Advertisement

ಮದುವೆ ಕೇವಲ ಆಡಂಬರವಲ್ಲ: ಚೌಕಿಮಠ ಶ್ರೀ

04:04 PM May 20, 2019 | Team Udayavani |

ಭದ್ರಾವತಿ: ಭಗವಂತ ಕೊಟ್ಟಿರುವ ಬದುಕನ್ನು ಹಾಳು ಮಾಡಿಕೊಳ್ಳದೆ ಸಮಾಜಕ್ಕೆ ಉಪಯೋಗವಾಗುವ ರೀತಿ ಮಾದರಿಯಾಗಿ ಬದುಕಬೇಕು ಎಂದು ಹಾರ್ನಹಳ್ಳಿ ಚೌಕಿಮಠದ ಶ್ರೀ ನೀಲಕಂಠ ಮಹಾಸ್ವಾಮಿ ಹೇಳಿದರು.

Advertisement

ಭಾನುವಾರ ಬಿ.ಎಚ್.ರಸ್ತೆಯ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್‌, ವಿಶ್ವ ಭಾರತಿ ವಿಶ್ವಸ್ಥ ಮಂಡಳಿ, ಕಾಲಭೈರವ ಟ್ರಸ್ಟ್‌, ಬಸವೇಶ್ವರ ಧರ್ಮ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 37ನೇ ವರ್ಷದ 10 ಜೊತೆ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.

ಮದುವೆ ಎಂಬುದು ಗದ್ದಲ, ಊಟ, ತಿಂಡಿ ಇವುಗಳಿಗೆ ಸೀಮಿತವಾಗಬಾರದು. ನೂತನ ವಧು-ವರರು ಸಂಸಾರ ಎಂಬುದರ ಅರ್ಥ ಅರಿತು ಪರಸ್ಪರ ಅನ್ಯೋನ್ಯತೆಯಿಂದ ಬಾಳುವುದರ ಜೊತೆಗೆ ಜೀವನದಲ್ಲಿ ಪರಿಶ್ರಮದಿಂದ ದುಡಿದು, ದುಡಿದದ್ದರಲ್ಲಿ ಒಂದುಭಾಗವನ್ನು ಸಮಾಜದ ಕಾರ್ಯಗಳಿಗೆ ವಿನಿಯೋಗಿಸುವ ಮೂಲಕ ಸಮಾಜದ ಋಣ ತೀರಿಸಬೇಕು. ಮಕ್ಕಳು ದುಶ್ಚಟಕ್ಕೆ ಬಲಿಯಾಗದಂತೆ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಸರಿಹಾದಿಯಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿವಂತರನ್ನಾಗಿ ರೂಪಿಸಿ ಅವರು ಸಮಾಜಕ್ಕೆ, ಊರಿಗೆ ,ನಾಡಿಗೆ ,ದೇಶಕ್ಕೆ ಉತ್ತಮ ಆಸ್ತಿಗಳಾಗಿ ಬೆಳೆಯುವಂತೆ ಮಾಡುವ ಜವಾಬ್ದಾರಿ ಪೋಷಕರ ಮೇಲಿರುವುದನ್ನು ಮರೆಯಬಾರದು ಎಂದರು.

ಶರಣರ ವಚನಗಳನ್ನು ನಿತ್ಯಮನನ ಮಾಡುತ್ತಿದ್ದರೆ ಅದರಲ್ಲಿನ ಸಂದೇಶಗಳು ಮನದಟ್ಟಾಗುತ್ತವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳಿದಾಗ ಬದುಕು ಸಾರ್ಥಕತೆ ಪಡೆಯುತ್ತದೆ ಎಂದರು.

ಶಾಸಕ ಬಿ.ಕೆ. ಸಂಗಮೇಶ್‌ ಮಾತನಾಡಿ, ವಿಶ್ವ ಹಿಂದೂ ಪರಿಷತ್‌ 37 ವರ್ಷಗಳಿಂದ ಮಾಡಿಕೊಂಡು ಬಂದಿರುವ ಈ ಉಚಿತ ವಿವಾಹ ಕಾರ್ಯ ನಿಜಕ್ಕೂ ಶ್ಲಾಘನೀಯ. ಈ ಕಾರ್ಯಕ್ರಮದಿಂದ ಅನೇಕ ಬಡಜನರ ಮನೆಯ ವಿವಾಹ ಕಾರ್ಯ ಸುಲಲಿತವಾಗುವಂತಾಗಿದೆ. ನೂತನ ವಧು-ವರರು ಸಂತೋಷದಾಯಕವಾದ ಬದುಕನ್ನು ನಡೆಸುವಂತಾಗಲಿ ಎಂದು ಹಾರೈಸಿದರು.

Advertisement

ಮಾಜಿ ಉಪ ಮುಖ್ಯ ಮಂತ್ರಿ ಕೆ.ಎಸ್‌. ಈಶ್ವರಪ್ಪ ನೂತನ ವಧು- ವರರಿಗೆ ಶುಭ ಹಾರೈಸಿದರು.

ಕಾರ್ಯಕ್ರಮವನ್ನು ಶಿವಸುಬ್ರಹ್ಮಣ್ಯ ಸ್ವಾಮಿ ಆಶ್ರಮದ ಮುರುಗೇಶ ಸ್ವಾಮಿ ಉದ್ಘಾಟಿಸಿದರು. ವಿಶ್ವ ಹಿಂದೂ ಪರಿಷತ್‌ ತಾಲೂಕು ಅಧ್ಯಕ್ಷ ಪಿ. ವೆಂಕಟರಮಣ ಶೇಟ್, ಪ್ರಾಂತ ಉಪಾಧ್ಯಕ್ಷ ಹಾ. ರಾಮಪ್ಪ ಜಿಲ್ಲಾಧ್ಯಕ್ಷ ರಮೇಶ್‌ ಬಾಬು, ಕಾಲಭೈರವ ಟಸ್ಟ್‌ ಅಧ್ಯಕ್ಷ ಮಾದೇಗೌಡ, ಪತಂಜಲೀ ಯೋಗ ‌ಸಮಿತಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಅನ್ನಪೂರ್ಣ ಸತೀಶ್‌, ಸುನೀಲ್ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ಅನೇಕರನ್ನು ಸನ್ಮಾನಿಸಲಾಯಿತು. ನೂತನ ವಧು- ವರರು ಶ್ರೀಗಳ ಸಮ್ಮುಖದಲ್ಲಿ ಮಾಂಗಲ್ಯಧಾರಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next