Advertisement

ಕೆರೆ ಮೋಜಣಿ ಕಾರ್ಯಕ್ಕೆ ಬೇಕು ಚುರುಕು!

01:12 PM Nov 18, 2019 | |

„ಕೆ.ಎಸ್‌. ಸುಧೀಂದ್ರ ಭದ್ರಾವತಿ

Advertisement

ಭದ್ರಾವತಿ: ಹಿಂದಿನವರು ದೂರಾಲೋಚನೆಯಿಂದ ಹಾಗೂ ಊರಿನ ಸಾಮೂಹಿಕ ಹಿತದೃಷ್ಟಿಯಿಂದ ನಿರ್ಮಿಸಿದ್ದ ಕೆರೆ- ಕಟ್ಟೆಗಳು ಹೊಲಗದ್ದೆಗಳಿಗೆ ಜನ, ಜಾನುವಾರುಗಳಿಗೆ ನೀರು ಒದಗಿಸಿ ಪೋಷಿಸುತ್ತಿದ್ದವು.

ಆದರೆ ಕಾಲ ಕ್ರಮೇಣ ಮಾನವನ ಸ್ವಾರ್ಥ ದುರಾಲೋಚನೆಯ ಪರಿಣಾಮವಾಗಿ ಒತ್ತುವರಿ ಹೆಚ್ಚುತ್ತಾ ಕೆರೆಗಳು ಮಾಯವಾಗಿ ಆ ಸ್ಥಳದಲ್ಲಿ ತೋಟ- ಗದ್ದೆ, ವಸತಿ ಪ್ರದೇಶಗಳು ತಲೆ ಎತ್ತಿದವು. ಇದರಿಂದ ಕೆಲವೇ ವರ್ಷಗಳ ಹಿಂದೆ ನೀರಿನಿಂದ ತುಂಬಿರುತ್ತಿದ್ದ ಅನೇಕ ಕೆರೆಗಳು ಕಾಣದಂತೆ ಮಾಯವಾಗಿ ಆ ಜಾಗದಲ್ಲಿ ಮನೆಗಳು, ತೋಟ- ಗದ್ದೆಗಳು ತಲೆ ಎತ್ತಿವೆ.

ಭದ್ರಾವತಿ ತಾಲೂಕಿನಲ್ಲಿ ಇರುವ ಒಟ್ಟು 167 ಗ್ರಾಮಗಳಲ್ಲಿ 115 ಗ್ರಾಮಗಳಲ್ಲಿ ಮಾತ್ರ ಕೆರೆಗಳಿವೆ ಎಂದು ಕಂದಾಯ ಇಲಾಖೆ ದಾಖಲಾತಿ ಹೇಳುತ್ತದೆ. ಈ ಗ್ರಾಮಗಳಲ್ಲಿ ಒಂದು ಕಾಲದಲ್ಲಿ ಇದ್ದ ಅಸಂಖ್ಯಾತ ಕೆರೆಗಳು ಪ್ರಸುತ್ತ 383ಕ್ಕೆ ಇಳಿದಿವೆ. ಈ ಎಲ್ಲಾ ಕೆರೆಗಳ ಒಟ್ಟು ವಿಸ್ತೀರ್ಣ 3598 ಎಕರೆ, 27 ಗುಂಟೆ.

ಕೆರೆಗಳ ಒತ್ತುವರಿ: ಅನೇಕ ಪ್ರಭಾವಿ ವ್ಯಕ್ತಿಗಳು ಸರ್ಕಾರಿ ಜಾಗ ,ಕೆರೆ- ಕೊಳ್ಳಗಳು ಮಾತ್ರ ಅವರದ್ದೇ ಎಂಬ ರೀತಿ ಒತ್ತುವರಿ ಮೂಲಕವೋ ಅಥವಾ ಅಕ್ರಮ ಪ್ರವೇಶದ ಮೂಲಕವೋ ಅವರವರ ತೆಕ್ಕೆಗೆ ಸೇರಿಸಿಕೊಂಡು ಅವರ ಸ್ವಯಾರ್ಜಿತ ಆಸ್ತಿಯಂತೆ ಹಲವರು ಮನೆಗಳನ್ನು ಕಟ್ಟಿಕೊಂಡು ವಾಸ ಕಂಡು ಕೊಂಡಿದ್ದರೆ ಮತ್ತೆ ಕೆಲವರು ಅಡಕೆ, ತೆಂಗಿನ ತೋಟಗಳನ್ನು ಮಾಡಿಕೊಂಡು ಆರಾಮವಾಗಿದ್ದಾರೆ.

