Advertisement

ಜಿಲ್ಲಾದ್ಯಂತ ನವರಾತ್ರಿ ಉತ್ಸವ ಆರಂಭ

02:54 PM Sep 30, 2019 | Naveen |

ಭದ್ರಾವತಿ: ನಗರಸಭೆ ವತಿಯಿಂದ ನಡೆಸುತ್ತಿರುವ 10 ದಿನಗಳ ನಾಡಹಬ್ಬ ದಸರಾ ಮಹೋತ್ಸವಕ್ಕೆ ವಿಶ್ರಾಂತ ಪ್ರಾಧ್ಯಾಪಕ ಡಾ| ಕೆ.ಎಸ್‌. ಕುಮಾರಸ್ವಾಮಿ ಭಾನುವಾರ ಚಾಲನೆ ನೀಡಿದರು.

Advertisement

ಗ್ರಾಮದೇವತೆ ಹಳೇನಗರದ ಹಳದಮ್ಮದೇವಿ ದೇವಸ್ಥಾನದ ಪ್ರಾಂಗಣ ಹಾಗೂ ಕನಕ ಮಂಟಪ ಮೈದಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ನಂತರ ಕನಕ ಮಂಟಪ ಮೈದಾನದಲ್ಲಿ ಇರಿಸಿರುವ ಬೃಹತ್‌ ಗಾತ್ರದ ಶ್ರೀ ಚಾಮುಂಡೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸುವ ಮೂಲಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಯಿ ಚಾಮುಂಡೇಶ್ವರಿಯು ತಾಲೂಕಿನಲ್ಲಿ ನಡೆಯುವ ದಸರಾ ಮಹೋತ್ಸವಕ್ಕೆ ಉದ್ಘಾಟನೆಯ ಅವಕಾಶ ಕಲ್ಪಿಸಿರುವುದು ನನ್ನ ಭಾಗ್ಯ. ನನ್ನ ತವರು ಮನೆಯಲ್ಲಿ ನಾನು ಮಗುವಾದೆನು ಎಂಬ
ಅನುಭವ ನನ್ನದಾಗಿದೆ. ದೇವಿಯು ಕ್ಷೇತ್ರದ ಜನರಿಗೆ ಒಳ್ಳೆಯನ್ನು ಮಾಡಲಿ. ನನ್ನನ್ನು ಉದ್ಘಾಟಕರಾಗಿ ಆಯ್ಕೆ ಮಾಡಿದ ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದರು.

ಹಳದಮ್ಮದೇವಿಗೆ ಪೂಜೆ ಸಲ್ಲಿಸಿ ದೇವಿ ಚಾಮುಂಡೇಶ್ವರಿಗೆ ಪುಷ್ಪನಮನ ನೆರವೇರಿಸಿ ಮಾತನಾಡಿದ ಶಾಸಕ ಬಿ.ಕೆ. ಸಂಗಮೇಶ್ವರ್‌, ನವದುರ್ಗೆಯರ ಆರ್ಶೀವಾದ ಕ್ಷೇತ್ರದ ಜನತೆಯ
ಮೇಲೆ ಸದಾ ಇರಲಿ. ನವರಾತ್ರಿ ಸಂದರ್ಭದಲ್ಲಿ ದುಷ್ಟ ಶಕ್ತಿಗಳ ಸಂಹಾರ ನಡೆಯುವ ಮೂಲಕ ಈ ನೆಲದಲ್ಲಿ ಶಾಂತಿ, ಸೌಹಾರ್ದ, ಪ್ರೀತಿ- ವಾತ್ಸಲ್ಯ ನೆಲೆಸಲಿ. ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.

ಹಳದಮ್ಮ ದೇವಿ ಸಮಿತಿಯ ಮುಖಂಡ ಸಂತೋಷ್‌ ಮಾತನಾಡಿ, ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಗಳಂತೆ ತಾಲೂಕಿನಲ್ಲಿಯೂ ಕೂಡ 9 ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿರುವ ಹೆಗ್ಗಳಿಕೆ ಪೌರಾಯುಕ್ತ ಮನೋಹರ್‌ ಅವರಿಗೆ ಸಲ್ಲುತ್ತದೆ. ಗ್ರಾಮದೇವತೆ ಹಳದಮ್ಮ ದೇವಿಗೆ ಪೂಜೆ ಸಲ್ಲಿಸಿ ದೇವಿಯ ಪ್ರಾಂಗಣದಲ್ಲಿ ನಾಡಹಬ್ಬ ದಸರಾಕ್ಕೆ ಚಾಲನೆ ನೀಡಿರುವುದು ಸಂಪ್ರದಾಯಬದ್ಧವಾಗಿದೆ ಎಂದರು.

Advertisement

ಕಾರ್ಯಕ್ರಮದಲ್ಲಿ ಪೌರಾಯುಕ್ತ ಮನೋಹರ್‌, ನಗರಸಭೆ ಅಧಿಕಾರಿಗಳಾದ ರಾಜ್‌ಕುಮಾರ್‌, ರುದ್ರೇಗೌಡ, ರಾಘವೇಂದ್ರ, ಕೃಷ್ಣಮೂರ್ತಿ, ಸುಹಾಸಿನಿ, ಸುಮಿತ್ರ, ರೇವಣ್ಣ, ನರಸಿಂಹಾಚಾರ್‌,
ರಮಾಕಾಂತ್‌, ಜಿ. ಕೃಷ್ಣಮೂರ್ತಿ, ಹಾ| ರಾಮಪ್ಪ, ಧನಲಕ್ಷ್ಮೀ  , ರೂಪ, ಕಾ.ರಾ. ನಾಗರಾಜ್‌, ಅನ್ನಪೂರ್ಣ ಸತೀಶ್‌ ಮತ್ತಿತರರು ಇದ್ದರು. ಸಂಜೆಯ ವೇದಿಕೆ ಕಾರ್ಯಕ್ರಮವನ್ನು ಶಾಸಕ ಬಿ.ಕೆ. ಸಂಗಮೇಶ್‌ ಉದ್ಘಾಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next