Advertisement

ಮಲಪ್ರಭೆ ಬದುಕು ಹಿಂಡಿ ಹಿಪ್ಪಿ ಮಾಡ್ಯಾಳ್‌!

01:00 PM Aug 29, 2019 | Naveen |

ಶಶಿಧರ ವಸ್ತ್ರದ
ಬಾದಾಮಿ:
ನಮ್ಮೂರಾಗ್‌ ನೀರು ಹೊಕ್ಕು ಹತ್ತ ವರ್ಷ ಆಗಿತ್ರಿ. ಅವಾಗ್ಲೇ ಬಾಳ್‌ ತ್ರಾಸ್‌ ಪಟ್ಟಿದ್ವಿ. ಮತ್ತೆಂದೂ ಹಿಂತಾ ನೀರ್‌ ಊರಾಗ್‌ ಬರಬಾರ್ಧು ಎಂದು ದೇವರಿಗೆ ಕೈ ಮುಗಿದು ಕೇಳಿದ್ವಿ. 10 ವರ್ಷ ಆದ ಮ್ಯಾಲ್ ಮತ್ತ ಬಂದೈತ್ರಿ. ಮಲಪ್ರಭಾ ನದಿ ಮೂರು ಸಾರಿ, ನಮ್ಮ ಬದುಕು ಹಿಂಡಿ ಹಿಪ್ಪಿ ಮಾಡೈತ್ರಿ. ಬಡವರ ಸಿಟ್ಟ ದವಡಿ ಮ್ಯಾಗ್‌ ಅಂದಂಗ, ಮಲಪ್ರಭಾ ನದಿ ಸಿಟ್ಟ, ನಮ್ಮಂತವರ ಬಡವರ ಮ್ಯಾಗೇ ತೋರಿಸೈತ್ರಿ..

Advertisement

ತಾಲೂಕಿನ ನಾಗರಾಳ ಎಸ್‌.ಬಿ. ಗ್ರಾಮದ ಕಸ್ತೂರೆವ್ವ ಹನಂತಪ್ಪ ಪೂಜಾರಿ, ಶಿವಾನಂದ ಮಹಾಲಿಂಗಯ್ಯ ರಟ್ಟಿಹಳ್ಳಿಮಠ ಹಾಗೂ ಮಂಜುನಾಥ ವಿಠ್ಠಲಪ್ಪ ಕುರಿ ಪ್ರವಾಹದ ವೇಳೆ ಅನುಭವಿಸಿದ ಸಂಕಷ್ಟ ಹೇಳಿಕೊಂಡು ಕಣ್ಣೀರಾದರು. ಮೂರು ದಿನಗಳ ಕಾಲ ಗಿಡದ ಬುಡದಲ್ಲಿ ಮಕ್ಕಳು, ಕುಟುಂಬದವರೊಂದಿಗೆ ವಾಸವಾಗಿದ್ದರು. 2007, 2009 ಹಾಗೂ ಈಗ 2019ರಲ್ಲಿ ಮೂರು ಬಾರಿ ಇವರೆಲ್ಲ ಪ್ರವಾಹಕ್ಕೆ ತುತ್ತಾದವರು.

ನಲುಗಿದ ಮಾಜಿ ಶಾಸಕರು ಮನೆ: ಪ್ರವಾಹಕ್ಕೆ ತತ್ತರಿಸಿದ ಮಲಪ್ರಭೆ ತೀರದ ಗ್ರಾಮಗಳ ಸಂತ್ರಸ್ತರು ಮನೆ, ಬದುಕಿಗಾಗಿ ಕೂಡಿಟ್ಟ ಎಲ್ಲ ಸಾಮಗ್ರಿ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಮನೆ ಬಿದ್ದಿರುವುದರಿಂದ ಕೆಲವರು ಸಂಬಂಧಿಕರ ಮನೆಯಲ್ಲಿ ಆಸರೆ ಪಡೆದಿದ್ದಾರೆ. ಇನ್ನೂ ಕೆಲವರು ಶಾಲೆ-ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದಾರೆ. ಭೀಕರ ಪ್ರವಾಹಕ್ಕೆ ಢಾಣಕಶಿರೂರಿನ (ಗುಳೇದಗುಡ್ಡದ ಮಾಜಿ ಶಾಸಕ ಬಿ.ಎಂ. ಹೊರಕೇರಿ ಅವರ ಮನೆ)ಮಹದಾಯಿ ಹೋರಾಟದ ರೂವಾರಿ ಬಿ.ಎಂ. ಹೊರಕೇರಿ ಅವರ ಮನೆಯೂ ಬಿದ್ದಿದೆ. ಅವರ ಪುತ್ರ, ಬಿದ್ದ ಮನೆಗಳ ಅವಶೇಷಗಳಡಿ ಸಿಲುಕಿದ ಸಾಮಗ್ರಿ ಕಂಡು ಕಣ್ಣೀರಾಗ್ತಿದ್ದಾರೆ. ಮಹದಾಯಿ ಹೋರಾಟದ ರೂವಾರಿ, ಗುಳೇದಗುಡ್ಡದ ಮಾಜಿ ಶಾಸಕ ದಿ. ಬಿ.ಎಂ.ಹೊರಕೇರಿ ಇದೇ ಗ್ರಾಮದವರು. ಇವರು ಹುಟ್ಟಿ ಬೆಳೆದ ಮನೆಯೀಗ ನೆರೆಗೆ ಕುಸಿದು ಬಿದ್ದಿದೆ. ಬಿ.ಎಂ.ಹೊರಕೇರಿ ಪುತ್ರ ಶಿವಪ್ಪ ಬಿದ್ದಿರೋ ಮನೆ ನೋಡಿ, ಇಂತಹ ಮನೆ ಹ್ಯಾಂಗ್‌ ಬಿಟ್ಟು ಹೋಗೋಣ. ಮಡಗಿ ಮನೆಯೇ ಬಿದ್ದು ಹೋಗಿದೆ. ನಮ್ಮಪ್ಪ ಇದೇ ಮನೆಯಲ್ಲಿ ಹುಟ್ಟಿ ಬೆಳೆದವ್ರು ಅಂತ ಕಣೀ¡ರು ಹಾಕಿದರು.

