ಭದ್ರಾವತಿ: ಕಾಮ, ಕ್ರೋಧ, ಮೋಹ, ಮದ, ಮಾತ್ಸರ್ಯಾದಿ ಅರಿಷಡ್ವರ್ಗಗಳೇ ಮನುಷ್ಯನ ನಿಜವಾದ ಶತ್ರುಗಳು ಎಂದು ಹಾರನಹಳ್ಳಿ ಕೋಡಿಮಠ ಮಹಾ ಸಂಸ್ಥಾನ ಮಠದ ಶ್ರೀ ಡಾ| ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.
ಗೋಣಿಬೀಡಿನ ಶೀಲ ಸಂಪಾದನಾ ಮಠದಲ್ಲಿ ಶೀಲ ಸಂಪಾದನಾ ಮಠ ಸ್ಪಿರಿಚುವಲ್ ಫೌಂಢೇಶನ್ ವತಿಯಿಂದ ಏರ್ಪಡಿಸಿದ್ದ ಧ್ಯಾನ ಮಂದಿರದ ಉದ್ಘಾಟನಾ ಸಮಾರಂಭ, ಅನುಭಾವ ಸಾಹಿತ್ಯ ಸಮ್ಮೇಳನ ಹಾಗೂ ಗುರುವಂದನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯನ ದೇಹ, ಮನಸ್ಸು ಸುಸ್ಥಿತಿಯಲ್ಲಿ ಸಾಗಲು ಮನುಷ್ಯನ ದೇಹದಲ್ಲಿ ಪಂಚೇಂದ್ರಿಯಗಳೆಂಬ ಐದು ಜನ ಚಾಲಕರಿರುತ್ತಾರೆ. ಈ ಐವರಲ್ಲಿ ಯಾರೇ ಒಬ್ಬ ಚಾಲಕ ಹಾದಿ ತಪ್ಪಿದರೂ ಜೀವನ ಹೆಚ್ಚು ಕಮ್ಮಿ ಆಗುತ್ತದೆ. ಇದಕ್ಕೆ ಖಾವಿ, ಖಾದಿ, ಕಾಖೀಗಳೂ ಹೊರತಲ್ಲ ಎಂದರು.
ಮಾನವ ಸೇರಿದಂತೆ ಸಕಲ ಜೀವರಾಶಿಗಳು ಪ್ರಕೃತಿಯ ಅವಿಭಾಜ್ಯ ಅಂಗ. ಪ್ರಕೃತಿಯಲ್ಲಿ ಅಡಗಿರುವ ಅನಂತ ರಹಸ್ಯಗಳನ್ನು ಅರಿಯುವ ಸಲುವಾಗಿ ಹಿಂದಿನ ಋಷಿಮುನಿಗಳು, ಸಾಧು- ಸಂತರು ಮಾಡುತ್ತಿದ್ದ ಸಾಧನೆಗೆ ತಪಸ್ಸು ಎಂದು ಕರೆಯುತ್ತಿದ್ದರು. ಅಂದಿನ ಆ ತಪಸ್ಸು ಎಂಬ ಕ್ರಿಯೆಯೇ ಇಂದಿನ ವಿಜ್ಞಾನಿಗಳು ನಡೆಸುವ ಸಂಶೋಧನೆ, ಆವಿಷ್ಕಾರ ಎಂದು ತಿಳಿಯಬಹುದು. ಆಧುನಿಕ ವೈಜ್ಞಾನಿಕ ಆವಿಷ್ಕಾರಗಳಾದ ಮೊಬೈಲ್, ಟಿವಿ, ಅಂತರ್ಜಾಲ ಎಲ್ಲದರ ಹಿಂದೆ ಹಿಂದಿನ ಋಷಿಮುನಿಗಳ ಕೊಡುಗೆ ಅಪಾರವಾಗಿದೆ. ಸಾಧು ಸಂತರು ತಮ್ಮ ತಪಸ್ಸಿನ ಶಕ್ತಿಯಿಂದ ಕಂಡುಕೊಂಡ ಸತ್ಯವನ್ನು ಜಗತ್ತಿಗೆ ಗ್ರಂಥಗಳ ಮೂಲಕ ತಿಳಿಸಿದ್ದಾರೆ. ಅವುಗಳನ್ನು ಕ್ರಮಬದ್ಧವಾಗಿ ಆದ್ಯಯನ ಮಾಡಿದರೆ ಜ್ಞಾನಭಂಡಾರ ಹೆಚ್ಚುತ್ತದೆ. ಸಾಧು-ಸಂತರು ಮಾಡುವ ಜಪ, ತಪ ಎಲ್ಲವೂ ಲೋಕಕಲ್ಯಾಣಾರ್ಥವಾಗಿರುತ್ತದೆಯೇ ಹೊರತು ಯಾವುದೇ ಸ್ವಾರ್ಥ ಉದ್ದೇಶ ಹೊಂದಿರುವುದಿಲ್ಲ ಎಂದರು.
