸಾಗುವ ಮೂಲಕ ಕೃತಾರ್ಥಭಾವ ಅನುಭವಿಸಿದರು.

ಭದ್ರಾವತಿ, ಹೊಳೆಹೊನ್ನೂರು, ಶಿವಮೊಗ್ಗ, ಚೆನ್ನಗಿರಿ ಸೇರಿದಂತೆ ಸುತ್ತಮುತ್ತಲ ನೂರಾರು ಗ್ರಾಮಗಳಿಂದ ಭಕ್ತಾದಿಗಳು ಬೆಳಗಿನಿಂದ ಸಾವಿರಾರು ಸಂಖ್ಯೆಯಲ್ಲಿ ದೇವಾಲಯಕ್ಕೆ ಕುಟುಂಬ ಸಮೇತ
ಆಗಮಿಸಿ ಸರತಿಯ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಅನ್ನದಾಸೋಹ: ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು.

ಬಿಸಿಲ ತಾಪ: ಹೊಳೆಹೊನ್ನೂರು- ಭದ್ರಾವತಿ ನಡುವಿನ ಹೆದ್ದಾರಿ ಪಕ್ಕದಲ್ಲಿರುವ ಈ ದೇವಾಲಯದ ಸುತ್ತಮುತ್ತ ಕೆರೆ, ಗದ್ದೆ, ತೋಟ, ಮರಗಿಡಗಳನ್ನು ಹೊಂದಿರುವುದರಿಂದ ಇದ್ದುದರಲ್ಲಿ ಬಿಸಿಲಿನ ಬೇಗೆ ಸ್ವಲ್ಪ ಕಡಿಮೆ ಮಾಡಿತಾದರೂ ತೀವ್ರವಾಗಿದ್ದ ಬಿಸಿಲಿನ
ಝಳದಿಂದ ಬಾಯಾರಿಕೆ ದಾಹ ಹೆಚ್ಚಿದ್ದರಿಂದ ಅಲ್ಲಲ್ಲಿ ಭಕ್ತಾದಿಗಳಿಗೆ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.

ದೇವಾಲಯದ ಸಮಿತಿ ಅಧ್ಯಕ್ಷ ನಾಗೇಂದ್ರಪ್ಪ, ಕಾರ್ಯದರ್ಶಿ ನಂಜುಂಡೇ ಗೌಡ, ಖಜಾಂಚಿ ಜಯಕುಮಾರ್‌, ನಿರ್ದೇಶಕ ಹಾಲೇಶ್‌ ನಾಯಕ ಮತ್ತಿತರರು ಜಾತ್ರಾ ಮಹೋತ್ಸವಕ್ಕೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next