Advertisement

ಈ ನಡುವೆ ಸರ್ಕಾರದ ಆದೇಶದನ್ವಯ ಕಳೆ‌ದ ವರ್ಷ ತಾಲೂಕು ಆಡಳಿತ ಕೆರೆಗಳ ಸರ್ವೆ ಕಾರ್ಯ ನಡೆಸಿ ಒತ್ತುವರಿ ತೆರವಿಗೆ ಮುಂದಾದಾಗ ಅಂತಹ ಕೆಲವು ಒತ್ತುವರಿದಾರರು ವಿವಿಧ ಕಾರಣಗಳನ್ನು ನೀಡಿ ಅವರು ಮಾಡಿರುವ ಕೆರೆ ಒತ್ತುವರಿ ಕಾರ್ಯವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನ ನಡೆಸಿದರು. ಮತ್ತೆ ಕೆಲವು ಪ್ರಭಾವಶಾಲಿ ಒತ್ತುವರಿದಾರರು ತಮ್ಮ, ತಮ್ಮ ರಾಜಕೀಯ ಪ್ರಭಾವ ಬಳಸಿ ಕೆರೆ ಒತ್ತುವರಿ ಜಾಗದಲ್ಲಿ ಮಾಡಿಕೊಂಡಿರುವ ಬೆಲೆ ಬಾಳುವ ಅಡಕೆ ತೋಟಗಳನ್ನು ಒತ್ತುವರಿ ತೆರೆವಿನ ವ್ಯಾಪ್ತಿಯಿಂದ ಮುಕ್ತವಾಗಿ ಮಾಡಿಕೊಳ್ಳುವಲ್ಲಿ ನಡೆಸಿದ ಪ್ರಯತ್ನದ ಪರಿಣಾಮ ಪ್ರಸ್ತುತ ಇರು‌ವ ಕೆರೆಗಳ ವಿಸ್ತೀರ್ಣ 3598 ಎಕರೆ, 27 ಗುಂಟೆಗೆ ಸೀಮಿತವಾಗಿದೆ.

ತಹಶೀಲ್ದಾರ್‌ ಕಚೇರಿಯಿಂದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ 383 ಕೆರೆಗಳ ಅಳತೆ ಮಾಡುವಂತೆ ಕೋರಿ 6 ಕಡತಗಳನ್ನು ರವಾನಿಸಲಾಗಿದೆ. ಆ ಪೈಕಿ 59 ಕೆರೆಗಳ ಅಳತೆ ಕಾರ್ಯ ಪೂರ್ಣಗೊಂಡಿದ್ದು ಉಳಿದ 324 ಕೆರೆಗಳ ಅಳತೆ ಕಾರ್ಯ ನಡೆಯಬೇಕಿದೆ.

ಈಗ ಚುರುಕಾಗಿದೆ: ಕೆರೆಗಳ ಅಳತೆ ಮತ್ತು ಒತ್ತುವರಿ ತೆರವಿನ ಕುರಿತಂತೆ ತಾಲೂಕು ಆಡಳಿತದ ಮುಖ್ಯಸ್ಥರಾದ ತಹಶೀಲ್ದಾರ್‌ ಸೋಮಶೇಖರ್‌ ಅವರನ್ನು ಕೇಳಿದಾಗ, ಈ ಹಿಂದೆ ಕೆರೆ ಒತ್ತುವರಿ ತೆರವಿನ ಕಾರ್ಯ ಕುಂಠಿತವಾಗಿತ್ತು. ನಾನು ಅಧಿಕಾರ ಸ್ವೀಕರಿಸಿದ ನಂತರ ಇದಕ್ಕೆ ಹೆಚ್ಚಿನ ಒತ್ತು ನೀಡಿದ್ದು, ನಿರಂತರವಾಗಿ ಸುರಿದ ಮಳೆಯಿಂದಾಗಿ ಕೆಲ ಕಾಲ ಕೆರೆ ಅಳತೆ ಕಾರ್ಯ ನಿಂತಿತ್ತು. ಈಗ ಪುನಃ ಕೆರೆ ಅಳತೆ ಕಾರ್ಯವನ್ನು ಆರಭಿಸಲಾಗುತ್ತದೆ. ಕೆರೆ ಒತ್ತುವರಿ ಆಗಿದ್ದು ಕಂಡುಬಂದ ಕಡೆಗಳಲ್ಲಿ ಒತ್ತುವರಿ ಮಾಡಿದವರಿಗೆ ಕಾನೂನು ಪ್ರಕಾರ ತೆರವಿಗೆ ಆದೇಶಿಸುತ್ತೇವೆ.

