Advertisement

ಕಾಲಮಿತಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣ: ಸಿಎಂ ಬೊಮ್ಮಾಯಿ

06:32 PM Mar 19, 2023 | Team Udayavani |

ಹೊಳಲ್ಕೆರೆ: ಮಧ್ಯ ಕರ್ನಾಟಕದ ಬರದ ನಾಡನ್ನು ಹಸಿರಾಗಿಸಲು ಭದ್ರಾ ಮೇಲ್ದಂಡೆ ಯೋಜನೆಯನ್ನು ಶಂಕುಸ್ಥಾಪನೆ ಮಾಡಿದ್ದು ನಾವೇ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡುತ್ತಿರುವುದು ನಾವೇ, ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿ.ಎಸ್. ಯಡಿಯೂರಪ್ಪ ಹಾಗೂ ನಾವೇ ಆಗಮಿಸಿ ಉದ್ಘಾಟನೆಯನ್ನು ಕೂಡ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಹೊಳಲ್ಕೆರೆ ಪಟ್ಟಣದಲ್ಲಿ ಭಾನುವಾರ ಹೊಳೆಲ್ಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಫಲಾನುಭವಿಗಳ ಸೌಲಭ್ಯ ಮತ್ತು ಸಲಕರಣೆಗಳ ವಿತರಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ವೇಳೆ, ನಾನು ಜಲಸಂಪನ್ಮೂಲ ಸಚಿವನಾಗಿದ್ದ ಸಂದರ್ಭದಲ್ಲಿ, ಅವರು ಕೈಗೊಂಡ ದಿಟ್ಟ ನಿಲುವಿನಿಂದಾಗಿ, ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಭದ್ರಾ ಮೇಲ್ದಂಡೆ ಯೋಜನೆ ರೂಪಿಸಿ, ಕಾಮಗಾರಿ ಆರಂಭಿಸಲಾಯಿತು. ಕೇಂದ್ರ ಸರ್ಕಾರ ಈ ಯೋಜನೆಗೆ ರೂ.5300 ಕೋಟಿಗಳ ಅನುದಾನವನ್ನು ಬಜೆಟ್‍ನಲ್ಲಿ ಮೀಸಲಿರಿಸಿದೆ. ಮಧ್ಯ ಕರ್ನಾಟಕದ ಜನರ ಭೂಮಿಗೆ ನೀರು ಕೊಟ್ಟು, ಬರದ ಭೂಮಿಯನ್ನು ಹಸಿರಾಗಿಸುವ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತಿದ್ದು, ಯೋಜನೆಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲಾಗುವುದು. ಬರದ ನಾಡನ್ನು ಹಸಿರಾಗಿಸಲು ಭದ್ರಾ ಮೇಲ್ದಂಡೆ ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದು ನಾವೇ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡುತ್ತಿರುವುದು ನಾವೇ, ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿ.ಎಸ್. ಯಡಿಯೂರಪ್ಪ ಹಾಗೂ ನಾವೇ ಆಗಮಿಸಿ ಉದ್ಘಾಟನೆಯನ್ನು ಕೂಡ ಮಾಡುತ್ತೇವೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹೊಳಲ್ಕರೆ ಪಟ್ಟಣದಲ್ಲಿ ಅಭಿವೃದ್ಧಿಯ ಹೊಳೆ ಹರಿದಿದೆ. ಈ ಕ್ಷೇತ್ರದಲ್ಲಿ ಕಳೆದ ನಾಲ್ಕೂ ಮುಕ್ಕಾಲು ವರ್ಷದಲ್ಲಿ ರೂ.4116 ಕೋಟಿ ವೆಚ್ಚದಲ್ಲಿ ವಿವಿದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಮಾಡಲಾಗಿದೆ. ಎಂ.ಚಂದ್ರಪ್ಪ ಜನೋಪಯೋಗಿ ಶಾಸಕ, ದಣಿವರಿಯದೆ ಕೆಲಸ ಮಾಡಿದ್ದಾರೆ. ನಾಲ್ಕು ವರ್ಷದಲ್ಲಿ ಹೊಳಲ್ಕೆರೆ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಕಿರಿದಾದ ರಸ್ತೆಗಳು ಅಭಿವೃದ್ಧಿಯಾಗಿವೆ. ಸರ್ಕಾರಿ ಕಟ್ಟಡಗಳು ಆಧುನಿಕ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಜಿಲ್ಲಾ ಆಸ್ಪತ್ರೆಗಿಂತಲೂ ಉತ್ತಮವಾದ ತಾಲೂಕು ಆಸ್ಪತ್ರೆ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಪುರಸಭೆ ಕಟ್ಟಡ, ಕ್ಷೇತ್ರದ ಎಲ್ಲೆಡೆ ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದಾರೆ ಎಂದರು.

