ಶಿವಮೊಗ್ಗ : ಹಾವೇರಿಯ ಗುಂಡೇನಹಳ್ಳಿ ಕ್ರಾಸ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ 9 ಮಂದಿಯ ಸಾಮೂಹಿಕ ಅಂತ್ಯಸಂಸ್ಕಾರವನ್ನು ಭದ್ರಾವತಿ ತಾಲೂಕಿನ ಎಮ್ಮೆಹಟ್ಟಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆಸಲಾಯಿತು.
ಗ್ರಾಮದ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದ್ದು, ಸಾವಿರಾರು ಜನರು ಭಾಗಿಯಾಗಿದ್ದರು.ಮೃತ ದೇಹಗಳನ್ನು ಟ್ರ್ಯಾಕ್ಟರ್ ನಲ್ಲಿ ತೆಗೆದುಕೊಂಡು ಬಂದು ಸಾಮೂಹಿಕವಾಗಿ ಸಂಬಂಧಿಕರು ಅಗ್ನಿಸ್ಪರ್ಶ ಮಾಡಿದರು. ಸಾವಿರಾರು ಜನರ ಅಶ್ರು ತರ್ಪಣದ ನಡುವೆ ಮೃತರನ್ನು ನೆನೆದು ಸಂಬಂಧಿಕರು ಗೋಳಿಟ್ಟರು.
ಅಂತ್ಯಸಂಸ್ಕಾರ ದಲ್ಲಿ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ ಪಾಲ್ಗೊಂಡು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ತಲಾ 50 ಸಾವಿರ ನೆರವು ನೀಡಿದರು.
ಮೃತಪಟ್ಟಿದ್ದ ಆದರ್ಶ್, ವಿಶಾಲಾಕ್ಷಿ, ನಾಗೇಶ್ ರಾವ್, ಸುಭದ್ರಾ ಬಾಯಿ, ಮಾನಸಾ, ರೂಪಾ ಬಾಯಿ, ಭಾಗ್ಯಬಾಯಿ, ಅರುಣ್ ಕುಮಾರ್, ಮಂಜುಳಾ ಮೃತದೇಹಗಳನ್ನು 4 ಆಂಬುಲೆನ್ಸ್ ಗಳಲ್ಲಿ ಹುಟ್ಟೂರಿಗೆ ತರಲಾಯಿತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮೃತದೇಹಗಳನ್ನು ಇರಿಸಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಶಾಮಿಯಾನ, ಟೇಬಲ್, ವಿದ್ಯುತ್ ವ್ಯವಸ್ಥೆಯನ್ನು ಗ್ರಾಮಸ್ಥರು ಮಾಡಿದ್ದರು. ಅಂತಿಮ ದರ್ಶನವನ್ನು ಸಾವಿರಾರು ಜನ ಪಡೆದುಕೊಂಡರು.
ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಹಿಂದಿನಿಂದ ಟಿಟಿ ವಾಹನ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ 13 ಜನರು ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಪೂನಾ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಸುಕಿನ ವೇಳೆ ನಡೆದಿತ್ತು. ಮೂವರು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.