ಭದ್ರಾವತಿ: ಎಂಪಿಎಂ ಕಾರ್ಖಾನೆಯ ಆಡಳಿತ ವರ್ಗದಲ್ಲಿನ ಭ್ರಷ್ಟ ಅಧಿಕಾರಿಗಳು ಕಾರ್ಖಾನೆಯನ್ನು ಸಂಪೂರ್ಣ ಮುಚ್ಚುವ ಹುನ್ನಾರ ನಡೆಸಿ ಈ ಬಗ್ಗೆ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಇದನ್ನು ತಡೆಯದಿದ್ದರೆ ಕಾರ್ಖಾನೆಯಲ್ಲಿ ಉಳಿದಿರುವ ಕಾಯಂ ನೌಕರರ ಬದುಕೂ ಸಹ ಬೀದಿ ಪಾಲಾಗುತ್ತದೆ ಎಂದು ಎಂಪಿಎಂ ಕಾರ್ಖಾನೆಯ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಜಿ. ಬಸವರಾಜಯ್ಯ ಹೇಳಿದರು.
ಶುಕ್ರವಾರ ಸಂಜೆ ಈ ಕುರಿತಂತೆ ಎಂಪಿಎಂ ಕಾಗದ ಕಾರ್ಖಾನೆ ನೌಕರರಸಂಘ ಮತ್ತು ಇನ್ನಿತರ ಸಂಘ-ಸಂಸ್ಥೆಗಳವರು ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ ಸಂದರ್ಭ ಅವರು ಮಾತನಾಡಿದರು. ಸರ್ ಎಂ. ವಿಶ್ವೇಶ್ವರಯ್ಯ ಸ್ಥಾಪಿತ ಕಾರ್ಖಾನೆ ಆಡಳಿತ ವರ್ಗದ ನಿಷ್ಕ್ರಿಯ ಆಳ್ವಿಕೆಯಿಂದ ಅಧೋಗತಿಗೆ ಬಂದಿದೆ. ಸ್ವಯಂ ನಿವೃತ್ತಿ ಯೋಜನೆಯಡಿ ಸಾವಿರಾರು ಕಾರ್ಮಿಕರು ನಿವೃತ್ತಿ ಪಡೆಯುವಂತೆ ಮಾಡಿದರು. ಆದರೂ ಇನ್ನುಳಿದ ಸುಮಾರು 240 ಜನ ಕಾರ್ಮಿಕರು ಎಂಪಿಎಂ ಮತ್ತೆ ಪ್ರಾರಂಭವಾಗುವ ವಿಶ್ವಾಸದಿಂದ ಅದೇ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದಲ್ಲ ನಾಳೆ ಕಾರ್ಖಾನೆ ಮತ್ತೆ ಉತ್ತಮ ಪರಿಸ್ಥಿತಿ ತಲುಪುತ್ತದೆ ಎಂಬ ಭಾವನೆ ಹೊಂದಿದ್ದಾರೆ. ಆದರೆ ಕಾರ್ಖಾನೆಯಲ್ಲಿ ಈಗಾಗಲೇ ನಿವೃತ್ತಿ ಪಡೆದ ಕೆಲವು ಅಧಿಕಾರಿಗಳು ಪುನಃ ಹಿಂಬಾಗಿಲಿನಿಂದ ಕೆಲಸಕ್ಕೆ ಸೇರಿಕೊಂಡು ಈಗ ಕಾರ್ಖಾನೆಯನ್ನು ಮುಚ್ಚುವ ಪ್ರಯತ್ನ ಮಾಡುತ್ತಿದ್ದಾರೆ ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ಭ್ರಷ್ಟ ಅಧಿಕಾರಿಗಳನ್ನು ಕಾರ್ಖಾನೆಯಿಂದ ಹೊರಗಟ್ಟಿ ಕಳಂಕ ರಹಿತರಾದ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳನ್ನು ನೇಮಿಸಬೇಕು. ಇಲ್ಲಿನ ಕಾರ್ಮಿಕರಿಗೆ, ನೌಕರರಿಗೆ ಸಿಗಬೇಕಾದ ಸವಲತ್ತುಗಳನ್ನು ಒದಗಿಸಿಕೊಡಬೇಕು. ಕಾರ್ಖಾನೆಯನ್ನು ಸರ್ಕಾರಿ ಸ್ವಾಮಿತ್ವದಲ್ಲಿಯೇ ಉಳಿಸಿಕೊಂಡು ನಡೆಸಬೇಕು ಎಂದರು.
