Advertisement

ಲೋಕಾ ಚುನಾವಣೆ ಆಯ್ತು; ಇನ್ನು ಲೋಕಲ್ ಫೈಟ್!

02:54 PM May 26, 2019 | Team Udayavani |

ಭದ್ರಾವತಿ: ಒಂದೆಡೆ ಲೋಕಸಭೆ ಚುನಾವಣೆ ಫಲಿತಾಂಶದಿಂದ ಬಿಜೆಪಿ ಮುಗಿಲೆತ್ತರಕ್ಕೆ ಜಿಗಿದು ಹಾರಾಡುತ್ತಿದ್ದರೆ ಮತ್ತೂಂದೆಡೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ದೇಶಕ್ಕಾಗಿ ಬಲಿದಾನಗೈದ ಪಕ್ಷ ಎಂದು ಬೀಗುತ್ತಿದ್ದ ಕಾಂಗ್ರೆಸ್‌ ಯಾರೂ ನಿರೀಕ್ಷಿಸದಷ್ಟರ ಮಟ್ಟಿಗೆ ಸೋತು ಸುಣ್ಣವಾಗಿದೆ. ಆ ಪಕ್ಷದವರು ಪಾತಾಳಕ್ಕಿಳಿದು ಹೋಗಿದ್ದಾರೆ. ಮತ್ತೂಂದೆಡೆ ಕರ್ನಾಟಕದ ಏಕೈಕ ಸ್ಥಳೀಯ ಪಕ್ಷವೆಂದು ಬೀಗುತ್ತಾ ಘಟಬಂಧನದ ರೂವಾರಿ ತಾನಾಗಿ ಕೇಂದ್ರದ ಸರ್ಕಾರ ರಚನೆಯಲ್ಲಿ ತನಗೆ ಪ್ರಾಧಾನ್ಯತೆ ದೊರಕಬಹುದೆಂಬ ಕನಸು ಕಾಣುತ್ತಿದ್ದ ಜೆಡಿಎಸ್‌ ಕೇವಲ ಒಂದು ಸ್ಥಾನವನ್ನು ಪಡೆದಿರುವುದರಿಂದ ಆ ಪಕ್ಷದವರು ಮುಂದೇನು ಮಾಡುವುದು ಎಂದು ತೋರದೆ ಕಂಗಾಲಾಗಿ ಕುಳಿತು ಯೋಚಿಸುವಂತಾಗಿದೆ.

Advertisement

ಇದೆಲ್ಲಾ ರಾಜ್ಯದಲ್ಲಿ ಆ ಪಕ್ಷಗಳ ಸ್ಥಿತಿ-ಗತಿ. ಆದರೆ ಭದ್ರಾವತಿ ರಾಜಕಾರಣಕ್ಕೆ ಬಂದರೆ ಇಲ್ಲಿನ ಲೆಕ್ಕಾಚಾರವೇ ಬೇರೆಯಾಗುತ್ತದೆ. ಇಲ್ಲಿ ಪಕ್ಷಗಳು ನೆಪ ಮಾತ್ರಕ್ಕೆ. ಜಾತಿ ಮತ್ತು ವ್ಯಕ್ತಿ ಆರಾಧನೆ ಆಧಾರದ ಗೋಸಂಬಿ ರಾಜಕಾರಣಕ್ಕೆ ಹೆಸರಾಗಿರುವ ಇಲ್ಲಿನ ರಾಜಕಾರಣದಲ್ಲಿ ಯಾವುದೂ ಊಹೆಗೆ ನಿಲುಕುವುದಿಲ್ಲ.

ಈಗ ಲೋಕಸಭೆ ಚುನಾವಣೆ ಮುಗಿದಿದೆ ಸ್ಥಳೀಯವಾಗಿ ನಗರಸಭೆ ಚುನಾವಣೆ ಹತ್ತಿರಕ್ಕೆ ಬರುತ್ತಿದೆ. ಈ ನಗರಸಭೆ ಚುನಾವಣೆಯ ಮೇಲೆ ಲೋಕಸಭೆ ಚುನಾವಣೆಯ ಫಲಿತಾಂಶ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಮತ್ತು ಇದನ್ನು ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಯಾವ ರೀತಿ ಬಳಸಿಕೊಳ್ಳುತ್ತವೆ ಕಾದು ನೋಡಬೇಕಿದೆ.