ರಾತ್ರೋರಾತ್ರಿ ಮನಿ ಬಿಟ್ವಿ: ನಮ್ಮೂರ್‌ ತಲಾಟಿ ಮೊದ್ಲ ಹೇಳಿದ್ರು. ಆದರೆ ಇಷ್ಟೇನು ನೀರು ಬರತೈತಿ ಅಂತ್‌ ಬಾಳ್‌ ವಿಚಾರ ಮಾಡ್ಲಾರ್ದೆ ಮನೆಯಲ್ಲೇ ಮಲಗಿದ್ವಿ. ರಾತ್ರಿ ಏಕದಮ್‌ ಮನ್ಯಾಗ ನೀರು ಹೊಕ್ಕ ಬಿಟ್ತು. ಜೀವಾ ಕೈಯಾಗ ಹಿಡಕೊಂಡ, ಉಟ್ಟ ಅರಿಬಿ ಮ್ಯಾಲ್ ಹೊರಗ್‌ ಓಡಿ ಬಂದ್ವಿ ಎಂದು ಢಾಣಕಶಿರೂರಿನ ಸಾವಿತ್ರೆವ್ವ ಹಡಪದ ನಡುಗುವ ಧ್ವನಿಯಲ್ಲಿ ಹೇಳುತ್ತಿದ್ದರೆ ಪ್ರವಾಹ ಚಿತ್ರಣದ ಅನುಭವಕ್ಕೆ ಬರುತ್ತಿತ್ತು.

ಮಲಪ್ರಭಾ ನದಿ ಪ್ರವಾಹ ಈ ಬಾರಿ ತಾಲೂಕಿನ 43 ಗ್ರಾಮಗಳ ಜನರ ಬದುಕು ಹಿಂಡಿ ಹಿಪ್ಪಿ ಮಾಡಿದೆ.

Advertisement

ನೆರೆ ನಿಂತರೂ ನಿಲ್ಲದ ಕಣ್ಣೀರು: ಮಲಪ್ರಭೆ ನೆರೆ ನಿಂತ್ರೂ ಸಂತ್ರಸ್ತರ ನೆರೆ ನೋವಿನ ಕಣ್ಣೇರು ನಿಲ್ಲುತ್ತಿಲ್ಲ. ಹುಟ್ಟಿ ಬೆಳೆದ ಮನೆ ಗಳು ಪ್ರವಾಹಕ್ಕೆ ತುತ್ತಾಗಿವೆ. ಅತ್ತ ಶಾಶ್ವತ ಸೂರಿನ ಚಿಂತೆ ನೆರೆ ಸಂತ್ರಸ್ತರಿಗೆ ಕಾಡುತ್ತಿದೆ. ಮನೆ ಮಠ ಕಳೆದುಕೊಂಡು ಬದುಕು ಮೂರಾಬಟ್ಟೆಯಾದವರ ಕಣ್ಣೇರಿನ ಕಥೆ ಹೇಳ ತೀರದಾಗಿದೆ.

