Advertisement

ಸಾಧು-ಸಂತರ ಮಾತು ಮಾನವೀಯ ಮೌಲ್ಯಗಳ ಪ್ರತೀಕ

02:48 PM Jul 15, 2019 | Naveen |

ಭದ್ರಾವತಿ: ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆಯುವ ಕಾರ್ಯವನ್ನು ದೇಶದಲ್ಲಿ ಅಸಂಖ್ಯಾತ ಸಾಧು- ಸಂತರು, ಮಹಾತ್ಮರು ಹಿಂದಿನಿಂದಲೂ ಮಾಡುತ್ತಾ ಬಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಹೇಳಿದರು.

Advertisement

ಭಾನುವಾರ ಗೋಣಿಬೀಡಿನ ಶೀಲ ಸಂಪಾದನಾ ಮಠದಲ್ಲಿ ಸ್ಪಿರಿಚ್ಯುಯಲ್ ಫೌಂಡೇಶನ್‌ ವತಿಯಿಂದ ಏರ್ಪಡಿಸಿದ್ದ ಧ್ಯಾನ ಮಂದಿರದಲ್ಲಿ ಅನುಭಾವ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾಪುರುಷರ, ಸಾಧು-ಸಂತರ, ವಚನಕಾರರ ಸಾಹಿತ್ಯದ ಬಗ್ಗೆ ಓದಿಕೊಂಡು ಮಾತನಾಡಬಹುದು. ಆದರೆ ಆ ಸಾಹಿತ್ಯದಲ್ಲಿ ಅಡಗಿರುವ ಆಂತರಿಕ ಸಂವೇಧನೆಗಳ ಕುರಿತಂತೆ ಮಾತನಾಡಲು ಕೇವಲ ಅತೀಂದ್ರೀಯ ಶಕ್ತಿಗಳನ್ನು ಹೊಂದಿದವರಿಗೆ ಮಾತ್ರ ಸಾಧ್ಯ. ಅದೇ ನಿಜವಾದ ಅನುಭಾವ ಸಾಹಿತ್ಯದ ಸಾರ ಎಂದರು.

ಮಹಾಪುರುಷರ ಸಾಹಿತ್ಯದ‌ ಭಾಷೆ, ಪದಬಳಕೆಯಲ್ಲಿ ವ್ಯತ್ಯಾಸಗಳಿರಬಹುದು ಆದರೆ ಆ ಎಲ್ಲಾ ಸಾಹಿತ್ಯಗಳ ಮೂಲಉದ್ದೇಶ ಸಕಲಜೀವರಾಶಿಗಳ ಲೇಸನ್ನೇ ಬಯಸುವುದಾಗಿದೆ. ಯಾರನ್ನೂನೋಯಿಸಬಾರದು, ಯಾರಿಗೂ ಕೇಡು ಉಂಟು ಮಾಡಬಾರದು ಎಂಬ ನೀತಿಯನ್ನು ಹೊಂದಿರುವುದು ಸತ್ಯ. ಇಂತಹ ಸಾಹಿತ್ಯಗಳಲ್ಲಿ ಕಂಡುಬರುವ ಪದಗಳ ಅರ್ಥಕ್ಕಿಂತ ವಾಕ್ಯಾರ್ಥದೊಳಗಿನ ಉತ್ತಮ ಗುಣಚಿಂತನೆಯ ಬಗ್ಗೆ ನಾವು ಗಮನ ಹರಿಸಿ ಅವುಗಳ ಪಾಲನೆಗೆ ಮುಂದಾದಾಗ ಮಾತ್ರ ಸಮಾಜದಲ್ಲಿ ಉತ್ತಮ ಅಪೇಕ್ಷಿತ ಬದಲಾವಣೆ ತರಲು ಸಾಧ್ಯ ಎಂದರು.

ಶಿವಮೊಗ್ಗದ ಫಾದರ್‌ ವೀರೇಶ್‌ ಮಾತನಾಡಿ, ವೈಜ್ಞಾನಿಕವಾಗಿ ಇಂದು ನಾವು ವಿಶಾಲವಾಗಿ ಬೆಳೆಯುತ್ತಿದ್ದೇವೆ. ಆದರೆ ಮಾನಸಿಕ ಚಿಂತನೆಯಲ್ಲಿ ಸಂಕುಚಿತ ಭಾವನೆಗಳನ್ನು ಬೆಳೆಸಿಕೊಂಡು ಕುಬ್ಜರಾಗುತ್ತಿದ್ದೇವೆ.

