Advertisement

ಅನುದಾನ ಲ್ಯಾಪ್ಸ್‌ ಆಗದಂತೆ ಎಚ್ಚರಿಕೆ ವಹಿಸಿ

11:47 AM Feb 12, 2020 | Suhan S |

ಬಾಗಲಕೋಟೆ: ನಿಗದಿತ ಅವಧಿಯಲ್ಲಿ ವಿವಿಧ ಇಲಾಖೆಯ ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುವಿಗಳಿಗೆ ತಲುಪಿಸಬೇಕು. ಪ್ರಸಕ್ತ ವರ್ಷ ಜಿಲ್ಲೆಗೆ ಬಂದಿರುವ ಅನುದಾನ ಸದ್ಬಳಕೆ ಮಾಡಿಕೊಳ್ಳುವ ಜತೆಗೆ ಅನುದಾನ ಮರಳಿ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಸೂಚಿಸಿದರು.

Advertisement

ಜಿಪಂ ಸಭಾಭವನದಲ್ಲಿ ಮಂಗಳವಾರ ಜರುಗಿದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಾರ್ಚ ಅಂತ್ಯದೊಳಗೆ ಎಲ್ಲ ಯೋಜನೆಗಳ ಗುರಿ ತಲುಪಬೇಕು. ಯಾವುದೇ ರೀತಿಯ ಅನುದಾನ ಲ್ಯಾಪ್ಸ್‌ ಆಗದಂತೆ ಚುರುಕಾಗಿ ಕಾರ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಆತ್ಮ ಯೋಜನೆ ಕಾರ್ಯಕ್ರಮಗಳ ಜಾಗೃತಿಗೆ ಗ್ರಾಮ ಮಟ್ಟದಲ್ಲಿ ಪ್ರಾಯೋಗಿಕವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಆಗ ಮಾತ್ರ ಯೋಜನೆಗಳ ಲಾಭ ರೈತರಿಗೆ ತಲುಪುತ್ತವೆ. ಈ ನಿಟ್ಟಿನಲ್ಲಿ ಕ್ರಮ ಜರುಗಿಸಲು ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಅವರಿಗೆ ಸೂಚಿಸಿದರು. ಜಿಲ್ಲೆಯಲ್ಲಿ ತೊಗರಿ ಖರೀದಿ ಪ್ರಕ್ರಿಯೆ ನಡೆದಿದ್ದು, ನೋಂದಣಿಗೆ ಅವಧಿಯನ್ನು ಸಹ ಫೆ. 25ರವರೆಗೆ ವಿಸ್ತರಿಸಲಾಗಿದೆ. ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದ್ದು, ಸಮೀಕ್ಷೆ ಪ್ರಗತಿಯಲ್ಲಿರುವುದಾಗಿ ಕೃಷಿ ಜಂಟಿ ನಿರ್ದೇಶಕಿ ಚೇತನಾ ಸಭೆಗೆ ತಿಳಿಸಿದರು.

ಶಾಲೆಗಳಿಗೆ ತೆಂಗು-ಸೀತಾಫಲ ಸಸಿ: ತೋಟಗಾರಿಕೆ ಇಲಾಖೆಯಿಂದ ಬರುವ ಜೂನ್‌ ಮಾಹೆಯಲ್ಲಿ ಜಿಲ್ಲೆಯ ಆಯ್ದ ಶಾಲೆಗಳಲ್ಲಿ ತೆಂಗು, ಚಿಕ್ಕು ಹಾಗೂ ಸೀತಾಫಲ ಸಸಿ ವಿತರಿಸುವ ಕೆಲಸವಾಗಬೇಕು. ಶಾಲಾವಾರು ಎಷ್ಟು ಸಸಿಗಳು ಬೇಡಿಕೆಯ ಪಟ್ಟಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಂದ ಪಡೆದು ವಿತರಿಸುವ ಕಾರ್ಯವಾಗಬೇಕು. ವಿತರಿಸಿದ ಸಸಿಗಳನ್ನು ನೆಟ್ಟು ಪೋಷಿಸುವಂತೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ನಿರ್ದೇಶನ ನೀಡಲು ಡಿಡಿಪಿಐ ಅವರಿಗೆ ತಿಳಿಸಿದರು. ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಲ್ಲಿ ಶೇ. 83.43ಸಾಧನೆ ಮಾಡಿರುವುದಾಗಿ ತೋಟಗಾರಿಕೆ ಉಪ ನಿರ್ದೇಶಕ ಪ್ರಭುರಾಜ ಹಿರೇಮಠ ತಿಳಿಸಿದರು.

ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮಾತನಾಡಿ, ಪ್ರಸಕ್ತ ಸಾಲಿಗೆ ಒಟ್ಟು 742.198 ಹೆಕ್ಟೇರ್‌ ಪ್ರದೇಶದಲ್ಲಿ 4.38 ಲಕ್ಷ ವಿವಿಧ ಸಸಿ ಬೆಳೆಸಲಾಗಿದೆ. ಮುಂದಿನ ವರ್ಷದ ಮಳೆಗಾಲದಲ್ಲಿ ವಿತರಿಸಲು 5.64 ಲಕ್ಷ ಸಸಿ ಬೆಳೆಸಲಾಗುತ್ತಿದೆ ಎಂದು ತಿಳಿಸಿದ್ದು, ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಎಸ್‌.ಪಿ. ಹುಲ್ಲೊಳ್ಳಿ ಅವರು ಬಿಡುಗಡೆಯಾದ 68 ಲಕ್ಷ ರೂ. ಪೈಕಿ 57.80 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.

Advertisement

ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಜಿಲ್ಲೆಗೆ 77 ಕೋಟಿ ರೂ.ಗಳ ಪೈಕಿ 22 ಕೋಟಿ ರೂ. ಖರ್ಚು ಮಾಡಲಾಗಿದೆ. ಟೆಂಡರ ಪ್ರಕ್ರಿಯೆ ವಿಳಂಬದ ಹಿನ್ನಲೆಯಲ್ಲಿ ಸಾಧನೆ ಕಡಿಮೆಯಾಗಿರುವುದಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರರು ಸಭೆಗೆ ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಅನಂತ ದೇಸಾಯಿ ಮಾತನಾಡಿ, ಜಿಲ್ಲೆಯಲ್ಲಿ ಎರಡು ಮಕ್ಕಳ ಸೂತ್ರದಡಿ ಈಗಾಗಲೇ ಜಿಲ್ಲೆಯಲ್ಲಿ ಬಾಗಲಕೋಟೆ ಮತ್ತು ಮುಧೋಳದಲ್ಲಿ ತಲಾ 6 ಜನರಿಗೆ ಸಂತಾನಹರಣ ಹರಣ ಚಿಕಿತ್ಸೆ ಮಾಡಲಾಗಿದ್ದು, ಮಾರ್ಚ್‌ ಅಂತ್ಯಕ್ಕೆ ಉಳಿದ ತಾಲೂಕುಗಳಲ್ಲಿ ಯೋಜನೆ ಅನುಷ್ಠಾನಗೊಳಿಸುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಿಂದ ಕಡಿವಾಲ ಗ್ರಾಮದ 500 ಕೋಳಿಗಳು ಸತ್ತು ಹೋಗಿವೆ. ಆದರೂ ಅವರಿಗೆ ಪರಿಹಾರ ನೀಡಿಲ್ಲ. ಈ ಬಗ್ಗೆ ಕ್ರಮಕೈಗೊಳ್ಳುವಂತೆ ಪಶು ಇಲಾಖೆಯ ಅಧಿಕಾರಿಗಳಿಗೆ ಜಿಪಂ ಅಧ್ಯಕ್ಷರು ಸೂಚಿಸಿದರು. ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಕುಡಿಯುವ ನೀರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಪಶು ಇಲಾಖೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ಇತರೆ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

ಜಿಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಹಾಂತೇಶ ಉದಪುಡಿ, ಬಸವರಾಜ ಖೋತ, ಸಿಇಒ ಗಂಗೂಬಾಯಿ ಮಾನಕರ, ಉಪ ಕಾರ್ಯದರ್ಶಿ ಎ.ಜಿ. ತೋಟದ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next