Advertisement

ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯಕ್ಕೆ  ಮಳೆ ಹೊಡೆತ!

07:53 PM Oct 23, 2019 | Naveen |

„ಕೆ.ಎಸ್‌. ಸು ಧೀಂದ್ರ, ಭದ್ರಾವತಿ
ಭದ್ರಾವತಿ: ಇಲ್ಲಿನ ಪುರಾಣ ಮತ್ತು ಇತಿಹಾಸ ಪ್ರಸಿದ್ಧವಾದ ಹೊಯ್ಸಳರ ಕಾಲದ 12-13ನೇ ಶತಮಾನದ ಮಧ್ಯಭಾಗದಲ್ಲಿ ನಿರ್ಮಾಣವಾದ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ಮಳೆಯಿಂದ ತೀವ್ರವಾಗಿ ಸೋರುತ್ತಾ ಶಿಥಿಲಾವಸ್ಥೆಗೆ ಜಾರುತ್ತಿದೆ. ದೇವಾಲಯದ ಒಳಗೆ ಶ್ರೀ ಲಕ್ಷ್ಮೀ ನರಸಿಂಹ, ಶ್ರೀ ಪುರುಷೋತ್ತಮ, ಶ್ರೀ ವೇಣುಗೋಪಾಲ ಸ್ವಾಮಿ ದೇವರ ಶುಕನಾಸಿನಿಗಳಲ್ಲಿ ಮತ್ತು ಮೂರು ಗರ್ಭಗುಡಿ ದ್ವಾರಗಳಲ್ಲಿ ಹಾಗೂ ನವರಂಗ, ಹುಂಡಿ ಡಬ್ಬದ ಮೇಲೆ ಸಹ ಮಳೆನೀರು ಸೋರುತ್ತಿರುವುದರ ಜೊತೆಗೆ ವಿದ್ಯುತ್‌ ಸ್ವಿಚ್‌ ಬೋರ್ಡ್‌ಗಳ ಮೇಲೆ ಸಹ ಸೋರುತ್ತಿದೆ.

Advertisement

ಕರಗುತ್ತಿರುವ ಮಣ್ಣಿನ ಗೋಡೆ: ದೇವಾಲಯದ ಸಹಾಯಕ ಅರ್ಚಕ ಶ್ರೀನಿವಾಸನ್‌ ಅವರು ಹೇಳುವಂತೆ ದೇವಾಲಯದ ಮೂರು ಆವರಣದ ಗೋಡೆಯ ಪೈಕಿ ಎರಡು ಗೋಡೆಯ ಮಧ್ಯೆ ಆಧಾರವಾಗಿರುವ ಮಣ್ಣಿನ ಗೋಡೆಯ ಮಣ್ಣು ಕೆಲವು ವರ್ಷಗಳಿಂದ ಮಳೆಯ ನೀರಿನ ಸೋರಿಕೆಯಿಂದ ಕರಗುತ್ತಿದೆ. ಈ ಬಾರಿ ಮಳೆ ಹೆಚ್ಚಾಗಿರುವುದರಿಂದ ಸೋರುವಿಕೆ ಹೆಚ್ಚಾಗಿದೆ. ಮಣ್ಣಿನ ಗೋಡೆಯ ಒಳ ಮತ್ತು ಹೊರಭಾಗಕ್ಕೆ ಲಗತ್ತಾಗಿರುವ ಕಲ್ಲಿನ ಚಪ್ಪಡಿಯ ಗೋಡೆಗಳ ಕಲ್ಲುಚಪ್ಪಡಿಗಳು ಪರಸ್ಪರ ದೂರ ಸರಿಯುತ್ತಾ ಬಿರುಕು ಬಿಡುತ್ತಿವೆ. ನವರಂಗದ ಈಶಾನ್ಯ ದಿಕಿನಲ್ಲಿರುವ ಗೋಡೆ ಬಿರುಕು ಬಿಟ್ಟಿದೆ. ಅದೇ ರೀತಿ ಶ್ರೀ ಲಕ್ಷ್ಮೀ ನರಸಿಂಹ ದೇವರಿಗೆ, ಶ್ರೀ ಪುರುಷೋತ್ತಮ ಗರ್ಭಗುಡಿಯ ಒಳಗಿನ ಗೋಡೆಯಲ್ಲಿ ನೀರು ಜಿನುಗುತ್ತಿದೆ. ಶ್ರೀ ಪುರುಷೋತ್ತಮ ದೇವರ ಗರ್ಭಗುಡಿಯ ಹೊರಭಾಗದಲ್ಲಿ ಸಹ ಅಲ್ಲಲ್ಲಿ ಕಲ್ಲು ಜರಿಯುತ್ತಿದೆ. ಈ ಹಿಂದೆ ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ತಿಳಿಸಲಾಗಿದೆ ಎಂದರು.