ನೆರೆಯ ನಂತರ ಪರಿಸ್ಥಿತಿ ನೋಡಿದರೆ, ನಮ್‌ ಬದುಕು ಇನ್ಯಾವಾಗ ಸುಧಾರಿಸುತ್ತೆ ಅನ್ನುತ್ತಿದ್ದಾರೆ ಸಂತ್ರಸ್ತರು.ತಾಲೂಕಿನ ಢಾಣಕಶಿರೂರ ಗ್ರಾಮ ಮಲಪ್ರಭೆ ನದಿ ಒಡಲಲ್ಲಿದೆ. 324 ಮನೆಗಳಿರೋ ಗ್ರಾಮದಲ್ಲಿ 200ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿ, 170 ಮನೆಗಳು ಪ್ರವಾಹಕ್ಕೆ ಬಿದ್ದಿವೆ. ಇಲ್ಲಿನ ಸಾವತ್ರೆವ್ವ ಹಡಪದ ಅವರ ನೋವು ಕೇಳಿದ್ರೆ ಎಂಥವರಿಗಾದ್ರೂ ಮರುಕ ಬರುತ್ತದೆ..ಇದ್ದ ಮನೆ ನೆರೆಗೆ ಬಿದ್ದು ಹೋಗಿದೆ. ಅಳುದುಳಿದ ವಸ್ತುಗಳನ್ನು ಗುಡಿಯೊಳಗೆ ಇಟ್ಟಿದ್ವಿ. ಈಗ ನೆರೆ ನಿಂತಮೇಲೆ ಅತ್ತ ಮನೆ ಬಿದ್ದಿರೋದಕ್ಕೆ ಸಂಬಂಧಿಕರ ಮನೆಯಲ್ಲಿದ್ದೇವೆ ಎಂದು ಗೋಳಿಡುತ್ತಾರೆ.

ಉಪ ಜೀವನಕ್ಕಿದ್ದ ಅಂಗಡಿ ಹೋಯ್ತು: ಬಟ್ಟೆ ಅಂಗಡಿ ಹಾಕಿಕೊಂಡು ಉಪಜೀವನ ಮಾಡ್ತಿದ್ವಿ.ಪ್ರವಾಹಕ್ಕೆ ಮನೆ ಬಿದ್ದಿರೋದಲ್ದೆ ಬಟ್ಟೆ ಅಂಗಡಿಯಲ್ಲಿನ ಸಾಮಾಗ್ರಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ನಮ್‌ ಬದುಕು‌್ನು ಪ್ರವಾಹ ಬೀದಿಗೆ ತಂದಿದೆ ಅಂತಿದ್ದಾರೆ ಢಾಣಕಶಿರೂರಿನ ಸಿದ್ದಲಿಂಗಯ್ಯ ಹಿರೇಮಠ.

ಚೊಳಚಗುಡ್ಡ ಗ್ರಾಮದ ಅನಾಥೆ ನಾಗವ್ವಳ ಗೋಳು ಹೇಳತೀರದು. ಈಚೆಗೆ ತಾಯಿ ಕಳೆದುಕೊಂಡೇ, ಈಗ ಪ್ರವಾಹದಿಂದ ಮನೆ ಕುಸಿದು ಬಿದ್ದಿದೆ. ಪ್ರವಾಹದಿಂದ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಕಳೆದ ಹದಿನೈದು ದಿನಗಳಿಂದ ಕೂಲಿ ಕೆಲ್ಸವೂ ಇಲ್ಲ. ನಮಗೆ ಪರಿಹಾರವೂ ಸರಿಯಾಗಿ ಸಿಗ್ತಿಲ್ಲಂತ ಕಣೀ¡ರು ಹಾಕುತ್ತಾರೆ. ಇನ್ನು ಚೊಳಚಗುಡ್ಡದ ಅಂಧ ದಂಪತಿ ಗುಂಡಪ್ಪ, ನಿರ್ಮಲಾ, ಕೈಗೆ ಬರುತ್ತಿದ್ದ ಬೆಳೆ ಪ್ರವಾಹಕ್ಕೆ ತುತ್ತಾಗುವ ಮೂಲಕ ಅಂಧ ದಂಪತಿಗಳ ಬದುಕೇ ಮೂರಾಬಟ್ಟೆ ಆಗಿದೆ.

ಹಿಂದೆಂದು ಕಂಡಿಯರದ ಮಲಪ್ರಭೆ ಪ್ರವಾಹಕ್ಕೆ ಬಡಪಾಯಿಗಳ ಜೀವನ ಹಿಂಡಿ ಹಿಪ್ಪಿಯಾಗಿದೆ. ಸರ್ಕಾರ ಪ್ರವಾಹ ಪೀಡಿತ ಗ್ರಾಮ ಸ್ಥಳಾಂತರಿಸಿ ಸೂಕ್ತ ಸೂರು ಒದಗಿಸಬೇಕಿದೆ. ಅಂದಾಗ ಮಾತ್ರ ನೊಂದವರ ಕಣ್ಣೇರು ಒರಿಸಿದಂತಾಗುತ್ತೆ.

Advertisement

Udayavani is now on Telegram. Click here to join our channel and stay updated with the latest news.

Next