Advertisement

ಗೆದ್ದು ಅಗ್ರ ಸ್ಥಾನಕ್ಕೇರಿದ ಬಿಎಫ್ಸಿ

01:03 PM Jan 08, 2018 | Team Udayavani |

ಬೆಂಗಳೂರು: ನಾಯಕ ಸುನೀಲ್‌ ಚೆಟ್ರಿ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ (ಐಎಸ್‌ಎಲ್‌) ಬೆಂಗಳೂರು ಎಫ್ಸಿ ತಂಡ 1-0 ಗೋಲಿನಿಂದ ಅಟ್ಲೆಟಿಕೊ ಡಿ ಕೋಲ್ಕತಾ ತಂಡವನ್ನು ಸೋಲಿಸಿದೆ. ಈ ಮೂಲಕ ಬೆಂಗಳೂರು ತಂಡ ಕೂಟದಲ್ಲಿ ಒಟ್ಟಾರೆ 18 ಅಂಕ
ಸಂಪಾದಿಸಿ ಪುನಃ ಅಗ್ರ ಸ್ಥಾನಕ್ಕೇರಿದೆ. 

Advertisement

ಭಾನುವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ತವರಿನ ಅಭಿಮಾನಿಗಳ ಜೈಕಾರದ ನಡುವೆ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ನೀಡಿತು. ಪಂದ್ಯಕ್ಕೂ ಮುನ್ನ ಎರಡೂ ತಂಡಗಳ ಬಲಾಬಲವನ್ನು ನೋಡಿದಾಗ ಬೆಂಗಳೂರು ತಂಡವೇ ಗೆಲ್ಲುವ ಫೇವರಿಟ್‌ ತಂಡವಾಗಿತ್ತು. ನಿರೀಕ್ಷೆಯಂತೆ ಪಂದ್ಯದಲ್ಲಿ ಗೆಲುವು ಸಾಧಿಸುವಲ್ಲಿ ಬೆಂಗಳೂರು ಯಶಸ್ವಿಯಾಗಿದೆ.

ಆರಂಭದಲ್ಲಿಯೇ ತೀವ್ರ ಹೋರಾಟ:ಉಭಯ ತಂಡಗಳ ನಡುವೆ ಪಂದ್ಯದ ಆರಂಭದಲ್ಲಿ ತೀವ್ರ ಹೋರಾಟ ಕಂಡುಬಂತು. ಸುನೀಲ್‌ ಚೆಟ್ರಿ ಪಡೆಯ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವಲ್ಲಿ ಅಟ್ಲೆಟಿಕೊ ಯಶಸ್ವಿಯಾಗಿತ್ತು. ಗೋಲು ಬಾರಿಸಲು ಇರುವ ಕೆಲವು ಅವಕಾಶಗಳನ್ನು ಉಭಯ ತಂಡಗಳು ಕೈಚೆಲ್ಲಿದವು. ಆದರೆ 40ನೇ ನಿಮಿಷದಲ್ಲಿ ಸಿಕ್ಕ ಅವಕಾಶವೊಂದರಲ್ಲಿ ಚೆಟ್ರಿ ಆಕರ್ಷಕವಾಗಿ ಚೆಂಡನ್ನು ಬಲೆಯೊಳಗೆ ಸೇರಿಸಿದರು. ಇದು ಪಂದ್ಯದಲ್ಲಿ ದಾಖಲಾದ ಮೊದಲ ಮತ್ತು ಏಕೈಕ ಗೋಲಾಯಿತು. ಅಂತಿಮವಾಗಿ ಮೊದಲ ಅವಧಿಯ ಅಂತ್ಯದಲ್ಲಿ ಬೆಂಗಳೂರು 1-0 ಮುನ್ನಡೆ ಸಾಧಿಸಿ ಮೇಲುಗೈ ಸಾಧಿಸಿತು.

ವಿಫ‌ಲ ಯತ್ನ: ಮೊದಲನೇ ಅವಧಿಯಲ್ಲಿ ಹಿನ್ನಡೆಯಲ್ಲಿದ್ದ ಅಟ್ಲೆಟಿಕೊ ತಂಡ 2ನೇ ಅವಧಿಯಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಆದರೆ ಬೆಂಗಳೂರು ತಂಡ ಬಲಿಷ್ಠ ರಕ್ಷಣಾ ಪಡೆಯನ್ನು ಹೊಂದಿರುವುದರಿಂದ ಎದುರಾಳಿಗೆ ಒಂದೂ ಗೋಲನ್ನು ಬಿಟ್ಟುಕೊಡಲಿಲ್ಲ. ಅಂತಿಮವಾಗಿ ಬೆಂಗಳೂರು ತಂಡ ಏಕೈಕ ಗೋಲಿನ ನೆರವಿನಿಂದ ಜಯ ದಾಖಲಿಸಿತು. ಮುಂದಿನ ಪಂದ್ಯವನ್ನು  ಬೆಂಗಳೂರು ತಂಡ ಜ.14 ರಂದು ದೆಹಲಿ ತಂಡದ ಸವಾಲನ್ನು ಎದುರಿಸಲಿದೆ.

ಚೆಟ್ರಿ ಪಡೆಗೆ ಅಗ್ರಸ್ಥಾನ: ಈ ಮೂಲಕ ಬೆಂಗಳೂರು ತಂಡ ಕೂಟದಲ್ಲಿ 18 ಅಂಕ ಸಂಪಾದಿಸಿ ಅಗ್ರಸ್ಥಾನಕ್ಕೆ ಪುನಃ ಮರಳಿತು. ಬೆಂಗಳೂರು ತಾನಾಡಿದ 9 ಪಂದ್ಯಗಲ್ಲಿ 6 ಜಯ, 3 ಸೋಲಿನಿಂದ ಒಟ್ಟು 18 ಅಂಕ ಪಡೆದಿದೆ. ಈ ಪಂದ್ಯಕ್ಕೂ ಮುನ್ನ ಬೆಂಗಳೂರು ತಂಡ 15 ಅಂಕ ಸಂಪಾದಿಸಿ ಮೂರನೇ ಸ್ಥಾನದಲ್ಲಿತ್ತು.

Advertisement

ಗೋಲು ದಾಖಲಿಸಲು ಯತ್ನಿಸುತ್ತಿರುವ ಬೆಂಗಳೂರು ಎಫ್ಸಿ ತಂಡದ ನಾಯಕ ಸುನೀಲ್‌ ಚೆಟ್ರಿ ಹಾಗೂ ತಂಡದ ಸಹ ಆಟಗಾರ. 

Advertisement

Udayavani is now on Telegram. Click here to join our channel and stay updated with the latest news.

Next