ದೇವಾಲಯದ ಸೋರುವಿಕೆ ಶಿಥಿಲಾವಸ್ಥೆ ಬಗ್ಗೆ ತಹಶೀಲ್ದಾರ್‌ ಸೋಮಶೇಖರ್‌ ಅವರಿಗೆ ಕೇಳಿದಾಗ ಇದು ಆರ್ಕಲಾಜಿಕಲ್‌ ಇಲಾಖೆಗೆ ಸೇರಿದ ವಿಷಯವಾಗಿದೆ. ಈ ಹಿಂದೆ ಅವರಿಗೆ ಈ ಬಗ್ಗೆ ಪತ್ರ ಬರೆಯಲಾಗಿದೆ. ಈಗ ಪುನಃ ಅವರಿಗೆ ಈ ವಿಷಯದ ಕುರಿತು ಪತ್ರ ಬರೆಯುತ್ತೇವೆ ಎಂದರು.

ದೇವಾಲಯ ಬಿಚ್ಚಿ ಸರಿಪಡಿಸಲು ಯೋಜನೆ: ರಾಜ್ಯ ಪುರಾತತ್ವ ಇಲಾಖೆಯ ಜಿಲ್ಲಾ ಸಹ ನಿರ್ದೇಶಕ ತೇಜಶ್ವರ ಅವರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ ಅವರು, ಈ ದೇವಾಲಯ ಬಹಳ ಪುರಾತನ ದೇವಾಲಯವಾಗಿರುವುದರಿಂದ ದೇವಾಲಯವನ್ನು ಬಿಚ್ಚಿ ಅದರ ಮರುಜೋಡಣೆ ಮಾಡುವ ಮೂಲಕ ದೇವಾಲಯ ಸಂರಕ್ಷಣಾ ಕಾರ್ಯ ಮಾಡುವ ಯೋಚನೆ ಇದೆ. ಅದಕ್ಕಾಗಿ ನಾವು ಸ್ಥಳಕ್ಕೆ ಬಂದು ಪರಿಶೀಲಿಸಿ ಮುಂದಿನ ಕ್ರಮ ನಿರ್ಧರಿಸುತ್ತೇವೆ ಎಂದರು.

ಶಿಥಿಲಾವಸ್ಥೆ ತಡೆಯಲು ಶೀಘ್ರ ಕ್ರಮ ಅತ್ಯಗತ್ಯ: ದೇವಾಲಯದ ರಕ್ಷಣೆಗೆ ಇಲ್ಲಿ ಯಾವುದೇ ಕಾವಲುಗಾರರ ನೇಮಕವಾಗಲಿ, ಮೈಂಟೇನೆನ್ಸ್‌ ಬಗ್ಗೆ ಆಗಲಿ ವ್ಯವಸ್ಥೆ ಮಾಡದಿರುವುದರಿಂದ ದೇವಾಲಯದ ಶಿಲೆಗಳ ಮೇಲೆ ಕಿಡಿಗೇಡಿಗಳು ಹೆಸರು ಮತ್ತಿತರ ಚಿತ್ರಗಳನ್ನು ಕೆತ್ತುವ ಮೂಲಕ ದೇವಾಲಯದ ಅಂದ ಹಾಳಾಗುತ್ತಿದೆ. ಈಗ ದೇವಾಲಯ ಶಿಥಿಲಾವಸ್ಥೆಗೆ ಜಾರುತ್ತಿದ್ದು ಈಗಲೂ ಸಂಬಂಧಪಟ್ಟವರು ಗಮನ ಹರಿಸದಿದ್ದರೆ ಶೀಘ್ರದಲ್ಲೇ ದೇವಾಲಯ ಸಂಪೂರ್ಣ ಹಾಳಾಗುವ ಎಲ್ಲಾ ಲಕ್ಷಣಗಳೂ ಗೋಚರವಾಗುತ್ತಿವೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ದೇವಾಲಯದ ಪುನರುತ್ಥಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next