ಕಾಮಿಗಳು ಕಾವಿಧಾರಿಗಳಾಗುತ್ತಾರೆ: ಭಕ್ತರು ಗುರುಮುಖೇನ ಜ್ಞಾನವನ್ನು ಸಂಪಾದಿಸಿ ಸಮಾಜದ ಒಳಿತಿಗೆ ಬಳಸಬೇಕು. ಆದರೆ ಇಂದು ಮನೆ ಮತ್ತು ಮಠಗಳ ನಡುವಿನ ಬಾಂಧವ್ಯ ಮರೆಯಾಗುತ್ತಿದೆ. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಕಾಮಿಗಳೆಲ್ಲಾ ಖಾವಿ ತೊಡುವ ಕಾಲ ಬರುತ್ತದೆ, ಸಮಾಜಕ್ಕೆ ಮಾರ್ಗದರ್ಶಕರಾಗ ಬೇಕಾಗಿರುವ ಕಾವಿಧಾರಿಗಳು ವಿಲಾಸಿ ಜೀವನಕ್ಕೆ ಮನಸೋಲುತ್ತಿರುವುದು ಇದಕ್ಕೆ ಕಾರಣವಾಗುತ್ತದೆ. ಯಥಾರಾಜ – ತಥಾಪ್ರಜಾ ಎಂಬಂತೆ ಜನರು ಹ್ಯಾಂಗೆ ಇದ್ದಾರೋ – ಸ್ವಾಮಿಗಳು ಹಾಂಗೆ ಇದ್ದಾರೆ ಎಂದು ಹೇಳುವ ಕಾಲ ಬರುತ್ತದೆ. ಇಂದು ಧರ್ಮದ ಆಚರಣೆಗಿಂತ ಜಾತಿಮೇಲಿನ ದುರಭಿಮಾನದಿಂದ ಜಾತಿಯ ಹಾವಳಿ ಹೆಚ್ಚಾಗುತ್ತಿದೆ. ಧರ್ಮದ ಆಚರಣೆ ಮರೆಯಾಗುತ್ತಿದೆ. ಈಕುರಿತು ಜನರು ಜಾಗೃತರಾಗುವ ಅವಶ್ಯಕತೆ ಹೆಚ್ಚಾಗಿದೆ ಎಂದರು.
ಶೀಲಸಂಪಾದನ ಮಠದ ತಪಸ್ವಿ ಡಾ| ಸಿದ್ದಲಿಂಗ ಸ್ವಾಮೀಜಿ ,ಕಡೂರು ಮೂರು ಕಳಸದ ಮಠದ ಶ್ರೀ ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ, ದೊಡ್ಡಗುಣಿಯ ರೇವಣಸಿದ್ದ ಸ್ವಾಮೀಜಿ, , ಚಿತ್ರದುರ್ಗ ಕಬೀರಾನಂದಾಶ್ರಮದ ಸದ್ಗುರು ಶಿವಲಿಂಗಾನಂದ ಸ್ವಾಮೀಜಿ, ಪಾಂಡವಪುರದ ಬೇಬಿ ಮಠದ ಮ.ನಿ.ಪ್ರ. ತ್ರಿನೇತ್ರ ಮಹಾಂತ ಶಿವಯೋಗಿಗಳು, ಶಿವಮೊಗ್ಗದ ಸದ್ಗುರು ಬ್ರಹ್ಮಾನಂದ ಭಿಕ್ಷು ಮಹಾರಾಜ ಹಿರಿಯೂರು ಅಚಲಾನಂದ ಆಶ್ರಮದ ಲಕ್ಷ್ಮಣಾರ್ಯ ಸ್ವಾಮೀಜಿ, ನಗರಸಭೆ ಆಯುಕ್ತ ಮನೋಹರ್, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯರ್ಶಿ ಎಂ. ಶ್ರೀಕಾಂತ್, ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ್, ನಿವೃತ್ತ ಐಎಎಸ್ ಅಧಿಕಾರಿ ದಯಾಶಂಕರ್ ಮತ್ತಿತರರು ಇದ್ದರು. ಶಾಸಕರ ಸಹೋದರ ಬಿ.ಕೆ.ಜಗನ್ನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದೀಪಿಕಾ ಶ್ರೀಕಾಂತ್ ತಂಡದವರು ಪ್ರಾರ್ಥಿಸಿದರು. ವಿಶ್ವನಾಥ್ ಸ್ವಾಗತಿಸಿದರು. ಡಾ| ಬಸವರಾಜ್ ನೆಲ್ಲಿಸರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮನ್ವಯ ಕಾಶಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನ ರಾಧಾಕೃಷ್ಣ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.