ಬೆಂಗಳೂರು: ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸಿಕ್ಕಿದೆ ಎಂಬ ವದಂತಿ ಹಬ್ಬಿಸಿ, ಗೊಂದಲ ಮೂಡಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಎಚ್ಚರಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳ ಸಿದ್ಧತೆ ಕುರಿತು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಮತ್ತು ಉಪವಿಭಾಗಗಳ ಖಜಾನಾಧಿಕಾರಿಗಳು ಮತ್ತು ಪಿಯು ಉಪನಿರ್ದೇಶಕರೊಂದಿಗೆ ಶುಕ್ರವಾರ ವಿಡಿಯೋ ಸಂವಾದ ನಡೆಸಿದ ಸಚಿವರು, ಪರೀಕ್ಷೆಗಳು ಸುಲಲಿತವಾಗಿ ಯಾವುದೇ ಗೊಂದಲವಿಲ್ಲದೇ ನಡೆಯುವ ಕುರಿತು ಸೂಚನೆಗಳನ್ನು ನೀಡಿದರು.
ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಯನ್ನು ಈ ವರ್ಷದ್ದೆಂದು ನಂಬಿಸಿ ಸಾಮಾಜಿಕ ಜಾಲತಾಣ ಗಳಲ್ಲಿ ಹರಿಬಿಟ್ಟು ಗೊಂದಲ ಮೂಡಿಸುವವರ ಕುರಿತು ಸೂಕ್ತ ಕ್ರಮಕೈಗೊಳ್ಳುವ ಕುರಿತಂತೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ತಮ್ಮ ಹಂತದಲ್ಲಿ ಸುತ್ತೋಲೆ ಹೊರಡಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರಶ್ನೆ ಪತ್ರಿಕೆ ರವಾನೆ ವಾಹನಗಳನ್ನು ರಾಜ್ಯದ ಯಾವುದೇ ವಾಹನ ತಪಾಸಣಾ ಕೇಂದ್ರಗಳಲ್ಲಿ ಯಾವುದೇ ರೀತಿಯಲ್ಲೂ ತಪಾಸಣೆ ಮಾಡದಂತೆ, ಈಗಾಗಲೇ ಸಂಬಂಧಿಸಿದ ಇಲಾಖೆಗಳಿಗೆ ಮನವಿ ಮಾಡಲಾಗಿದೆ. ಹಾಗೆಯೇ ಆಯಾ ಜಿಲ್ಲೆಗಳಲ್ಲೂ ಅದನ್ನು ಖಚಿತಪಡಿಸಲು ಸಂಬಂಧಿಸಿದವರಿಗೆ ಡಿಸಿ ಮತ್ತು ಎಸ್ಪಿಗಳು ಮಾರ್ಗದರ್ಶನ ನೀಡಬೇಕೆಂದು ಸೂಚಿಸಿದರು.
