Advertisement

Bhadra Upper Project; ಬಜೆಟ್ ನಲ್ಲಿ ಘೋಷಿಸಿದರೂ ಒಂದು ರೂಪಾಯಿಯೂ ಕೊಟ್ಟಿಲ್ಲ:ಸಿದ್ದರಾಮಯ್ಯ

02:28 PM Feb 09, 2024 | Team Udayavani |

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ 2022-23ನೇ ಸಾಲಿನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ 5300 ಕೋಟಿ ರೂ. ಘೋಷಣೆ ಮಾಡಿದ್ದಾರೆ. ಇದು ಹೇಳಿಕೆ ಅಲ್ಲ. ಬಜೆಟ್. ಆದರೆ, ಈವರೆಗೆ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ಮತ್ತೆ ಇವರು ಪ್ರತಿನಿಧಿಸಿರುವುದು ಕರ್ನಾಟಕವನ್ನು. ಕನ್ನಡಿಗರಾಗಿ ನಿಮಗೆಲ್ಲಾ ಕೋಪ ಬರುವುದಿಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

Advertisement

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಭಗೀರಥ ಮಠಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆಗೆ 8 ಸಾವಿರ ಕೋಟಿ ರೂ. ವೆಚ್ಚವಾಗಿದೆ. ನಾವು 6 ಸಾವಿರ ಕೋಟಿ ಕೊಟ್ಟಿದ್ದೇವೆ ಎಂದರು.

ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್, ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ 5300 ಕೋಟಿ ರೂ. ಬಿಡಗಡೆಗೆ ಒತ್ತಾಯ ಮಾಡಿದ್ದಾರೆ. ಆದರೂ, ಕೊಟ್ಟಿಲ್ಲ. ಕರ್ನಾಟಕವನ್ನು ಪ್ರತಿನಿಧಿಸಿ ರಾಜ್ಯಸಭೆಗೆ ಹೋದವರಿಗೆ ಇಷ್ಟೂ ಜವಾಬ್ದಾರಿ ಬೇಡವೇ ಎಂದು ಪ್ರಶ್ನಿಸಿದರು.

15ನೇ ಹಣಕಾಸು ಯೋಜನೆಯಲ್ಲಿ ವಿಶೇಷ ಅನುದಾನವಾಗಿ 11495 ಕೋಟಿ ರೂ. ಕೊಡಬೇಕಾಗಿತ್ತು. ಅದನ್ನೂ ಕೊಟ್ಟಿಲ್ಲ. ಇದು ಅನ್ಯಾಯ ಅಲ್ಲವೇ. ಬಸವರಾಜ ಬೊಮ್ಮಾಯಿ ಮಂಡಿಸಿದ್ದ ಕೊನೆಯ ಬಜೆಟ್‌ನಲ್ಲಿ ಕೂಡಾ ನಿರ್ಮಲಾ ಸೀತಾರಾಮನ್ ಹೇಳಿದ್ದನ್ನು ಉಲ್ಲೇಖಿಸಿದ್ದಾರೆ. ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡುತ್ತೇವೆ ಎಂದು ಹೇಳಿದ್ದಾರೆ ಎಂದು ಪ್ರಸ್ತಾಪಿಸಿದರು.

ಕೇಂದ್ರದಿಂದ ರಾಜ್ಯಕ್ಕೆ ಬರುವ ಅನುದಾನದ ವಿಚಾರದಲ್ಲಿ ಅನ್ಯಾಯ ಆಗಿರುವುದು ನಿಜ. ಆದರೆ, ಕೇರಳ ಮಾದರಿಯಲ್ಲಿ ಸುಪ್ರೀಂ ಕೋರ್ಟ್ ಗೆ ಹೋಗುವ ಆಲೋಚನೆ ಮಾಡಿಲ್ಲ. 100 ರೂ. ತೆರಿಗೆ ವಸೂಲಿ ಮಾಡಿದರೆ 12-13 ರೂ. ಮಾತ್ರ ನಮಗೆ ಬರುತ್ತಿದೆ. ಉಳಿದ ಎಲ್ಲ ಹಣ ಕೇಂದ್ರ ಸರ್ಕಾರಕ್ಕೆ ಹೋಗುತ್ತಿದೆ ಎಂದರು.

Advertisement

ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ನಮ್ಮ ರಾಜ್ಯದ ತೆರಿಗೆ ವಸೂಲು ಮಾಡಬೇಡಿ ಎನ್ನುತ್ತಿದ್ದರು. ಆದರೆ, ಅದೇ ನರೇಂದ್ರ ಮೋದಿ ಈಗ ನಾವು ಅನುದಾನ ಕೇಳಿದಾಗ ದೇಶ ವಿಭಜನೆ ಮಾಡಲು ಹೊರಟಿದ್ದಾರೆ ಎನ್ನುತ್ತಿದ್ದಾರೆ. ಇವರನ್ನು ಏನಂತ ಕರೆಯಬೇಕು ಎಂದು ಪ್ರಶ್ನಿಸಿದರು.

ಈಶ್ವರಪ್ಪ ಮೇಲೆ ಕಾನೂನಾತ್ಮಕ ಕ್ರಮ: ದೇಶ ವಿಭಜನೆ ಮಾತನಾಡಿದವರಿಗೆ ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ಎನ್ನುವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಕಡಿ, ಬಡಿ, ಕೊಲ್ಲು ಈ ಭಾಷೆ ಬಿಟ್ಟು ಬೇರೆ ಗೊತ್ತಿಲ್ಲ. ಆರೆಸ್ಸೆಸ್ಸಿನ ತರಬೇತಿ ಆಗಿದೆ ಎನ್ನುತ್ತಾರೆ. ಅವರ ಮೇಲೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಡಿ.ಕೆ.ಸುರೇಶ್‌ಗೆ ಗುಂಡಿಕ್ಕಿ ಕೊಲ್ಲಿ ಎನ್ನುವುದು ರಾಜಕೀಯ ಪಕ್ಷದವರು ಹೇಳುವ ಮಾತೇ, ಇವರನ್ನೆಲ್ಲಾ ರಾಜಕೀಯ ಧುರೀಣರು ಎಂದು ಕರೆಯುತ್ತೀರಾ, ಇದಾ ಆರೆಸ್ಸೆಸ್ಸಿನಲ್ಲಿ ನೀಡಿರುವ ತರಬೇತಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರದಲ್ಲೂ ಅಧಿಕಾರಿಗಳು 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದರೆ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ನಾಗಮೋಹನ್ ದಾಸ್ ಆಯೋಗಕ್ಕೆ ದಾಖಲೆ ಸಮೇತ ದೂರು ನೀಡಲಿ. ಈ ಆಯೋಗವನ್ನು ಈ ಕಾರಣಕ್ಕಾಗಿಯೇ ರಚಿಸಲಾಗಿದೆ ಎಂದು ಸಿಎಂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next