ಈಗ ಕಾರ್ಖಾನೆಯಲ್ಲಿ ಉಳಿದಿರುವ ಕಾರ್ಮಿಕರನ್ನು ಬಳಸಿಕೊಂಡು ಅತಿ ಕಡಿಮೆ ಬಂಡವಾಳ ತೊಡಗಿಸಿ ಕಾರ್ಖಾನೆಯಲ್ಲಿ ಉತ್ಪಾದನೆ ಪುನರಾರಂಭಿಸಬೇಕು. ಕಾರ್ಖಾನೆಯ ಆಡಳಿತದಲ್ಲಿರುವ ಸುಮಾರು 75000 ಎಕರೆ ಪ್ರದೇಶದಲ್ಲಿ ನೀಲಗಿರಿ ಮತ್ತು ಅಕೇಶಿಯ ಮರಗಳು ಬೆಳೆದು ನಿಂತಿದ್ದು ಅದರ ಮಾರಾಟದಿಂದ ಎಲ್ಲಾ ಕಾರ್ಮಿಕರಿಗೂ ಸಂಬಳ ನೀಡಬಹುದಾಗಿದೆ ಎಂದ ಅವರು, ಕಾರ್ಖಾನೆಯನ್ನು ಯಾವ ಕಾರಣಕ್ಕೂ ಮುಚ್ಚಬಾರದು. ನಮ್ಮ ಬೇಡಿಕೆ ಈಡೇರದಿದ್ದರೆ ಮುಂದೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಧರ್ಮಪ್ರಸಾದ್ ಮಾತನಾಡಿ, ಎಂಪಿಎಂ ಕಾರ್ಖಾನೆಯ ಇಂದಿನ ದುಸ್ಥಿತಿಗೆ ಕಾರ್ಖಾನೆಯ ಕೆಟ್ಟ ಆಡಳಿತ ನೀತಿ ಮತ್ತು ಈ ಕಾರ್ಖಾನೆಯ ಉಳಿವಿಗೆ ಇಲ್ಲಿನ ಸ್ಥಳೀಯ ರಾಜಕೀಯ ನಾಯಕರು ಹಾಗೂ ರಾಜ್ಯಮಟ್ಟದ ನಾಯಕರು ಸರಿಯಾದ ರೀತಿ ಪ್ರಯತ್ನ ಮಾಡದೆ ಇದ್ದುದೇ ಕಾರಣ. ಹೋರಾಟ ಫಲಪ್ರದವಾಗಬೇಕಾದರೆ ಕಾರ್ಖಾನೆಯಲ್ಲಿ ಈಗ ಉಳಿದಿರುವ 240 ಜನ ಕಾರ್ಮಿಕರು ಮತ್ತು ನೌಕರರು ಇಚ್ಛಾಶಕ್ತಿಯಿಂದ ತೀವ್ರ ಪ್ರಯತ್ನವನ್ನು ಸಂಘಟಿತವಾಗಿ ಮಾಡಬೇಕು ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಸೋಮಶೇಖರ್ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡುವುದಾಗಿ ತಿಳಿಸಿದರು.
ಸಂಘದ ಪದಾಧಿಕಾರಿಗಳು, ಮನೆ ಮಾಲೀಕರ ಸಂಘದ ಅಧ್ಯಕ್ಷ ರುದ್ರಪ್ಪ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್. ರಾಜು ಮತ್ತಿತರರು ಇದ್ದರು.