ಪ್ರಶ್ನೆ ಪತ್ರಿಕೆಗಳನ್ನು ಆಯಾ ತಾಲೂಕು ಮತ್ತು ಜಿಲ್ಲಾ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ರವಾನಿಸಲು ಸೂಚಿಸಲಾದ ನಿಗದಿತ ಮಾರ್ಗಗಳಲ್ಲಿಯೇ ವಾಹನಗಳು ಸಾಗಬೇಕು. ಹಾಗೆಯೇ ಪರೀಕ್ಷಾ ಸಾಮಗ್ರಿ ಗಳು ಪರೀಕ್ಷಾ ಸಮಯಕ್ಕೂ ಮೊದಲೇ ದೊರೆಯುವಂತೆ ಖಚಿತಪಡಿಸಿಕೊಳ್ಳುವುದು ಜಿಲ್ಲಾಡಳಿತ ಮತ್ತು ಅಪರ ಜಿಲ್ಲಾಧಿಕಾರಿ ನೇತೃತ್ವದ ಪರೀಕ್ಷಾ ಪ್ರಶ್ನೆ ಪತ್ರಿಕೆ ಪಾಲನಾ ತಂಡದ ಜವಾಬ್ದಾರಿಯಾಗಿದ್ದು, ಅದನ್ನು ಯಾವುದೇ ವ್ಯತ್ಯಯಕ್ಕೆ ಅವಕಾಶವಿಲ್ಲದಂತೆ ಮಾಡಬೇಕಿದೆ ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರದೊಳಗೆ ಮಾಧ್ಯಮ ಪ್ರತಿನಿಧಿಗಳೂ ಸೇರಿದಂತೆ ಯಾರಿಗೂ ಅವಕಾಶವಿಲ್ಲ. ಕೇವಲ ಗುರುತಿನ ಚೀಟಿಯೊಂದಿಗೆ ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತವಾದ ಸಿಬ್ಬಂದಿ ಮಾತ್ರವೇ ಪರೀಕ್ಷಾ ಕೇಂದ್ರ ಮತ್ತು ಅದರ ಸುತ್ತಮುತ್ತ ಚಲನವಲನಕ್ಕೆ ಅವಕಾಶವಿರುತ್ತದೆ. ಹಾಗೆಯೇ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲ ಜೆರಾಕ್ಸ್ ಕೇಂದ್ರಗಳನ್ನು ಪರೀಕ್ಷೆ ಮುಗಿಯುವರಗೆ ಮುಚ್ಚಿಸಲು ಪೊಲೀಸ್ ಇಲಾಖೆ ಅಗತ್ಯ ಕ್ರಮ ವಹಿಸುವುದು ಸೇರಿದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸಿದರು.
ದಿವ್ಯಾಂಗರಿಗೆ ಪರೀಕ್ಷೆ ಬರೆಯಲು ಒದಗಿಸುವ ಸಹಾಯಕರನ್ನು ಒದಗಿಸುವ ಕುರಿತು ಸ್ಪಷ್ಪ ಮಾರ್ಗದರ್ಶಿ ಸೂತ್ರಗಳನ್ನು ನಿಗದಿಪಡಿಸಲಾಗಿದ್ದು, ಆ ಪ್ರಕಾರವೇ ಸಹಾಯಕರನ್ನು ಒದಗಿಸಬೇಕು. ಪರೀಕ್ಷಾರ್ಥಿ ಪರೀಕ್ಷೆಯ ಕೊನೆ ಬೆಲ್ ಬಾರಿಸುವ ಮೊದಲು ಯಾವುದೇ ಸಮಯದಲ್ಲಿ ಹೋಗುವುದಾದರೆ ಅವರಿಂದ ಪ್ರಶ್ನೆ ಪತ್ರಿಕೆಯನ್ನೂ ಪಡೆದುಕೊಂಡು ಅವರನ್ನು ಹೊರಗೆ ಕಳಿಸುವುದನ್ನು ಖಚಿತಪಡಿಸಿಕೊಳ್ಳಬೇಕು.
ಪರೀಕ್ಷಾ ಕೊಠಡಿಯಲ್ಲಿ ಗೋಡೆ ಗಡಿಯಾರ, ಶುದ್ಧ ಕುಡಿಯವ ನೀರಿನ ವ್ಯವಸ್ಥೆ ಮಾಡಬೇಕಿರುವ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವುದು ಸೇರಿದಂತೆ ಸುಲಲಿತ ಪರೀಕ್ಷೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆ ನೀಡಿದರು. ವಿಡಿಯೋ ಸಂವಾದದಲ್ಲಿ ಪದವಿ ಪೂರ್ವ ಇಲಾಖೆ ನಿರ್ದೇಶಕಿ ಸಿ.ಕನಗವಲ್ಲಿ, ಖಜಾನೆ ಇಲಾಖೆ ಆಯುಕ್ತ ಉಜ್ವಲ್ ಕುಮಾರ್ ಘೋಷ್ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.