Advertisement

ಸಕಲ ಜೀವರಾಶಿಗಳು ಭಗವಂತನ ಸೃಷ್ಟಿ. ಪ್ರಾಣಿ-ಪಕ್ಷಿ, ಸಸ್ಯಗಳಿಗೆ ಯಾವುದೇ ಕೋಮುಭಾವನೆಯ ಸೋಂಕಿಲ್ಲ. ಆದರೆ ಕೋಮು ಭಾವನೆಯಿಂದ ಸಮಾಜದ ನೆಮ್ಮದಿ ಹಾಳು ಮಾಡುವ ಅಧಿಕಾರವನ್ನು ಮನುಜರಿಗೆ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.

ಮಠ- ಮಂದಿರ, ಪ್ರಾರ್ಥನಾ ಮಂದಿರಗಳನ್ನು ಕಟ್ಟುವಲ್ಲಿ ತೋರುವ ಆಸಕ್ತಿಯನ್ನು ಮನಸ್ಸುಗಳನ್ನು ಕಟ್ಟುವತ್ತ ನೀಡದಿರುವುದು ವಿಷಾದನೀಯ ಎಂದರು.

ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು ಲಿಂಗಾನುಭಾವಿ ಸಿದ್ಧವೀರ ಶಿವಯೋಗಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಹುಟ್ಟು- ಸಾವಿನ ಮಧ್ಯೆ ಇರುವ ಜೀವನವನ್ನು ಸರಿಯಾದ ರೀತಿಯಲ್ಲಿ ಸಾಗಿಸಲು ಮಠ- ಮಂದಿರಗಳು ಮಾರ್ಗದರ್ಶನ ಮಾಡುವ ಕೇಂದ್ರಗಳಾಗಿವೆ ಎಂದರು. ಆನಂದಪುರ ಬೆಕ್ಕಿನಕಲ್ಮಠದ ಡಾ| ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಹಾಗೂ ಬಾಳೇಹೊನ್ನೂರು ಶಾಖಾ ಎಡೆಯೂರಿನ ಷ.ಬ್ರ. ರೇಣುಕ ಶಿವಾಚಾರ್ಯ ಸ್ವಾಮಿಗಳು ಸಭೆಯನ್ನುದ್ದೇಶಿಸಿ ಆಶೀರ್ವಚನ ನೀಡಿದರು.

ನಿವೃತ್ತ ಐಎಎಸ್‌ ಅಧಿಕಾರಿ ಹಾಗೂ ಶ್ರೀ ಶೀಲಸಂಪಾದನ ಮಠದ ಕಾರ್ಯಾಧ್ಯಕ್ಷ ದಯಾಶಂಕರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶಯ ನುಡಿಗಳನ್ನಾಡಿದರು ಶಿವಮೊಗ್ಗದ ಯೋಗ ಶಿಕ್ಷಕ ರುದ್ರಾರಾಧ್ಯ, ಟ್ರಸ್ಟ್‌ ಮುಖ್ಯಸ್ಥ ರುದ್ರೇಗೌಡ, ಗಿರಿಯಾಪುರದ ನಿವೃತ್ತ ಶಿಕ್ಷಕ ವಿರೂಪಾಕ್ಷಪ್ಪ, ಶವಾದ್ವೈತ ತತ್ವ ಪ್ರಚಾರ ಕೇಂದ್ರದ ಗುರುಶಾಂತಪ್ಪ, ವಕೀಲ ಟಿ. ಚಂದ್ರೇಗೌಡ, ಮಂಗೋಟೆ ರುದ್ರೇಶ್‌, ಪ್ರಥಮ ದರ್ಜೆ ಗುತ್ತಿಗೆದಾರ ರಂಗನಾಥ್‌ ಗಿರಿ, ತರಳಬಾಳು ಯುವ ವೇದಿಕೆ ಅಧ್ಯಕ್ಷ ಸಂಜೀವ ಕುಮಾರ್‌, ರಂಗೇನಹಳ್ಳಿ ಅಡಕೆ ಬೆಳೆಗಾರರಾದ ಓಂಕಾರಸ್ವಾಮಿ ಮತ್ತಿತರರು ಇದ್ದರು.

ಸಂಗೀತ ವಿದ್ವಾನ್‌ ಮಾಳೇನಹಳ್ಳಿಯ ಎಂ.ವಿ. ವೀರಪ್ಪ ಪ್ರಾರ್ಥಿಸಿದರು. ಕವಿತಾ ಶೇಖರ್‌ ಸ್ವಾಗತಿಸಿದರು. ಬಾರಂದೂರು ಪ್ರಕಾಶ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next