ಹಾಲಿ-ಮಾಜಿ ಸ್ನೇಹ ಮುಂದುವರಿಯುವುದೇ?
ಈ ಬಾರಿಯ ಲೋಕಸಭಾ ಚುನಾವಣೆ ಇಲ್ಲಿನ ಎರಡು ರಾಜಕೀಯ ಧ್ರುವಗಳಾದ ಶಾಸಕ ಬಿ.ಕೆ. ಸಂಗಮೇಶ್‌ ಮತ್ತು ಮಾಜಿ ಶಾಸಕ ಅಪ್ಪಾಜಿಯನ್ನು ಲೋಕಸಭೆ ಚುನಾವಣೆಗಾಗಿ ಒಗ್ಗೂಡಿಸುವಲ್ಲಿ ಯಶಸ್ವಿಯಾದದ್ದು ಒಂದು ವಿಶೇಷ ಎನ್ನಬಹುದಾದರೂ ಆ ಬೆಸುಗೆ ಕೇವಲ ಬಲವಂತದ ಮಾಘಸ್ನಾನದಂತೆ. ತಾತ್ಕಾಲಿಕ ಬೆಸುಗೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕಳೆದ ಬಾರಿ ಶಾಸಕರಾಗಿದ್ದ ಅಪ್ಪಾಜಿ ಗೌಡರ ಕಾಲದಲ್ಲಿ ನಗರಸಭೆ ಆಡಳಿತದ ಚುಕ್ಕಾಣಿ ಅಪ್ಪಾಜಿ ಗೌಡರ ಬೆಂಬಲಿಗರ ತೆಕ್ಕೆಗೆ ಬೀಳುವ ಮೂಲಕ ಅಪ್ಪಾಜಿ ಗೌಡರು ಹಿಡಿತ ಸಾಧಿಸಿದ್ದರು. ಈ ಬಾರಿ ಬಿ.ಕೆ. ಸಂಗಮೇಶ್ವರ್‌ ಶಾಸಕರಾಗಿದ್ದಾರೆ. ಕ್ಷೇತ್ರದ ಹಿತರಕ್ಷಣೆಗೆ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳ ಉಳಿವಿಗೆ ಹಾಲಿ- ಮಾಜಿ ಶಾಸಕರು ಒಂದಾದರೆ ನಿರೀಕ್ಷತ ಯಶಸ್ಸು ಸಾಧ್ಯ ಎಂಬ ನಾಗರಿಕರ ಅಭಿಪ್ರಾಯಕ್ಕೆ ಎಂದೂ ಮಣಿಯದೆ ಒಂದಾಗದಿದ್ದ ಇಲ್ಲಿನ ಹಾಲಿ- ಮಾಜಿ ಶಾಸಕರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದ ಹೊಟೇಲ್ನಲ್ಲಿ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಕೈ- ಕೈ ಹಿಡಿದು ಒಂದಾದದ್ದು ಈ ಬಾರಿಯ ವಿಶೇಷ. ಈಗ ಲೋಕಸಭೆ ಚುನಾವಣೆ ಮುಗಿದಿದೆ. ಫಲಿತಾಂಶ ಸಹ ಇಬ್ಬರಿಗೂ ಕೈಕೊಟ್ಟಿದೆ. ಹಾಗಾಗಿ ಇಲ್ಲಿನ ಹಾಲಿ-ಮಾಜಿ ಶಾಸಕರಾದ ಸಂಗಮೇಶ್‌ ಮತ್ತು ಅಪ್ಪಾಜಿ ಚುನಾವಣೆ ವೇಳೆ ಹಿಡಿದುಕೊಂಡ ಕೈ-ಕೈ ಹಾಗೇ ಮುಂದುವರಿಯುತ್ತದೆಯೋ ಅಥವಾ ತಾತ್ಕಾಲಿಕ ಜೋಡಣೆಯಾಗಿ ಕೈ ಬಿಡುತ್ತದೆಯೋ ಎಂಬ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಬರಲಿರುವ ನಗರಸಭೆ ಚುನಾವಣೆ ಉತ್ತರಿಸುತ್ತದೆ.