ರಾಜ್ಯದ 05 ಲಕ್ಷ ಸ್ತ್ರೀಸಾಮಥ್ರ್ಯ ಸಂಘಗಳಿಗೆ ಸಹಾಯಧನ ನೀಡಿ, ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಯೋಜನೆ ಈಗಾಗಲೆ ಅನುಷ್ಠಾನಗೊಂಡಿದ್ದು, ಮಾ. 23 ರಂದು ಯುವಕರ ಸಂಘಗಳಿಗೆ ಸುತ್ತುನಿಧಿಯನ್ನು ನೀಡಿ, ಸುಮಾರು 05 ಲಕ್ಷ ಯುವಕರಿಗೆ ಉದ್ಯೋಗ ಕಲ್ಪಿಸುವ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದರು.

Advertisement

ಸರ್ಕಾರದಿಂದ 10 ಹೆಚ್.ಪಿ. ವರೆಗೆ ರೈತರಿಗೆ ಉಚಿತ ವಿದ್ಯುತ್, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ರೂ.6 ಸಾವಿರ ಸಹಾಯಧನಕ್ಕೆ ರಾಜ್ಯ ಸರ್ಕಾರದಿಂದ 4 ಸಾವಿರ ಅನುದಾನ ನೀಡಿ ರೂ.10 ಸಾವಿರ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ. ಸ್ತ್ರೀ ಸಾಮಥ್ರ್ಯ ಯೋಜನೆ ಅಡಿ ಸ್ವ ಸಹಾಯ ಸಂಘಗಳಿಗೆ ಸಹಾಯಧನ, ಉಚಿತವಾಗಿ ಪಿ.ಯು.ಸಿ, ಪದವಿ ಶಿಕ್ಷಣ, ರೈತ ವಿದ್ಯಾನಿಧಿ ಯೋಜನೆಯನ್ನು ಜಾರಿ ಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಸರ್ಕಾರದಿಂದ 5 ಲಕ್ಷ ಯುವಕರಿಗೆ ಉದ್ಯೋಗ ಅವಕಾಶ ನೀಡುವ ಯೋಜನೆ ರೂಪಿಸಲಾಗಿದೆ. ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ದವಾಗಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೀಸಲಾತಿಯನ್ನು ಹೆಚ್ಚಿಸಲಾಗಿದೆ. ದುಡಿಯುವ ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್, ರೈತರಿಗೆ ಜೀವವಿಮೆ, ಲಂಬಾಣಿ(ಬಂಜಾರ), ಭೋವಿ ಸೇರಿದಂತೆ ಅನೇಕ ಪರಿಶಿಷ್ಟ ವರ್ಗದ ನಿಗಮಗಳನ್ನು ಸ್ಥಾಪಿಸಲಾಗಿದೆ. ಹಿಂದುಳಿದ ವರ್ಗಗಳ ಏಳಿಗೆಗಾಗಿ ಬಜೆಟ್‍ನಲ್ಲಿ ಅಧಿಕ ಹಣ ಮೀಸಲಿಡಲಾಗಿದೆ ಎಂದರು.