ಗ್ರಾಪಂ ವ್ಯಾಪ್ತಿಯಲ್ಲಿ ಕಂಡು ಬರುವ ಕೆರೆಗಳ ಅಳತೆ ಕಾರ್ಯವನ್ನು ಗ್ರಾಪಂ ಅ ಧಿಕಾರಿಗಳು ಸರ್ವೆಯರ್‌ ಮೂಲಕ ಕೈಗೊಳ್ಳುತ್ತಾರೆ. ನಮ್ಮ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಅಳತೆ ಕಾರ್ಯವನ್ನು ನಾವು ಸರ್ವೆಯರ್‌ ಮೂಲಕ ಮಾಡಿಸುತ್ತಿದ್ದೇವೆ ಎನ್ನುತ್ತಾರೆ.

ಆಟೋ ಅಲಾಟ್‌ಮೆಂಟ್‌: ಈ ಕೆರೆಗಳ ಅಳತೆ ಅಥವಾ ಮೋಜಣಿ ತಂತ್ರಾಂಶದಲ್ಲಿ “ಇ’ ಅರ್ಜಿಗೆ ದಾಖಲಿಸಿದ್ದು ಆಟೋ ಅಲಾಟ್‌ಮೆಂಟ್‌ ವ್ಯವಸ್ಥೆ ಇರುವ ಕಾರಣ ಕೆರಗಳ ಮೋಜಣಿ ಮಾಡುವ ಭೂ ಮಾಪಕರಿಗೆ ಹೆಚ್ಚುವರಿ ಕಡತಗಳ ಹಂಚಿಕೆ ಆಗದಿರುವುದರಿಂದ ಮೋಜಣಿ ಕಾರ್ಯ ನಿರೀಕ್ಷಿತ ವೇಗದಲ್ಲಿ ಕಾರ್ಯಗತಗೊಳ್ಳುತ್ತಿಲ್ಲ ಎಂದು ಭೂ ದಾಖಲೆಗಳ ಇಲಾಖೆಯ ಮಾಹಿತಿ ತಿಳಿಸುತ್ತದೆ.

ಒಟ್ಟಿನಲ್ಲಿ ಕೆರೆಗಳ ಮೋಜಣಿ ಕಾರ್ಯವಾಗಲಿ ಅಥವಾ ಒತ್ತುವರಿ ತೆರವಿನ ಕಾರ್ಯವಾಗಲಿ ನಿರೀಕ್ಷಿತ ವೇಗದಲ್ಲಿ ನಡೆಯದಿರುವ ಕಾರಣ ಒಂದೆಡೆ ಕೆರೆ ಒತ್ತುವರಿದಾರರು ನಿರಾತಂಕವಾಗಿದ್ದರೆ ಮತ್ತೂಂದೆಡೆ ಅಧಿಕಾರಿಗಳ ಯಾಂತ್ರಿಕ ಮತ್ತು ತಾಂತ್ರಿಕ ವ್ಯವಸ್ಥೆಯ ಲೋಪ- ದೋಷಗಳತ್ತ ಬೊಟ್ಟು ಮಾಡಿ ತೋರಿಸುತ್ತಾ ಇರುವುದರಿಂದ ಕೆರೆಗಳ ಒತ್ತುವರಿ ತೆರವು ಅಥವಾ ಮೋಜಣಿ ಕಾರ್ಯ ಆಮೆನಡಿಗೆಯಲ್ಲಿ ಸಾಗಿದೆ.

ಅಧಿಕಾರಿಗಳು ಯಾರದೇ ಪ್ರತಿಭಟನೆ, ಪ್ರಭಾವಕ್ಕೆ ಒಳಗಾಗದೆ ಕೆರೆ ಮೋಜಣಿ ನಡೆಸಿ ಒತ್ತುವರಿ ತೆರವಿನ ಕಾರ್ಯ ಕಟ್ಟುನಿಟ್ಟಾಗಿ ಕೈಗೊಂಡರೆ ಕ್ಷೇತ್ರದ ಕೆರೆಗಳು ಉಳಿಯುತ್ತವೆ. ಇಲ್ಲವಾದಲ್ಲಿ ಕೆರೆಗಳು ಕಾಣದಂತೆ ಮಾಯವಾಗುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next