Advertisement

ಬಿಜೆಪಿ ಚಿತ್ತ ನಗರಸಭೆ ಚುನಾವಣೆಯತ್ತ
ರಾಜ್ಯದೆಲ್ಲೆಡೆ ಬಿಜೆಪಿ ಹೋರಾಟ- ಹಾರಾಟ ಎರಡರಲ್ಲೂ ಮುಂದಿದ್ದರೆ ಭದ್ರಾವತಿಯಲ್ಲಿ ಮಾತ್ರ ಅದು ಲೋಕಸಭೆ ಚುನಾವಣೆಗೆ ಮಾತ್ರ ಸೀಮಿತವಾಗಿ ಉಳಿದಿತ್ತು. ವಿಧಾನಸಭೆ ಮತ್ತು ನಗರಸಭೆ ಚುನಾವಣೆಯಲ್ಲಿ ಆಪಕ್ಷ ಮಕಾಡೆ ಮಲಗುವುದು ಅದಕ್ಕೆ ಅಭ್ಯಾಸವಾಗಿ ಹೋಗಿತ್ತು. ಆದರೆ ಈ ಬಾರಿ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ರಾಜ್ಯದ ಜನತೆ ಕಾಂಗ್ರೆಸ್‌ ಪಕ್ಷವನ್ನು ಸಾರಾಸಗಟಾಗಿ ತಿರಸ್ಕರಿಸಿರುವುದರಿಂದ ಸ್ಥಳೀಯವಾಗಿ ನಗರಸಭೆ ಚುನಾವಣೆಯಲ್ಲಿ ಜನತೆ ಬಿಜೆಪಿಗೆ ಬೆಂಬಲ ನೀಡಿ ಆಶೀರ್ವದಿಸುವರೆಂಬ ನಂಬಿಕೆ ಇಲ್ಲಿನ ಆ ಪಕ್ಷದ ನಾಯಕರಲ್ಲಿ ಇದೆ. ನಗರಸಭೆ ಅಧಿಕಾರದ ಚುಕ್ಕಾಣಿ ಸಿಗಬಹುದೇನೋ ಎಂಬ ಆಶಾಭಾವನೆ ಚಿಗುರೊಡೆಯುವಂತೆ ಮಾಡಿದೆ. ಬಿಜೆಪಿಯಲ್ಲಿದ್ದರೂ ಅಪ್ಪ- ಅಣ್ಣನ ತೆಕ್ಕೆಯೊಳಗೆ ಸೇರಿ ರಾಜಕಾರಣ ಮಾಡುವವರಿಗೆ ಟಿಕೆಟ್ ನೀಡದೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಟಿಕೆಟ್ ನೀಡಿದರೆ ಮತ್ತು ಒಳಜಗಳ ಮರೆತು ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಿದರೆ ಈ ಬಾರಿ ನಗರಸಭೆ ಚುಕ್ಕಾಣಿ ಬಿಜೆಪಿಗೆ ದಕ್ಕುವುದರಲ್ಲಿ ಸಂದೇಹವಿಲ್ಲ ಎಂಬುದು ಆ ಪಕ್ಷದ ಅಭಿಮಾನಿಗಳ ಮಾತು. ಸದ್ಯಕ್ಕೆ ವಾರ್ಡ್‌ ಮೀಸಲಾತಿ ಕುರಿತಂತೆ ಒಬ್ಬರು ರಾಜ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿರುವುದರಿಂದ ಇಲ್ಲಿನ ನಗರಸಭೆ ಚುನಾವಣೆ ದಿನಾಂಕ ನಿಗದಿಯಾಗಿಲ್ಲವಾದ ಕಾರಣ ಎಲ್ಲರಿಗೂ ಸ್ವಲ್ಪ ಕಾಲಾವಕಾಶ ಸಿಕ್ಕಿದೆ. ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಂಡು ಮುಂದೆ ನಗರಸಭೆ ಅಧಿಕಾರದ ಚುಕ್ಕಾಣಿ ಯಾರು ಹಿಡಿಯುತ್ತಾರೋ ಕಾದು ನೋಡಬೇಕಿದೆ.

ಕೆ.ಎಸ್‌.ಸುಧೀಂದ್ರ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next