ಸಾರ್ವಜನಿಕರ ಅಭಿವೃದ್ಧಿಗಾಗಿ ಕೆಲಸ

ಸರ್ಕಾರ ಪ್ರತಿಯೊಂದು ವಿಚಾರದಲ್ಲಿ ಸಾರ್ವಜನಿಕರ ಅಭಿವೃದ್ಧಿಗಾಗಿ ಕೆಲಸ ಮಾಡಿದೆ. ಈ ಹಿಂದೆ ಬರಗಾಲದಿಂದ ತಾಲೂಕು ನೀರಿನ ಸಮಸ್ಯೆಗೆ ಸಿಲುಕಿತ್ತು. ರೈತರ ತೋಟಗಳು ಒಣಗಿ ಹೋಗುತ್ತಿದ್ದವು. ಸರ್ಕಾರ ಕೆರೆ ಕಟ್ಟೆಗಳು, ಚಕ್ ಡ್ಯಾಮ್, ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಾಣದಿಂದ ಕ್ಷೇತ್ರದಲ್ಲಿ ಜಲ ಸಮೃದ್ದಿಯಾಗಿದೆ. ಅಂರ್ತಜಲ ಮಟ್ಟದ ಹೆಚ್ಚಳದಿಂದ ರೈತರ ಬವಣೆ ದೂರವಾಗಿದೆ. ಹಿಂದೆ ರೈತರಿಗೆ 1 ತಾಸು ವಿದ್ಯುತ್ ನೀಡಲಾಗುತ್ತಿತ್ತು. ಈಗ 5 ರಿಂದ 6 ತಾಸು ವಿದ್ಯುತ್ ನೀಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಂ.ಚಂದ್ರಪ್ಪ ಪ್ರಾಸ್ತಾವಿಕವಾಗಿ ತಿಳಿಸಿದ್ದಾರೆ.

ರೈತರ ತೋಟಗಳಿಗೆ ನೀರು ಲಭಿಸುತ್ತಿದೆ. ಮಹಿಳೆಯರು ಸರತಿ ಸಾಲಿನಲ್ಲಿ ಕೊಡ ಹಿಡಿದು ಕುಡಿಯುವ ನೀರಿಗಾಗಿ ಕಾಯುತ್ತಿದ್ದರು. ಇಂದು ಈ ಚಿತ್ರಣ ಬದಲಾಗಿದೆ. ಸರ್ಕಾರ ರೂ.367 ಕೋಟಿ ಕುಡಿಯುವ ನೀರಿಗೆ ಹಾಗೂ ಜಲಜೀವನ್ ಮಿಷನ್ ಅಡಿ 180 ಕೋಟಿ ಅನುದಾನ ನೀಡಿದೆ. ರೂ.544 ಕೋಟಿ ವೆಚ್ಚದಲ್ಲಿ ರಸ್ತೆಗಳು, ರೂ. 220 ಕೋಟಿ ವೆಚ್ಚದಲ್ಲಿ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕ್ಷೇತ್ರದಲ್ಲಿ 9 ಸಾವಿರ ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸರ್ಕಾರ ಅಸ್ತಿತ್ವದಲ್ಲಿ ಇರದ ಸೊಸೈಟಿಗಳ ಹೆಸರಿನಲ್ಲಿರುವ ಭೂಮಿಯನ್ನು ಹಿಂಪಡೆದು ಗೇಣಿದಾರಿಗೆ ನೀಡಲು ಹಾಗೂ ಹೊಳಲ್ಕೆರೆ ತಾಲ್ಲೂಕಿನಲ್ಲಿ 1000 ಎಕರೆಯಲ್ಲಿ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪನೆ ಮಾಡಲು ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಪರಿಷತ್ ಸದಸ್ಯ ರವಿಕುಮಾರ್ ಅವರು ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಪುರಸಭೆ ಅಧ್ಯಕ್ಷ ಆರ್.ಎ. ಅಶೋಕ್, ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ, ಜಿ.ಪಂ. ಸಿಇಓ ಎಂ.ಎಸ್.ದಿವಾಕರ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್, ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಸೇರಿದಂತೆ ಮತ್ತಿತರರ ಗಣ್ಯಮಾನ್ಯರು ಇದ್ದರು. ತಹಶಿಲ್ದಾರ್ ನಾಗರಾಜ್ ಸ್ವಾಗತಿಸಿದರು.

ಸಮಾರಂಭಕ್ಕೂ ಮುನ್ನ ಹೊಳಲ್ಕೆರೆ ಬಳಿಯ ಕುಡಿನೀರಕಟ್ಟೆ ಸಮೀಪದ ಹೆಲಿಪ್ಯಾಡ್‍ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಅಲ್ಲದೆ ಹೊಳಲ್ಕೆರೆ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪುರಸಭೆ ಕಟ್ಟಡ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಕಟ್ಟಡದ ಉದ್ಘಾಟನೆ ಅಲ್ಲದೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 54 ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಸಮಾರಂಭ ಜರುಗಿದ ವೇದಿಕೆಯ ಬಳಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಕಲ್ಪಿಸಲಾಗಿರುವ ಉಚಿತ ಬಸ್‍ಗಳ ಉದ್ಘಾಟನೆ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next